ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಹಿಮಾಂಶಿ ಶೆಲತ್ ಅವರನ್ನು ಆಯ್ಕೆ ಮಾಡಿದಾಗ, ಒಪ್ಪದವರು ಗುಜರಾತಿ ಮತ್ತು ಕನ್ನಡದ ಬಾಂಧವ್ಯವನ್ನು ಬಿಡಿಸಿಟ್ಟಾಗ, ಆ ಬಾಂಧವ್ಯ ಇನ್ನೂ ಆರು ದಶಕಗಳಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದಾಗ ಒಪ್ಪಿದರು, ಭಾಜನರಾದರು... ಅಗ್ರಹಾರ ಕೃಷ್ಣಮೂರ್ತಿಯವರ ಪರಿಚಯಾತ್ಮಕ ಬರೆಹ
ಯಾರನ್ನಾದರೂ ಸಭೆಗೆ ಪರಿಚಯಿಸುವ ಹೊತ್ತಿನಲ್ಲಿ ಅವರ ಡಾಕ್ಟರೇಟನ್ನೋ, ನಾಡೋಜ, ಪದ್ಮ ಮುಂತಾದ ಪದವಿಗಳಲ್ಲಿ ಯಾವುದಾದರೂ ಒಂದು ಬಿಟ್ಟು ಹೋದರೆ ಅಥವಾ ಮರೆತುಹೋದರೆ ತಪ್ಪು ತಿಳಿವಳಿಕೆ, ಅನಾಹುತಗಳು ಆಗುವ ಸಂಭವಗಳು ಇರುತ್ತವೆ.
ನಾನು ಪ್ರೊಫೆಸರ್ ಹಿಮಾಂಶಿ ಶೆಲತ್‌ರನ್ನ…. ಗುಜರಾತಿ ಸಂಪ್ರದಾಯದಲ್ಲೇ, ‘ಇವರೇ ಹಿಮಾಂಶಿ ಬೆನ್’ ಎಂದು ನಿಮಗೆ ತಿಳಿಸಿ ನನ್ನ ಪರಿಚಯದ ಮಾತುಗಳನ್ನ ಮುಕ್ತಾಯ ಮಾಡಿದರೆ ಶೆಲತ್ ಅವರಿಗೆ ಯಾವುದೇ ರೀತಿಯ ಬೇಸರವಾಗುವುದಿಲ್ಲ ಅನ್ನುವ ಭರವಸೆ ನನಗಿದೆ. ಅವರು ಅಷ್ಟು ಸರಳರು ಮತ್ತು ನಿಗರ್ವಿಯಾದ, ಘನವಾದ ಮಹಿಳೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನನಗೆ ವಹಿಸಿರುವ ಕೆಲಸ ಕೇವಲ ಔಪಚಾರಿಕ ಅಲ್ಲ; ಇದು ಪ್ರೀತಿ, ಗೌರವ ಮತ್ತು ಸಂತೋಷದ ಕೆಲಸ. ಯಾಕೆಂದರೆ ಶೆಲತ್ ಅವರು ಕನ್ನಡನಾಡಿನ ‘ಯುಗದ ಕವಿ, ಜಗದ ಕವಿ’ಯ ಹೆಸರಿನಲ್ಲಿ ಕೊಡಲಾಗುತ್ತಿರುವ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಆದ್ದರಿಂದ ಅವರ ಬಗ್ಗೆ ಕೆಲವು ಮಾತುಗಳು ಅನಿವಾರ್ಯವಾಗುತ್ತವೆ.
ಶೆಲತ್ ಅವರು ಗುಜರಾತಿನ ಸೂರತ್‌ನಲ್ಲಿ 8, ಜನವರಿ 1947 ಜನಿಸಿದರು. 1966ರಲ್ಲಿ ಪದವಿಯನ್ನು, 1968ರಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು ತಮ್ಮ ಸಾಹಿತ್ಯ ಕೃತಿಗಳನ್ನು ಕೇವಲ ಗುಜರಾತಿಯಲ್ಲೇ ಮಾಡಿದರು. ನಮ್ಮಲ್ಲೂ ಅನೇಕರು ಹೀಗೆ ಮಾಡಿರುವುದುಂಟು. 1981-82ರಲ್ಲಿ ವಿ.ಎಸ್. ನೈಪಾಲ್ ಅವರ ಕಾದಂಬರಿಗಳ ಬಗ್ಗೆ ಅಧ್ಯಯನ ಮಾಡಿ ಪಿಹೆಚ್.ಡಿ ಪಡೆದರು. ನೈಪಾಲ್ ಅವರಿಗೆ 2001ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಬಹುಮಾನ ಬರುತ್ತದೆ. ಅಂಥ ಪ್ರತಿಷ್ಠಿತ ಬಹುಮಾನ ಬರೋದಕ್ಕಿಂತ ಸುಮಾರು ಎರಡು ದಶಕಗಳ ಹಿಂದೆಯೇ ಅವರ ಸಾಹಿತ್ಯಕ ಮೌಲ್ಯವನ್ನ ಶೆಲತ್ ಮಾಡಿರುತ್ತಾರೆ. ಇದು ಅವರ ಸಾಹಿತ್ಯಗ್ರಹಿಕೆಯ ಸಾಮರ್ಥ್ಯವನ್ನ ಸೂಚಿಸುತ್ತೆ ಅನ್ನಬಹುದು.
