ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ 36 ಗಂಟೆಗಳು ಕಳೆದಿದೆ. ಆದರೆ ಇನ್ನೂ ಕೂಡಾ ಹಲವು ಮಂದಿಗೆ ಕುಟುಂಬಸ್ಥರು ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ. ಜೀತೇಂದ್ರ ಸಾಹು ಎಂಬವರು ಇನ್ನೂ ಕೂಡಾ ತನ್ನ 70 ವರ್ಷ ಪ್ರಾಯದ ಅತ್ತೆ ಶಾಕುಂತಲಾ ದೇವಿಯ ಹುಡುಕಾಟದಲ್ಲಿಯೇ ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
15 ಭಕ್ತರ ಜೊತೆಗೆ ಮಹಾ ಕುಂಭಮೇಳಕ್ಕೆ ಶಾಕುಂತಲಾ ಅವರು ಬಂದಿದ್ದರು ಎನ್ನಲಾಗಿದೆ. ಆದರೆ ಕಾಲ್ತುಳಿತ ಸಂಭವಿಸಿದಾಗಿನಿಂದ ನಾಪತ್ತೆಯಾಗಿದ್ದಾರೆ. ಮೊಬೈಲ್ ಫೋನ್ ಕೂಡಾ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಜಿತೇಂದ್ರ ಸಾಹು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾ ಕುಂಭಮೇಳವೆಂಬ ಸನಾತನ ಗರ್ವ, ಕಾಲ್ತುಳಿತದ ಪರ್ವ
ಮಹಾ ಕುಂಭಮೇಳದಲ್ಲಿ ಜನವರಿ 29ರಂದು ಕಾಲ್ತುಳಿತ ಉಂಟಾಗಿದ್ದು ಸುಮಾರು 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಕೆಲವರು ತಮ್ಮ ಕುಟುಂಬಸ್ಥರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವರು ಕುಟುಂಬಸ್ಥರ ಹುಡುಕಾಟದಲ್ಲಿಯೇ ತೊಡಗಿದ್ದಾರೆ.
ಫೂಲಿ ನಿಶಾದ್ ಎಂಬ ಹಮೀರ್‌ಪುರದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಆಕೆಯ ಪುತ್ರ ರಾಜೇಶ್ ನಿಶಾದ್ ಹೇಳಿದ್ದಾರೆ. “ನನ್ನ ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಹೋಗಿದ್ದರು. ಆದರೆ ನನ್ನ ತಾಯಿ ಅಂದಿನಿಂದ ನಾಪತ್ತೆಯಾಗಿದ್ದಾರೆ. ಇನ್ನೂ ಕೂಡಾ ಪತ್ತೆಯಾಗಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ ಕಾಲ್ತುಳಿತ | ವಿವಿಐಪಿ ಪಾಸ್ ರದ್ದು, ವಾಹನ ಸಂಚಾರ ನಿಷೇಧ
ಇನ್ನು ತನ್ನ ಕುಟುಂಬಸ್ಥರೊಂದಿಗೆ ಮಹಾ ಕುಂಭಮೇಳಕ್ಕೆ ಹೋಗಿದ್ದ ಮಾಯಾ ಸಿಂಗ್ ಎಂಬವರು ಕೂಡಾ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಕೆಲವರು ತಮ್ಮ ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ. ಮಂಗಳವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ರೇಣು ಲತಾ ಎಂಬವರು ಗುರುವಾರ ಪತ್ತೆಯಾಗಿದ್ದಾರೆ.
ಬುಧವಾರದವರೆಗೆ ನೂರಾರು ಜನರು ಕೇಂದ್ರದಲ್ಲಿ ಕಂಡುಬಂದಿದ್ದಾರೆ. ನಾಪತ್ತೆಯಾದ ತಮ್ಮ ಪ್ರೀತಿ ಪಾತ್ರರ ಬಗ್ಗೆ ವರದಿ ದಾಖಲಿಸಲು ನೂರಾರು ಜನ ಕೇಂದ್ರಕ್ಕೆ ಧಾವಿಸಿದ್ದಾರೆ ಎಂದು ಹೇಳಲಾಗಿದೆ.
