ಪತ್ನಿಯನ್ನು ಸುಟ್ಟು ಕೊಂದಿದ್ದಾನೆಂಬ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, 12 ವರ್ಷ ಜೈಲುವಾಸ ಅನುಭವಿಸಿದ ಬಳಿಕ, ತಮಿಳುನಾಡಿನ ವ್ಯಕ್ತಿಯನ್ನು ನಿರ್ದೋಷಿ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಆತನನ್ನು ಪ್ರಕರಣದಿಂದ ಖುಲಾಲೆಗೊಳಿಸಿ ತೀರ್ಪು ನೀಡಿದೆ. ಮೃತ ಮಹಿಳೆಯು ಸಾವನ್ನಪ್ಪಿದ ಸಮಯದಲ್ಲಿ ನೀಡಿದ್ದ ಹೇಳಿಕೆಗಳು ಅಸಂತವಾಗಿವೆ ಎಂಬ ಅಭಿಪ್ರಾಯದ ಮೇಲೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ತಮಿಳುನಾಡಿನಲ್ಲಿ, ಸುಮಾರು 13 ವರ್ಷಗಳ ಹಿಂದೆ ಮಹಿಳೆಯೊಬ್ಬರು ಬೆಂಕಿ ಹೊತ್ತಿಕೊಂಡು ಸಾವನ್ನಪ್ಪಿದ್ದರು. ಗಂಭೀರ ಸುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಕೆ ಸಾವನ್ನಪ್ಪುವುದಕ್ಕೂ ಮುನ್ನ, ಹೇಳಿಕೆಗಳನ್ನು ನೀಡಿದ್ದರು. ಆದರೆ, ಆಕೆ ಎರಡು ರೀತಿಯ ಹೇಳಿಕೆ ನೀಡಿದ್ದರಿಂದ, ಮಹಿಳೆಯ ಹೇಳಿಕೆಯಲ್ಲಿ ವಿರೋಧಾಭಾಸಗಳಿದ್ದವು.
ಮೃತ ಮಹಿಳೆ ತನ್ನ ಮೊದಲ ಹೇಳಿಕೆಯಲ್ಲಿ ತನ್ನ ಗಂಡನ ವಿರುದ್ಧ ಯಾವುದೇ ಆರೋಪ ಮಾಡಿರಲಿಲ್ಲ. ಬದಲಾಗಿ, ಅಡುಗೆ ಮಾಡುವಾಗ ತನಗೆ ಅರಿವಿಲ್ಲದೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಹೇಳಿದ್ದರು. ಆದರೆ, ಎರಡನೇ ಹೇಳಿಕೆಯಲ್ಲಿ ತನ್ನ ಪತಿಯೇ ತಮಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಿದ್ದರು. ಇನ್ನು, ಆಕೆಗೆ ಚಿಕಿತ್ಸೆ ನೀಡಿದ್ದ ಮತ್ತು ಪರೀಕ್ಷಿಸಿದ್ದ ವೈದ್ಯರು, ‘ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಾಗ ಆಕೆಯ ದೇಹದಿಂದ ಸೀಮೆಎಣ್ಣೆ ವಾಸನೆ ಬರುತ್ತಿರಲಿಲ್ಲ’ ಎಂದು ಹೇಳಿದ್ದರು. ವೈದ್ಯರ ವರದಿಯು ಮಹಿಳೆಯ 2ನೇ ಹೇಳಿಕೆಗೆ ಪೂರಕವಾಗಿ ಇರಲಿಲ್ಲ.
ಆ ಕಾರಣಕ್ಕಾಗಿ, ಮಹಿಳೆಯ ಹೇಳಿಕೆಗಳು ಅಸಂತವಾಗಿವೆ ಮತ್ತು ಆಕೆಯ ಪತಿಯೇ ಅಪರಾಧ ಎಸಗಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಬೇರೆ ಯಾವುದೇ ಪುರಾವೆಗಳಿಲ್ಲ ಎಂಬುದನ್ನು ಗಮನಿಸಿದರುವ ಸುಪ್ರೀಂ ಕೋರ್ಟ್, ಆರೋಪಿ ಪತಿಯನ್ನು ಆರೋಪಮುಕ್ತ ಎಂದು ಘೋಷಿಸಿದೆ.
ಈ ವರದಿ ಓದಿದ್ದೀರಾ?: ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮೂಲಭೂತ ಹಕ್ಕು; ಲಿಂಗತ್ವ ಅಲ್ಪಸಂಖ್ಯಾತ ಮಗುವಿಗೆ ಇಲ್ಲವೇ?
“ಮೃತ ಮಹಿಳೆಯು ಮರಣಕ್ಕೂ ಮುನ್ನ ನೀಡಿದ ಹೇಳಿಕೆಗಳಲ್ಲಿ ಪ್ರಮುಖ ವಿರೋಧಾಭಾಸಗಳಿದ್ದರೆ ಮತ್ತು ಆರೋಪಿ ವಿರುದ್ಧ ಯಾವುದೇ ಗಣನೀಯ ಪುರಾವೆಗಳು ಇಲ್ಲದಿದ್ದರೆ ಶಿಕ್ಷೆ ವಿಧಿಸಲಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಹೇಳಿದೆ.
“ಮರಣಕ್ಕೂ ಮುನ್ನ ನೀಡುವ ಹೇಳಿಕೆಗಳು ಅನುಮಾನದಿಂದ ಕೂಡಿದ್ದರೆ ಅಥವಾ ಅಸಮಂಜಸವಾಗಿದ್ದರೆ ಯಾವ ಹೇಳಿಕೆಯನ್ನು ನಂಬಬೇಕು ಎಂಬುದನ್ನು ಗುರುತಿಸಲು ನ್ಯಾಯಾಲಯಗಳು ದೃಢೀಕರಣ ಪುರಾವೆಗಳನ್ನು ಹುಡುಕಬೇಕಾಗುತ್ತದೆ. ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ. ಈ ಪ್ರಕರಣವೂ ಅಂತಹದ್ದೇ ಪ್ರಕರಣವಾಗಿದೆ. ಪ್ರಕರಣದಲ್ಲಿ, ಮೃತ ಮಹಿಳೆ ಎರಡು ಹೇಳಿಕೆಗಳನ್ನು ನೀಡಿದ್ದಾರೆ. ಎರಡೂ ವಿಭಿನ್ನವಾಗಿವೆ. ವಿಭಿನ್ನ ಹೇಳಿಕೆಗಳ ಆಧಾರದ ಮೇಲೆ ಮೇಲ್ಮನವಿದಾರನನ್ನು ತಪ್ಪಿತಸ್ಥನೆಂದು ಘೋಷಿಸಲಾಗದು” ಎಂದು ಪೀಠ ಹೇಳಿದೆ. ಮದ್ರಾಸ್ ಹೈಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದ್ದು, ಆರೋಪಿಯನ್ನು ಖುಲಾಸೆಗೊಳಿಸಿದೆ.