ಪತಂಜಲಿ ಆಯುರ್ವೇದ್ ಲಿಮಿಟೆಡ್ ವಿರುದ್ಧ ದಾರಿತಪ್ಪಿಸುವ ಜಾಹೀರಾತು ಪ್ರಕರಣ ದಾಖಲಾಗಿದ್ದು, ಸುಪ್ರೀಂ ಕೋರ್ಟ್ ನಿರಂತರವಾಗಿ ಬಾಬಾ ರಾಮ್‌ದೇವ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ಈ ನಡುವೆ ಸುಪ್ರೀಂ ಕೋರ್ಟ್‌ನ ನಿರ್ದೇಶನ ಪಾಲಿಸದ ಕಾರಣ ಯೋಗ ಗುರು ರಾಮ್‌ದೇವ್ ಮತ್ತು ಅವರ ಸಹಾಯಕ ಬಾಲಕೃಷ್ಣ ಮತ್ತೆ ಪತ್ರಿಕೆಗಳಲ್ಲಿ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ.
ಇದು ಎರಡನೇ ಬಾರಿಗೆ ಪತಂಜಲಿ ಸಂಸ್ಥೆಯ ಕಡೆಯಿಂದ ದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿರುವ ಕ್ಷಮೆಯಾಚನೆ ಆಗಿದೆ. ನಿನ್ನೆಯಷ್ಟೇ (ಏಪ್ರಿಲ್ 23) “ಈ ಹಿಂದೆ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತು ಎಷ್ಟು ದೊಡ್ಡದಾಗಿ ಪ್ರಕಟಿಸಲಾಗಿದೆಯೋ ಅಷ್ಟೇ ದೊಡ್ಡದಾಗಿ ಕ್ಷಮೆಯಾಚನೆಯನ್ನು ಪ್ರಕಟಿಸಲಾಗಿದೆಯೇ” ಎಂದು ನ್ಯಾಯಾಲಯ ಪ್ರಶ್ನಿಸಿತ್ತು.
No one here is above the law🫡
The Unconditional public apology by Patanjali#PatanjaliCase pic.twitter.com/3zaCaGlDVW
— The Intellectual (@SonuGup90911518) April 24, 2024
ಇಂದು ಬೆಳಿಗ್ಗೆ ಪ್ರಕಟವಾದ ಜಾಹೀರಾತು ವೃತ್ತಪತ್ರಿಕೆ ಪುಟದ ನಾಲ್ಕನೇ ಒಂದು ಭಾಗವನ್ನು ಒಳಗೊಂಡಿದೆ ಮತ್ತು “ಬೇಷರತ್ತಾದ ಸಾರ್ವಜನಿಕ ಕ್ಷಮೆ” ಎಂದು ಶೀರ್ಷಿಕೆ ನೀಡಲಾಗಿದೆ. “ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಷಯದ ಹಿನ್ನೆಲೆಯಲ್ಲಿ (ರಿಟ್ ಅರ್ಜಿ ಸಿ. ನಂ. 645/2022), ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು / ಆದೇಶಗಳನ್ನು ಅನುಸರಣೆ ಮಾಡದ ಅಥವಾ ಅಸಹಕಾರ ಮಾಡಿದ ಕಾರಣಕ್ಕಾಗಿ ನಾವು ನಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮತ್ತು ಕಂಪನಿಯ ಪರವಾಗಿ ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ” ಎಂದು ಈ ಕ್ಷಮೆಯಾಚನೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ದಿನಪತ್ರಿಕೆಯಲ್ಲಿ ಕ್ಷಮಾಪಣೆಯನ್ನು ನಿಮ್ಮ ಜಾಹೀರಾತಿನಷ್ಟು ಗಾತ್ರದಲ್ಲೇ ಪ್ರಕಟಿಸಲಾಗಿದೆಯೇ: ರಾಮ್‌ದೇವ್‌ಗೆ ಸುಪ್ರೀಂ ತರಾಟೆ
ಹಾಗೆಯೇ, “22.11.2023 ರ ಸಭೆ/ಪತ್ರಿಕಾಗೋಷ್ಠಿಯನ್ನು ಕ್ಷಮೆ ಕೇಳಿದ್ದಕ್ಕಿಂತ ಅಧಿಕವಾಗಿ ನಾವು ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ. ನಮ್ಮ ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಮಾಡಿದ ತಪ್ಪಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಅಂತಹ ತಪ್ಪುಗಳು ಪುನರಾವರ್ತನೆ ಆಗುವುದಿಲ್ಲ ಎಂಬುದು ನಮ್ಮ ಸಂಪೂರ್ಣ ಬದ್ಧತೆಯಾಗಿದೆ” ಎಂದು ಹೇಳಲಾಗಿದೆ.
“ನಾವು ಗೌರವಾನ್ವಿತ ನ್ಯಾಯಾಲಯದ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಪಾಲಿಸುತ್ತೇವೆ. ನಾವು ನ್ಯಾಯಾಲಯದ ಘನತೆಯನ್ನು ಎತ್ತಿಹಿಡಿಯುತ್ತೇವೆ. ಪ್ರಾಮಾಣಿಕವಾಗಿ ಮಾನ್ಯ ನ್ಯಾಯಾಲಯದ/ಸಂಬಂಧಿತ ಅಧಿಕಾರಿಗಳ ನಿರ್ದೇಶನಗಳನ್ನು ಅನುಸರಿಸುತ್ತೇವೆ. ಪತಂಜಲಿ ಆಯುರ್ವೇದ್ ಲಿಮಿಟೆಡ್, ಬಾಲಕೃಷ್ಣ, ಸ್ವಾಮಿ ರಾಮ್‌ದೇವ್, ಹರಿದ್ವಾರ, ಉತ್ತರಾಖಂಡ” ಎಂದು ಕ್ಷಮೆಯಲ್ಲಿ ಉಲ್ಲೇಖಿಸಲಾಗಿದೆ.
ನಿನ್ನೆ ಪ್ರಕಟವಾದ ಜಾಹೀರಾತು ಚಿಕ್ಕದಾಗಿದ್ದು, ರಾಮದೇವ್ ಮತ್ತು ಬಾಲಕೃಷ್ಣ ಅವರ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿರಲಿಲ್ಲ.
ಇದನ್ನು ಓದಿದ್ದೀರಾ? ನೀವು ಅಷ್ಟೊಂದು ಮುಗ್ಧರೇನಲ್ಲ; ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ತಪರಾಕಿ
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠವು “ದಿನಪತ್ರಿಕೆಯಲ್ಲಿ ಕ್ಷಮಾಪಣೆಯನ್ನು ನಿಮ್ಮ ಜಾಹೀರಾತಿನಷ್ಟು ಗಾತ್ರದಲ್ಲೇ ಪ್ರಕಟಿಸಲಾಗಿದೆಯೇ” ಎಂದು ಪ್ರಶ್ನಿಸಿದೆ.
“ನೀವು ದಿನಪತ್ರಿಕೆಯಲ್ಲಿ ನೀಡಿದ ಕ್ಷಮಾಪಣೆಯನ್ನು ಕತ್ತರಿಸಿ ನೀವೇ ಇಟ್ಟುಕೊಳ್ಳಿ. ಅದನ್ನು ದೊಡ್ಡದಾಗಿಸಿ ಫೋಟೊಕಾಪಿ ಮಾಡಿಕೊಳ್ಳಿ. ಅದು ನಮ್ಮನ್ನು ಮೆಚ್ಚಿಸಲಾರದು. ನಾನು ಜಾಹೀರಾತಿನ ನಿಜವಾದ ಗಾತ್ರವನ್ನು ನೋಡಲು ಬಯಸುತ್ತೇನೆ” ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದ್ದಾರೆ.
ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 30 ರಂದು ನಡೆಯಲಿದೆ ಮತ್ತು ರಾಮ್‌ದೇವ್ ಮತ್ತು ಬಾಲಕೃಷ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.