ಒಂದು ಶತಮಾನದಷ್ಟು ಹಿಂದೆ ಸ್ಥಾಪನೆಗೊಂಡ, ಸೂರತ್‌ನ ಎಂಟಿಬಿ ಆರ್ಟ್ಸ್ ಕಾಲೇಜಿನಲ್ಲಿ, ಸುಮಾರು 26 ವರ್ಷಗಳ ಕಾಲ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯವನ್ನ ಬೋಧನೆ ಮಾಡಿದವರು. ಆ ವೇಳೆಗಾಗಲೆ ಶಿಕ್ಷಣ ಕ್ಷೇತ್ರದ ಗುಣಮಟ್ಟ ಅವನತಿಯಾಗುತ್ತಿದ್ದು, ಸಾಹಿತ್ಯದ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿದ್ದ ಅಸಡ್ಡೆಯ ಕಾರಣಗಳಿಂದ 1994ರಲ್ಲಿ ಸ್ವಯಂ ನಿವೃತ್ತಿ ಪಡೆದರು. ತಮಗೆ ಆಸಕ್ತಿಯಿದ್ದ ಸಮಾಜ ಸೇಮಾ ವಲಯವನ್ನು ಆಯ್ಕೆ ಮಾಡಿಕೊಂಡು ಆ ಕ್ಷೇತ್ರದಲ್ಲೇ ಅಪಾರ ಯಶಸ್ಸನ್ನು ಕಂಡರು.
ಶೆಲತ್‌ರ ಅಜ್ಜ ಕಾಳಿದಾಸ ಶೆಲತ್ ಒಳ್ಳೆಯ ವಿದ್ವಾಂಸರು ಮತ್ತು ಪ್ರಸಿದ್ಧ ಪತ್ರಕರ್ತರಾಗಿದ್ದರು. ಅವರ ತಾಯಿ ಸುಧಾ ಶೆಲತ್ ಓದುವುದರಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಅವರಿಬ್ಬರೂ ಇವರ ಮೇಲೆ ಪ್ರಭಾವ ಬೀರಿದ್ದಾರೆ. ಇವರು ಬಾಲ್ಯದಲ್ಲಿ ಚಿತ್ರಕಲೆಯಲ್ಲೂ ಆಸಕ್ತಿಯಿರಿಸಿಕೊಂಡಿದ್ದವರು. ಇವರು ವಿನೋದ್ ಮೇಘಾನಿಯವನ್ನು ವಿವಾಹವಾದರು. ಅವರೊಬ್ಬ ಪ್ರಸಿದ್ಧ ಅನುವಾದಕರು, ಲೇಖಕರೂ ಆಗಿದ್ದರು. ಅನೇಕ ಗುಜರಾತಿ ಕೃತಿಗಳನ್ನ ಅವರು ಇಂಗ್ಲಿಷಿಗೆ ಅನುವಾದ ಮಾಡಿದವರು. ಅವುಗಳಲ್ಲಿ ಗುಜರಾತಿಯ ಕ್ಲಾಸಿಕ್ ಕೃತಿಗಳಲ್ಲಿ ಒಂದಾದ ಗೋವರ್ಧನ್ ರಾಮ್ ಅವರ ‘ಸರಸ್ವತಿಚಂದ್ರ’ ಕೂಡ ಒಂದಾಗಿದೆ. ಇವರ ಬಗ್ಗೆ ಹೇಳುವಾಗ ಇವರ ತಂದೆಯವರ ಬಗ್ಗೆಯೂ- ಅಂದರೆ ಹಿಮಾಂಶಿ ಶೆಲತ್ ಅವರ ಮಾವನವರ ಬಗ್ಗೆಯೂ ಹೇಳಬೇಕಾಗುತ್ತೆ. ಅವರ ಹೆಸರು ಝವೇರ್ ಚಂದ್ ಮೇಘಾಣಿ. ನೂರಕ್ಕೂ ಹೆಚ್ಚು ಗ್ರಂಥಗಳನ್ನ ರಚಿಸಿದ್ದ ಅವರು ಗುಜರಾತಿ ಸಾಹಿತ್ಯ ನಿರ್ಮಾಪಕರಲ್ಲಿ ಅತಿಗಣ್ಯರು. ಅವರು ಗುಜರಾತಿ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯವಾದ ಕೆಲಸವನ್ನು ಮಾಡಿದಂಥವರು. ಅಲ್ಲದೆ ಸ್ವಾತಂತ್ರ್ಯ ಚಳವಳಿಯಲ್ಲಿ ತುಂಬ ಸಕ್ರಿಯರಾಗಿದ್ದವರು. ಮಹಾತ್ಮ ಗಾಂಧೀಜಿಯವರು ಅವರಿಗೆ ‘ರಾಷ್ಟ್ರೀಯ ಶಾಯರ್’ ಎಂಬ ಉಪಾಧಿಯನ್ನ ಕೊಟ್ಟಿದ್ದರು. ಹಿಮಾಂಶಿ ಶೆಲತ್ ಅವರಿಗೆ ಸಿಕ್ಕ ರಾಷ್ಟ್ರೀಯ ಹೋರಾಟ ಮತ್ತು ಸಾಹಿತ್ಯ ಪರಿಸರದ ಕಾರಣಕ್ಕಾಗಿ ಈ ಹಿನ್ನೆಲೆ ಪ್ರಸ್ತುತವೆನಿಸುತ್ತದೆ. ಇವರ ಜೀವನ ಸಂಗಾತಿ ವಿನೋದ್ ಮೇಘಾಣಿ 2009ರಲ್ಲಿ ತೀರಿಕೊಳ್ಳುತ್ತಾರೆ.
ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ
ಆಧುನಿಕೋತ್ತರ ಗುಜರಾತಿ ಭಾಷೆಯ ಕಥನ ಸಂಪ್ರದಾಯದ ಅತ್ಯಂತ ಪ್ರಮುಖ ಲೇಖಕಿ ಹಿಮಾಂಶಿ ಶೆಲತ್ ಅವರು. ಕಳೆದ ಐದು ದಶಕಗಳಿಂದ ಅವರು ಕಥೆಗಳನ್ನಷ್ಟೇ ಅಲ್ಲದೆ ಇತರ ಸಾಹಿತ್ಯ ಪ್ರಕಾರಗಳಲ್ಲಿಯೂ ಅನುಪಮ ಕೆಲಸವನ್ನು ಮಾಡಿದ್ದಾರೆ. ಶೆಲತ್ ಅವರ ಮೊದಲ ಕಥೆಯನ್ನ 1978ರಲ್ಲಿ ಪ್ರಕಟಿಸಿದಾಗ ಅದೊಂದು ಅತ್ಯುತ್ತಮ ಕಥೆ ಎಂದು ಪ್ರಖ್ಯಾತಿ ಪಡೆಯುತ್ತೆ. ‘ಅಂತರಾಳ’ ಎಂಬ ಮೊದಲ ಕಥಾಸಂಕಲನವನ್ನು 1987ರಲ್ಲಿ ಪ್ರಕಟಿಸುತ್ತಾರೆ. ಆನಂತರ ಅಂಧಾರಿ ಗಲಿಮಾ ಸಫೇದ್ ತಪಕ್(1992), ಏ ಲೊಕೊ(1997), ಸಾಂಜ್ನೋ ಸಮಯ್(2002), ಪಂಚಾವ್ಯಕ(2002), ಖಾಂದಾನಿಯಮ ಮತು(2004) ಮತ್ತು ಗರ್ಭಗಾಥಾ(2009) -ಮುಂತಾದ ಹನ್ನೆರಡು ಕಥಾ ಸಂಕಲನಗಳನ್ನು; ಆತ್ಮೋ ರಂಗ್(2001), ಕ್ಯಾರಿಮ ಆಕಾಶ್ ಪುಷ್ಪ ಆಣೆ ಕಾಲಾ ಪತಂಗಿಯಾ(2006) ಮತ್ತು ಸಪ್ತಧಾರಾ(2012) ಎಂಬ ಮೂರು ಕಾದಂಬರಿಗಳನ್ನು ಬರೆದಿದ್ದಾರೆ. ಎರಡು ಪ್ರಬಂಧ ಸಂಕಲನಗಳು ಮತ್ತು ಮೂರು ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ‘ಮುಕ್ತಿ ವೃತ್ತಾಂತ್’ ಅವರ ಆತ್ಮಕಥೆ. ಕೆಲವು ಸಂಪಾದನಾ ಕೃತಿಗಳನ್ನೂ ಅನುವಾದಗಳನ್ನೂ ಮಾಡಿರುವ ಶೆಲತ್ ಅವರ ‘ಪ್ಲಾಟ್‌ಫಾರ್ಮ್ ನಂಬರ್ 4’ ಅನ್ನುವ ಸ್ಮೃತಿಚಿತ್ರಗಳು ಬಹಳ ಹೆಸರವಾಸಿಯಾಗಿದೆ. ಇದು ಸೂರತ್‌ನ ರೈಲ್ವೇ ಸ್ಟೇಷನ್‌ನಲ್ಲಿ ಅಡ್ಡಾಡುವ, ಜೀವನ ಸಾಗಿಸುವ ಮಕ್ಕಳ ಜೊತೆಗೆ ಇದ್ದು ಅವರ ಸುಧಾರಣೆ ಮಾಡುವ ಸಾಮಾಜಿಕ ಚಟುವಟಿಕೆಯ ನೆನಪುಗಳು. ಈ ಕೃತಿಗೆ ಕನ್ನಡ ಸಾಹಿತ್ಯದಲ್ಲಿ ಚಾರಿತ್ರಿಕವಾಗಿ ಬಹಳ ಮುಖ್ಯರಾದ ಮಹಿಳಾ ಲೇಖಕಿ ನಂಜನಗೂಡು ತಿರುಮಲಾಂಬ ಅವರ ಹೆಸರಿನಲ್ಲಿ ಸ್ಥಾಪಿತವಾದ ಪ್ರಶಸ್ತಿ 1999ರಷ್ಟು ಹಿಂದೆಯೇ ಸಂದಿತ್ತು ಎಂಬುದು ನಮಗೆಲ್ಲ ಸಂತೋಷವನ್ನುಂಟು ಮಾಡುತ್ತದೆ. ಆನಂತರ ಅದೇ ಕೃತಿಗೆ 2000, 2001 ಮತ್ತು 2016ರಲ್ಲಿ ಮೂರು ಬೇರೆಬೇರೆ ಪ್ರಶಸ್ತಿಗಳು ಬಂದಿವೆ. ಮಕ್ಕಳ ಸಾಹಿತ್ಯಕ್ಕೆ ಅವರು ವಿಶೇಷ ಪ್ರಾಶಸ್ತ್ಯ ಕೊಟ್ಟವರಾಗಿದ್ದಾರೆ.
ಶೆಲತ್ ಅವರು ಬಂಗಾಳದ ಸುಪ್ರಸಿದ್ಧ ಲೇಖಕಿಯರಾದ ಮಹಾಶ್ವೇತಾದೇವಿ ಮತ್ತು ಆಶಾಪೂರ್ಣದೇವಿ, ಹಿಂದಿಯ ಫಣೀಶ್ವರನಾಥ ‘ರೇಣು’, ಮರಾಠಿ ಲೇಖಕರಾದ ಜಯವಂತ ದಳವಿ ಅವರ ಸಾಹಿತ್ಯದಿಂದ ಪ್ರಭಾವಿತರಾಗಿದ್ದಾರೆ. ಇಂಗ್ಲಿಷಿನ ಜೇನ್ ಆಸ್ಟಿನ್ ಮತ್ತು ಜಾರ್ಜ್ ಎಲಿಯಟ್ ಅವರ ಬರಹಗಳು ಕೂಡ ಅವರನ್ನು ಪ್ರಭಾವಿಸಿವೆ. ಆದರೆ ಬರವಣಿಗೆಯಲ್ಲಿ ತಮ್ಮ ವಿಶಿಷ್ಟ ಆಭಿವ್ಯಕ್ತಿ ವಿಧಾನವನ್ನು ಸಾಧಿಸಿದ್ದಾರೆ. ಯಾವುದೇ ಪ್ರಭಾವ ಅಥವಾ ಸಿದ್ಧಾಂತಗಳಿಂದ ದೂರವುಳಿದು ತಮ್ಮದೇ ಭಾಷೆಯ ಇತರರ ಶೈಲಿಗಳನ್ನು ಕೂಡ ದೂರ ಸರಿಸಿ ತಮ್ಮ ಅನನ್ಯ ಕಥನ ಮಾರ್ಗವನ್ನು ಶೋಧಿಸಿಕೊಂಡಿದ್ದಾರೆ. ಕಥೆಯ ನಿರೂಪಣೆಯೊಂದೇ ಅವರ ದಾರಿದೀಪ. ಮತ್ತು ಆ ನಿರೂಪಣೆ ಶ್ರೇಷ್ಠಮಟ್ಟದ ಭಾಷಾ ಸೌಷ್ಟವದೊಂದಿಗೆ ಜೊತೆಗೂಡಿರುತ್ತದೆ.
