- ಉತ್ತರಪ್ರದೇಶದ 'ಹತ್ರಾಸ್' ಜಿಲ್ಲೆಯಲ್ಲಿ ನೂತನ ಹಾಲು ಸಂಸ್ಕರಣಾ ಘಟಕ - ಮಾರ್ಚ್16ರಿಂದ ನಂದಿನಿ ಹಾಲು-ಮೊಸರು ಮಾರಾಟಕ್ಕೆ ಅಗತ್ಯ ಕ್ರಮ
ದೆಹಲಿ ಮಾರುಕಟ್ಟೆಗೆ ಕಾಲಿಟ್ಟಿರುವ ಕನ್ನಡಿಗರ ಹೆಮ್ಮೆಯ ಹಾಲಿನ ಬ್ರ್ಯಾಂಡ್ ‘ನಂದಿನಿ’ ಈಗ ಉತ್ತರ ಭಾರತದ ಆಗ್ರಾ, ಮಥುರಾ, ಮೀರತ್ ಹಾಗೂ ಅಲಿಗರ್ ಪ್ರದೇಶಗಳಲ್ಲೂ ಹಾಲು-ಮೊಸರು ಮಾರಾಟವನ್ನು ಪ್ರಾರಂಭಿಸಲು ಸಜ್ಜಾಗಿದೆ.
ಉತ್ತರಪ್ರದೇಶದ ‘ಹತ್ರಾಸ್’ ಜಿಲ್ಲೆಯಲ್ಲಿ ನೂತನ ಹಾಲು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಮುಂದಾಗಿದೆ.
ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ 2024 ನವೆಂಬರ್ 11ರಂದು ‘ನಂದಿನಿ’ ಹಾಲು ಮಾರಾಟಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆ ಮೂಲಕ ಉತ್ತರ ಭಾರತಕ್ಕೆ ನಂದಿನಿ ಕಾಲಿಟ್ಟಿತ್ತು. ಈಗ ನಾಲ್ಕು ತಿಂಗಳಲ್ಲೇ ಉತ್ತರ ಭಾರತದಲ್ಲಿ ಮಾರುಕಟ್ಟೆಯನ್ನು ಹಂತ ಹಂತವಾಗಿ ‘ನಂದಿನಿ’ ವಿಸ್ತರಿಸುತ್ತಿದೆ.
ಉತ್ತರಪ್ರದೇಶದ ‘ಹತ್ರಾಸ್’ ಜಿಲ್ಲೆಯಲ್ಲಿ ಹಾಲು ಸಂಸ್ಕರಣಾ ಘಟಕವನ್ನು ತೆರೆಯಲು ಸ್ಥಳ ಗುರುತಿಸಲಾಗಿದ್ದು, ಆಗ್ರಾ, ಮಥುರಾ, ಮೀರತ್, ಅಲಿಗರ್ ಪ್ರದೇಶಗಳಲ್ಲಿ ನಂದಿನಿ ಹಾಲು ಮಾರಾಟವನ್ನು ಪ್ರಾರಂಭಿಸುವ ಸಂಬಂಧ ಅಲ್ಲಿನ ಮಾರಾಟಗಾರರೊಂದಿಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಅವರು ಬುಧವಾರ (ಮಾ.5) ಸಭೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ನಂದಿನಿ’ ಮೇಲೆ ಮತ್ತೆ ಅಮುಲ್ ಆಕ್ರಮಣ – ದರ ಸಮರ ತಂತ್ರ!
“ಮಾ.16ರಿಂದ ನಂದಿನಿ ಹಾಲು ಮತ್ತು ಮೊಸರು ಮಾರಾಟಕ್ಕೆ ಎಲ್ಲಾ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ರಾಜಸ್ಥಾನದ ಜೈಪುರ್‌ನಲ್ಲಿ ಸಹ ಈ ಮಾಹೆಯಲ್ಲಿಯೇ ಹಾಲು ಮಾರಾಟ ಪ್ರಾರಂಭಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ” ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಅವರು ‘ಈ ದಿನ.ಕಾಂ‘ ತಿಳಿಸಿದ್ದಾರೆ.
“ಕೆಎಂಎಫ್ ಸಂಸ್ಥೆಯು ‘ನಂದಿನಿ’ ಬ್ರಾಂಡ್‌ನ ಉತ್ಪನ್ನಗಳ ಮಾರಾಟವನ್ನು ಕರ್ನಾಟಕ ರಾಜ್ಯಕ್ಕೆ ಮಾತ್ರ ಸಿಮೀತಗೊಳಿಸದೇ ಹೊರರಾಜ್ಯ ಹಾಗೂ ಹೊರದೇಶಗಳಲ್ಲಿಯೂ ಸಹ ಮಾರಾಟ ಜಾಲವನ್ನು ವಿಸ್ತರಿಸುತ್ತ ಹೋಗುತ್ತಿದೆ. ಮಹಾರಾಷ್ಟ್ರದ ಮುಂಬೈ, ನಾಗಪುರ, ಪುಣೆ, ಸೋಲಾಪುರ, ಗೋವಾ, ಹೈದರಾಬಾದ್, ಚೆನ್ನೈ ಹಾಗೂ ಕೇರಳ ರಾಜ್ಯದಲ್ಲಿ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಈಗ, ದೆಹಲಿಗೆ ಪ್ರವೇಶಿಸುವ ಮೂಲಕ ಉತ್ತರ ಭಾರತದ ಮಾರುಕಟ್ಟೆಯನ್ನು ಮುಟ್ಟಿದ್ದೇವೆ. ಹೊಸ ಸಂಸ್ಕರಣಾ ಘಟಕದ ಮೂಲಕ ಸುತ್ತಮುತ್ತಲಿನ ನಗರಗಳಿಗೆ ಹಾಲು ಮಾರಾಟ ಜಾಲ ವಿಸ್ತರಣೆಯಾಗುತ್ತಿದೆ” ಎಂದು ಮಾಹಿತಿ ನೀಡಿದರು.

ಹೈನೋದ್ಯಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸಂಸ್ಥೆಯು ರಾಷ್ಟ್ರದಲ್ಲಿಯೇ ಎರಡನೇಯ ದೊಡ್ಡ ಹಾಲು ಸಹಕಾರ ಸಂಸ್ಥೆಯಾಗಿದೆ. ಕೆಎಂಎಫ್ ಸಂಸ್ಥೆಯು ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ 26 ಲಕ್ಷಕ್ಕೂ ಹೆಚ್ಚಿನ ಹೈನುಗಾರ ರೈತರಿಂದ ಹಾಲನ್ನು ಖರೀದಿಸಿ. ಸಂಸ್ಕರಿಸಿ ‘ಗೋವಿನಿಂದ ಗ್ರಾಹಕರವರೆಗೆ’ ಎಂಬ ಶೀರ್ಷಿಕೆಯನ್ನು ಹೊತ್ತು ‘ನಂದಿನಿ’ ಬ್ರ್ಯಾಂಡ್ ಅಡಿಯಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಕಳೆದ 05 ದಶಕಗಳಿಂದ ಮಾರಾಟ ಮಾಡಲಾಗುತ್ತಿದೆ.