ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ 22 ವರ್ಷದ ಅಗ್ನಿವೀರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆಗ್ರಾದ ವಾಯುಪಡೆ ನಿಲ್ದಾಣದಲ್ಲಿ ಸೆಂಟ್ರಿ ಕರ್ತವ್ಯದಲ್ಲಿದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಅಗ್ನಿವೀರನನ್ನು ಶ್ರೀಕಾಂತ್ ಕುಮಾರ್ ಚೌಧರಿ ಎಂದು ಗುರುತಿಸಲಾಗಿದೆ. ಶ್ರೀಕಾಂತ್ 2022ರಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) ಸೇರಿದ್ದರು.
ಶ್ರೀಕಾಂತ್ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾ ಮಂಡಳಿಯನ್ನು ರಚಿಸಲಾಗಿದೆ. ಐಎಎಫ್ ಅಧಿಕಾರಿಗಳು ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದು ಅಗ್ನಿವೀರನ ಪಾರ್ಥಿವ ಶರೀರವನ್ನು ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಶ್ರೀಕಾಂತ್ ಅವರ ಸ್ಥಳೀಯ ಗ್ರಾಮವಾದ ನಾರಾಯಣಪುರದಲ್ಲಿ ಗುರುವಾರ ಸಂಜೆ ಬಿಹಾರ ಘಟಕದ ಐಎಎಫ್ ಸಿಬ್ಬಂದಿ ಗೌರವ ವಂದನೆಯೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಇದನ್ನು ಓದಿದ್ದೀರಾ? ಮೃತ ಅಗ್ನಿವೀರರಿಗೆ ಪರಿಹಾರ | ಮೋದಿ ಸರ್ಕಾರ ಹೇಳುತ್ತಿರುವುದರಲ್ಲಿ ನಿಜವೆಷ್ಟು- ಸುಳ್ಳೆಷ್ಟು?
ಆಗ್ರಾದ ಐಎಎಫ್ ಸಂಕೀರ್ಣದಲ್ಲಿ ಸಿಬ್ಬಂದಿ ಕೊರತೆಯಿಂದ ರಜೆ ಸಿಗದೆ ಶ್ರೀಕಾಂತ್ ಬೇಸರಗೊಂಡಿದ್ದರು ಎಂದು ವರದಿಯಾಗಿದೆ.
ಶ್ರೀಕಾಂತ್ ಅವರ ಹಿರಿಯ ಸಹೋದರ ಸಿದ್ಧಾಂತ್ ಬುಧವಾರ ಆಗ್ರಾಕ್ಕೆ ಆಗಮಿಸಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ ಮತ್ತು ಶಹಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಅಮಿತ್ ಕುಮಾರ್ ಮಾನ್ ಹೇಳಿದ್ದಾರೆ.
“ನಮಗೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ. ಅವರ ಕುಟುಂಬ ಸದಸ್ಯರು ಇದುವರೆಗೆ ದೂರು ದಾಖಲಿಸಿಲ್ಲ. ಕುಟುಂಬ ಸದಸ್ಯರು ಶಹಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೆ ನಾವು ಆತ್ಮಹತ್ಯೆಯ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.