ವೈಯಕ್ತಿಕವಾಗಿ ನಾನು ಈ ಇಡೀ ವಾರ ಅವರ ಕೆಲವು ಕಥೆಗಳನ್ನು ಅನುವಾದಿಸಿದೆ. ಅದರಲ್ಲಿ ನಾನು ಬರೆದಿರುವ ಕೆಲವು ಮಾತುಗಳು ಹೀಗಿವೆ: ಹಿಮಾಂಶಿಯವರ ಸಾಹಿತ್ಯವನ್ನು ಗಮನಿಸಿದಾಗ ಎದ್ದು ಕಾಣುವ ಅಂಶಗಳೆಂದರೆ, ಇಂಡಿಯಾದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಮಹಿಳೆಯರ ಬದುಕನ್ನು ಅವರು ಗ್ರಹಿಸಿರುವ ಮತ್ತು ಚಿತ್ರಿಸಿರುವ ರೀತಿ. ಅವರು ಸ್ತ್ರೀವಾದ ಕುರಿತು ಸಂಶೋಧನಾ ಗ್ರಂಥಗಳನ್ನು, ಹಲವಾರು ಲೇಖನಗಳನ್ನೂ ಬರೆದಿದ್ದಾರೆ…. ಅವರು ಆಯ್ದುಕೊಳ್ಳುವ ವಸ್ತು ಕಥನಶೈಲಿ ಮನಸೆಳೆಯುತ್ತವೆ. ಮುಂದೆ ಏನು ಮಾಡಬೇಕೆಂಬುದನ್ನು, ಹಿಂದೆ ಏನಾಯಿತು ಎಂಬುದನ್ನು ಲೇಖಕಿ ಆಯಾ ಗಳಿಗೆಗಳಲ್ಲೇ ಕಥಾಪಾತ್ರಗಳ ಮನೋಭೂಮಿಕೆಯಲ್ಲಿ ಅಭಿನಯಗೊಳಿಸುತ್ತಾರೆ, ತುಮುಲಗಳನ್ನು ಹಿಡಿದಿಡುತ್ತಾರೆ. ಆದರೆ ನಿಜವಾದ ಘಟನೆ ನಡೆಯುವಾಗ ಸತ್ಯದ ಇತರ ಮಗ್ಗುಲುಗಳು ತೆರೆದುಕೊಳ್ಳುತ್ತವೆ. ಇಂಥದ್ದೊಂದು ವಿನೂತನ ಕಥನಶೈಲಿಯನ್ನು ಅವರು ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ.
ಸಾಮಾನ್ಯತೆಯಲ್ಲಿ, ಸರಳತೆಯಲ್ಲಿ ಮೂಡುವ ಅವರ ಕಥನಕಲೆ ಅತ್ಯಪೂರ್ವ ಅನಿಸುತ್ತದೆ. ಸಂಕ್ಷಿಪ್ತತೆಯಲ್ಲಿ ಸರ್ವಸ್ವವನ್ನೂ ಹಿಡಿದಿಡುವ ಗುಣ ಮತ್ತು ಓದುಗರ ಮನಸ್ಸಿನಲ್ಲಿ ವಿವಿಧಾರ್ಥಗಳನ್ನು ಹೊಳೆಯಿಸಲು ಬೇಕಾದ ಸ್ಪೇಸನ್ನು ಈ ಲೇಖಕಿ ವಾಕ್ಯಗಳ ನಡುವೆ ಅಡಗಿಸಿ ಇಟ್ಟಿರುತ್ತಾರೆ.
ಹಿಮಾಂಶಿ ಶೆಲತ್ ಅವರು ಗುಜರಾತಿನಿಂದ ಬಂದವರು. ಗುಜರಾತ್ ಅಂದಕೂಡಲೆ ಸಹಜವಾಗಿ ಮೊದಲು ನಮ್ಮ ನೆನಪಿಗೆ ಬರುವವರು ಗಾಂಧೀಜೀ. ಅವರ ವ್ಯಕ್ತಿತ್ವ ಮತ್ತು ಹೋರಾಟ ಕೇವಲ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ, ರಾಜಕೀಯ ಹೋರಾಟಗಾರರ ಮೇಲಷ್ಟೇ ಪ್ರಭಾವ ಬೀರಲಿಲ್ಲ. ಎಲ್ಲ ಭಾರತೀಯ ಭಾಷೆಗಳಲ್ಲಿ ಮತ್ತು ಭಾರತೀಯ ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿದ್ದ ಎಲ್ಲ ಹಿರಿಯ ಕಿರಿಯ ಲೇಖಕರ ಸಾಹಿತ್ಯದ ಮೇಲೂ ದಟ್ಟವಾದ ಪ್ರಭಾವ ಬೀರಿತ್ತು ಮತ್ತು ಈಗಲೂ ಬೀರುತ್ತಿದೆ.
