ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆ (ಸಿ-ಸೆಕ್ಷನ್) ನಂತರ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಐವರು ಬಾಣಂತಿಯರ ಕುಟುಂಬಗಳೊಂದಿಗೆ ಕೋಟಾ ಜಿಲ್ಲಾಡಳಿತ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಅಧಿಕಾರಿಗಳು ಗುರುವಾರ ಲಿಖಿತ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ, ಮಹಿಳೆಯರಿಗೆ ಉಚಿತ ಚಿಕಿತ್ಸೆ, ಆದ್ಯತೆಯ ಮೇರೆಗೆ ಡಯಾಲಿಸಿಸ್, ತ್ವರಿತ ಕಿಡ್ನಿ ಕಸಿ ಹಾಗೂ ತಲಾ ₹2 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ.
ಮೇ 5 ರಿಂದ 7 ರ ನಡುವೆ ಕೋಟಾದ ನ್ಯೂ ಮೆಡಿಕಲ್ ಕಾಲೇಜಿನಲ್ಲಿ ಈ ಐವರು ಮಹಿಳೆಯರಿಗೆ ಸಿ-ಸೆಕ್ಷನ್ ಮಾಡಲಾಗಿತ್ತು ಮತ್ತು ಅಂದಿನಿಂದ ಅವರು ಆಸ್ಪತ್ರೆಯಲ್ಲೇ ಉಳಿದಿದ್ದಾರೆ. ತುರ್ತು ಅಂಗಾಂಗ ಕಸಿಗೆ ಮಧ್ಯಪ್ರವೇಶಿಸುವಂತೆ ಅಥವಾ “ದಯಾಮರಣಕ್ಕೆ ಅವಕಾಶ ನೀಡುವಂತೆ” ಕೋರಿ ಈ ಮಹಿಳೆಯರು ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದರು. ಪ್ರಸ್ತುತ ಇವರು ಕೋಟಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೆಫ್ರಾಲಜಿ ವಾರ್ಡ್ನಲ್ಲಿ ದಾಖಲಾಗಿದ್ದಾರೆ.
ಜಿಲ್ಲಾಡಳಿತ ಸಹಿ ಮಾಡಿರುವ ಒಪ್ಪಂದದ ಅನ್ವಯ, ಮಹಿಳೆಯರಿಗೆ ಡಯಾಲಿಸಿಸ್ ಮತ್ತು ಇತರ ಎಲ್ಲ ವೈದ್ಯಕೀಯ ಚಿಕಿತ್ಸೆಗಳನ್ನು ಉಚಿತವಾಗಿ ಮತ್ತು ಆದ್ಯತೆಯ ಮೇರೆಗೆ ಒದಗಿಸಲಾಗುತ್ತದೆ. ‘ಕ್ಯಾಡೆವರ್’ ಕಿಡ್ನಿ ಕಸಿ ಕಾಯುವಿಕೆ ಪಟ್ಟಿಯಲ್ಲಿ ಈ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಮತ್ತು ಕುಟುಂಬದಲ್ಲಿ ಅರ್ಹ ಜೀವಂತ ದಾನಿಗಳಿದ್ದರೆ ಆದ್ಯತೆಯ ಮೇರೆಗೆ ಉಚಿತವಾಗಿ ಕಸಿ ಮಾಡಲಾಗುವುದು. ಕುಟುಂಬದ ಒಪ್ಪಿಗೆಯ ಮೇರೆಗೆ ಏಮ್ಸ್ ಜೋಧ್ಪುರ ಸೇರಿದಂತೆ ರಾಜಸ್ಥಾನದ ಯಾವುದೇ ಸರ್ಕಾರಿ ವೈದ್ಯಕೀಯ ಸಂಸ್ಥೆಯಲ್ಲಿ ಉಚಿತವಾಗಿ ಕಿಡ್ನಿ ಕಸಿ ಮಾಡಬಹುದು ಹಾಗೂ ಕಸಿ ನಂತರದ ಚಿಕಿತ್ಸೆ ಮತ್ತು ಆರೈಕೆಯನ್ನೂ ಉಚಿತವಾಗಿ ಒದಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಕೋಟಾದಲ್ಲಿ ತಾಯಂದಿರ ಆರೋಗ್ಯ ಬಿಕ್ಕಟ್ಟು ತಲೆದೋರಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿ-ಸೆಕ್ಷನ್ಗೆ ಒಳಗಾದ ಹಲವಾರು ಮಹಿಳೆಯರು ಮೂತ್ರಪಿಂಡ ಸಂಬಂಧಿ ತೊಂದರೆಗಳಿಗೆ ಸಿಲುಕಿದ್ದಾರೆ. ಎರಡು ತಿಂಗಳ ಹಿಂದೆ ಇಂತಹ ಐವರು ಮಹಿಳೆಯರು ಸಾವನ್ನಪ್ಪಿದಾಗ ಮತ್ತು ಹಲವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದಾಗ ಈ ಬಿಕ್ಕಟ್ಟು ಬೆಳಕಿಗೆ ಬಂದಿತ್ತು.
ರಾಜಸ್ಥಾನದ ಭಿಲ್ವಾರಾ ಮತ್ತು ಬನ್ಸ್ವಾರಾ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ ಸ್ತ್ರೀರೋಗ ವಾರ್ಡ್ಗಳಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ನಂತರ ಒಂದು ವಾರದಲ್ಲಿ ಎಂಟು ಮಹಿಳೆಯರು ಮತ್ತು ಓರ್ವ ಅಪ್ರಾಪ್ತ ಬಾಲಕಿ ಸಾವನ್ನಪ್ಪಿರುವ ವರದಿಗಳ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜಸ್ಥಾನ ಸರ್ಕಾರಕ್ಕೆ ಗುರುವಾರ ನೋಟಿಸ್ ಜಾರಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಭಿಲ್ವಾರಾ ಜಿಲ್ಲೆಯ ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ಐವರು ಹಾಗೂ ಬನ್ಸ್ವಾರಾ ಜಿಲ್ಲಾ ಆಸ್ಪತ್ರೆಯಲ್ಲಿ ಮೂವರು ಮಹಿಳೆಯರು ಮತ್ತು ಓರ್ವ ಅಪ್ರಾಪ್ತ ಬಾಲಕಿ ಮೃತಪಟ್ಟಿದ್ದಾರೆ. ಈ ವಿಚಾರವಾಗಿ ಎರಡು ವಾರಗಳಲ್ಲಿ ವಿವರವಾದ ವರದಿ ನೀಡುವಂತೆ ಆಯೋಗವು ಸೂಚಿಸಿದೆ.