ಹಿಮಾಂಶಿಯವರು ರೈಲ್ವೇ ಸ್ಟೇಷನ್‌ಗಳಲ್ಲಿ ಜೀವನ ಸಾಗಿಸುವ, ನಗರದ ಕೊಳೆಗೇರಿ, ವೃದ್ಧಾಶ್ರಮಗಳಲ್ಲಿ, ರಿಮಾಂಡ್ ಹೋಮ್‌ಗಳಲ್ಲಿನ ಬಡವರ, ಸಾಮಾನ್ಯರ ಜೊತೆ ಬೆರೆತು ಅವರ ಸುಖದುಃಖಗಳಿಗೆ ಸ್ಪಂದಿಸಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಮಹಿಳೆಯರ ಆಂತರಿಕ ಶಕ್ತಿ ಸಾಮರ್ಥ್ಯ, ಸಹನಾ ಗುಣ, ಆಧುನಿಕ ಮಹಿಳೆಯರ ಸಮಸ್ಯೆಗಳನ್ನು ಅವರಷ್ಟು ಸೂಕ್ಷ್ಮವಾಗಿ ಚಿತ್ರಿಸುವ ಲೇಖಕಿಯರು ತುಂಬ ವಿರಳ. ಮಹಿಳೆಯರ ಬದುಕಿನ ಎಲ್ಲ ಆಯಾಮಗಳನ್ನ ಅರ್ಥ ಮಾಡಿಕೊಳ್ಳುವಲ್ಲಿ ಅವರು ತೋರಿರುವ ಕಾಳಜಿ ಅನನ್ಯವಾಗಿದೆ. ಕೇವಲ ಮನುಷ್ಯ ಜಗತ್ತನಷ್ಟೇ ಅಲ್ಲದೆ ಪಶು ಪಕ್ಷಿ ಪ್ರಾಣಿ ಜಗತ್ತಿನ ಬಗ್ಗೆಯೂ ಕಾಳಜಿ ತೋರಿದ ಲೇಖಕಿ ಇವರು. ಇವೆಲ್ಲ ಗಾಂಧೀಜಿಗೆ ಪ್ರಿಯವಾಗಿದ್ದ ಸತ್ಯಶೋಧನೆಯ ಮಾರ್ಗಗಳೇ ಆಗಿದ್ದವು.

ಹಿಮಾಂಶಿಯವರು ಯಾವ ಪ್ರಚಾರದ ಹಂಗಿಲ್ಲದೆ, ಮೌನವಾಗಿ ಅದೇ ಮಾರ್ಗದಲ್ಲಿ ನಡೆದಿದ್ದಾರೆ ಮತ್ತು ನಡೆಯುತ್ತಿದ್ದಾರೆ. ಅವರು ಸಾಹಿತ್ಯ ಬೋಧನೆಯನ್ನು ಮಾಡುತ್ತಲೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. 1994ರಲ್ಲಿ ಸ್ವಯಂ ನಿವೃತ್ತಿ ಪಡೆದಾಗ ಅವರಿಗೆ ಕೇವಲ 47 ವಯಸ್ಸು. ತಮ್ಮ ಸ್ವಂತ ದುಡಿಮೆಯ ಹಣವನ್ನು ಅವರು ಬಸ್ ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ದುಡಿದು, ಬೇಡುತ್ತ ಜೀವನ ಸಾಗಿಸುವ ಮಕ್ಕಳ ಏಳಿಗೆಗೆ ವಿನಿಯೋಗಿಸುತ್ತಾರೆ. ‘ಶಿಶು ಸಹಾಯ್’ ಎಂಬ ದತ್ತಿ ಸ್ಥಾಪಿಸುತ್ತಾರೆ. ಅದರ ಮೂಲಕ ಅನೇಕ ತಬ್ಬಲಿ ಮಕ್ಕಳ ವಿದ್ಯೆ ಮತ್ತು ಬದುಕಿಗೆ ದಾರಿಕಾಣಿಸುತ್ತಾರೆ. ಸೂರತ್‌ನಲ್ಲಿ ಮಕ್ಕಳ ಕ್ಷೇಮಾಬಿವೃದ್ಧಿ ಬೋರ್ಡ್‌ಗೆ ಅವರನ್ನು ಅಧ್ಯಕ್ಷೆಯನ್ನಾಗಿ ಮಾಡಲಾಗುತ್ತದೆ. ‘ಸೇತು’ ಎಂಬ ಟ್ರಸ್ಟ್ ಅನ್ನು ಸ್ಥಾಪಿಸಿ ಅದರ ಮೂಲಕ ಅನೌಪಚಾರಿಕ ಮತ್ತು ಕ್ರಿಯಾತ್ಮಕ ಶಿಕ್ಷಣ ಕ್ರಮವನ್ನು ಪ್ರಾರಂಭಿಸಿದವರು ಇವರು. ಅವರು ಈಗ ಪಡೆದ ಪುರಸ್ಕಾರಕ್ಕೆ ಕಾರಣಕರ್ತರಾಗಿರುವ ಕುಟುಂಬ ಇಂಥದೇ ಶಿಕ್ಷಣ ಪದ್ಧತಿಯನ್ನು ನಡೆಸುತ್ತಿರುವುದು ಶೆಲತ್ ಅವರ ಮನಸ್ಸಿಗೆ ಹೆಚ್ಚಿನ ಸಂತೋಷವನ್ನು ಖಂಡಿತ ಕೊಡುತ್ತದೆ.
ನಂದಿಗ್ರಾಮದಲ್ಲಿ ಹತ್ತು ಸಾವಿರ ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆಯ ಉದ್ಯೋಗಪತಿಗಳಿಗೆ ಸರ್ಕಾರ ಪರಭಾರೆ ಮಾಡುವ ಹಂತದಲ್ಲಿ ಅಲ್ಲಿಗೆ ಹೋಗಿ ಸಂತ್ರಸ್ತ ರೈತರ ಮತ್ತು ಮಹಿಳೆಯರ ಮೇಲಾಗುತ್ತಿದ್ದ ಹಿಂಸೆ ಮತ್ತು ದೌರ್ಜನ್ಯವನ್ನು ವಿರೋಧಿಸುತ್ತಾರೆ. ಸಾಮಾನ್ಯ ಮನುಷ್ಯರು ದಾರಿಕಾಣದಾದಾಗ, ಕೋಮು ಅಸಹನೆಯುಂಟಾದಾಗಲೆಲ್ಲ, ಅಂಥವರಿಗೆ ತಮ್ಮ ಕಥೆಗಳಲ್ಲಿ ದನಿ ನೀಡುವುದಷ್ಟೇ ಅಲ್ಲದೆ ಆಕ್ಟಿವಿಸ್ಟ್ ಆಗಿ ಹೊರಬಂದಿದ್ದಾರೆ. ಶ್ರೀಸಾಮಾನ್ಯನಿಗೆ ಮತ್ತು ರೈತನನ್ನು ಉಳುವ ಯೋಗಿಯನ್ನಾಗಿ ಮಾಡಿದ ಕುವೆಂಪು ಅವರ ಚೈತನ್ಯಕ್ಕೆ ಹಿಮಾಂಶಿಯವರ ಇಂಥ ನಡಿಗೆ ಸರಿಯಾದ ರೀತಿಯಲ್ಲಿ ಹೊಂದಿಕೆಯಾಗುತ್ತದೆ. ಸಮಕಾಲೀನ ಧಾರ್ಮಿಕ ಮತ್ತು ರಾಜಕೀಯ ಪರಿಸ್ಥಿತಿಯ ಬಗ್ಗೆ ಅವರ ಕಥಾಪಾತ್ರಗಳು ದಿಟ್ಟವಾದ ನಿಲುವನ್ನು ಪ್ರಕಟಿಸುತ್ತವೆ.
ಹಿಮಾಂಶಿ ಶೆಲತ್ ಅವರು ಸ್ವಭಾವತಃ ಏಕಾಂತವನ್ನು ಬಯಸುವವರು, ದೊಡ್ಡದೊಡ್ಡ ಗುಂಪುಗಳಿಂದ ಮತ್ತು ಪ್ರಚಾರಪ್ರಿಯತೆಯಿಂದ ಯಾವಾಗಲೂ ದೂರವಿರುವವರು. ಅವರು ಮೌನವಾದ ಮತ್ತು ದೃಢವಾದ ಪರಿಶ್ರಮದಲ್ಲಿ ನಂಬಿಕೆಯಿಟ್ಟವರು. ಸೃಜನಶೀಲತೆಯ ಕಾರ್ಯದಲ್ಲಿ ಸರಳ ಮತ್ತು ನೇರ ಶೈಲಿಯಲ್ಲಿ ನಂಬಿಕೆಯಿಟ್ಟವರು. ಕುವೆಂಪು ಅವರಿಗೆ ಪ್ರಿಯವಾಗಿದ್ದ ಕಾರಯತ್ರೀ ಮತ್ತು ಭಾವಯತ್ರೀ ಪ್ರತಿಭೆಯನ್ನು ಅಪ್ಪಿಕೊಂಡವರು. ಜೀವನ ಮೌಲ್ಯಗಳನ್ನು ಉನ್ನತೀಕರಿಸುವಲ್ಲಿ ನಿರಂಕುಶಮತಿಯಾಗಿ ಬಾಳುತ್ತಿರುವರು.
ಅವರು ಗುಜರಾತಿನ ಪ್ರಸಿದ್ಧ ನಗರಗಳಲ್ಲಿ ಒಂದಾದ ಸೂರತ್‌ನಲ್ಲಿ ಹುಟ್ಟಿ ಬೆಳೆದು ಅದನ್ನೇ ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡವರು. ಆ ನಗರಕ್ಕೆ ಒಂದು ವಿಶೇಷತೆಯಿದೆ. ಜಗತ್ತಿನಲ್ಲಿ ನಾನಾ ಭಾಗಗಳಲ್ಲಿ ಸಿಗುವ ಸುಮಾರು ಶೇಖಡಾ ತೊಂಬತ್ತು ಭಾಗದಷ್ಟು ವಜ್ರವನ್ನು ಪಾಲಿಷ್ ಮಾಡಲು ಅಲ್ಲಿಗೆ ತರಲಾಗುತ್ತದೆ. ಶೆಲತ್ ಅದೇ ಕೆಲಸವನ್ನು ಬೇರೊಂದು ರೀತಿಯಲ್ಲಿ ಮಾಡುತ್ತಾರೆ. ಗುಜರಾತಿ ಭಾಷೆಯ ಶಬ್ದಗಳಿಗೆ ಹೊಸ ಹೊಳಪು ನೀಡಿ ಸಾಹಿತ್ಯವನ್ನು ಅಲಂಕರಿಸುತ್ತಾರೆ. ಭಾಷೆಯ ಶಬ್ದಗಳನ್ನು ಕುರಿತ ಅವರ ಒಂದು ನೋಟವನ್ನು ಅವರ ‘ಪ್ರೇಮ ಪತ್ರಗಳು’ ಎಂಬ ಕಥೆಯಲ್ಲಿ ನಾವು ನೋಡಬಹುದು.
ಸುಪ್ರಸಿದ್ಧ ಚಿತ್ರಕಲಾವಿದೆ ಅಮೃತಾ ಶೇರೆಗಿಲ್ ಅವರ ಜೀವನವನ್ನು ಆಧರಿಸಿದ ‘ಆತ್ಮೋ ರಂಗ್’ ಎಂಬ ಕಾದಂಬರಿಯನ್ನು ಹಿಮಾಂಶಿ ಬರೆದಿದ್ದಾರೆ. ಅದಕ್ಕೇ ಗುಜರಾತ್ ಸಾಹಿತ್ಯ ಅಕಾದೆಮಿ 2002ರಲ್ಲಿ ಒಂದು ಪ್ರಶಸ್ತಿಯನ್ನು ಘೋಷಿಸಿತು. ಆಗ ಹಿಮಾಂಶಿ ಒಪ್ಪಿಕೊಳ್ಳಲಿಲ್ಲ ಮತ್ತು ‘ಇನ್ನು ಮುಂದೆ ತನ್ನನ್ನು ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗಾಗಿ ಪರಿಗಣಿಸಬೇಡಿ’ ಎಂದು ಹೇಳಿದರು. ಒಂದುರೀತಿಯಲ್ಲಿ ‘ಕೀರ್ತಿಶನಿಯೇ ತೊಲಗಾಚೆ’ ಅಂದವರು ಅವರು. ಅದರಂತೆಯೇ 2002ರಿಂದ ಇದುವರೆಗೆ ಅವರು ತಮ್ಮ ಪ್ರತಿಜ್ಞೆಯನ್ನು ಪಾಲಿಸಿಕೊಂಡು ಬಂದಿದ್ದರು. ಅದನ್ನು ಬಾಗಿಸಿದ್ದು ನಮ್ಮ ಕುವೆಂಪು ಅವರ ಮಹಾಚೈತನ್ಯ.
ಕುವೆಂಪು ಪ್ರತಿಷ್ಠಾನ ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದಾಗಲೂ ಅವರು ತಮ್ಮ ನಿರ್ಧಾರವನ್ನು ನೇರವಾಗಿ ಹೇಳದೆ ನನಗೆ ಸಮಯಾವಕಾಶ ಬೇಕು ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಲ್. ಶಂಕರ್ ಅವರು ಅವರ ಜೊತೆ ದೂರವಾಣಿಯಲ್ಲಿ ಮಾತಾಡುವ ಜವಾಬ್ದಾರಿಯನ್ನು ನನಗೆ ವಹಿಸಿದರು. ಮೂರ‍್ನಾಲ್ಕು ಬಾರಿಯ ನಮ್ಮ ಸಂಭಾಷಣೆಯಲ್ಲಿ ಬೇರೆಬೇರೆ ಮಾತುಕತೆಗಳ ಜೊತೆಗೆ ನಾನು ಹೇಳಿದೆ:
ಆಧುನಿಕ ಭಾರತದ ಸಾಹಿತ್ಯ ಚರಿತ್ರೆಯಲ್ಲಿ ಕುವೆಂಪು ಅವರು ಕನ್ನಡಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರವನ್ನು 1968ರಲ್ಲಿ ತಂದುಕೊಟ್ಟವರು. ಆಗ ನಿಮ್ಮ ಭಾಷೆಯ ಪ್ರಸಿದ್ಧ ಸಾಹಿತಿ ಉಮಾಶಂಕರ ಜೋಶಿ ಮತ್ತು ಕುವೆಂಪು ಇಬ್ಬರೂ ಆ ಗೌರವವನ್ನು ಸಮನಾಗಿ ಹಂಚಿಕೊಡಿದ್ದರು. ಗುಜರಾತಿ ಮತ್ತು ಕನ್ನಡದ ಈ ಬಾಂಧವ್ಯ ಸುಮಾರು ಆರು ದಶಕಗಳಷ್ಟು ಹಳೆಯದು. ಈಗ ಕುವೆಂಪು ಅವರ ಹೆಸರಿನಲ್ಲಿರುವ ಈ ಪುರಸ್ಕಾರವನ್ನು ಒಪ್ಪಿದರೆ ಅದು ಈ ಬಾಂಧವ್ಯವನ್ನು ಇನ್ನೂ ಆರು ದಶಕಗಳಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದಾಗ ಅವರು ‘ನಾಳೆ ಸಂಜೆಯವರೆಗೆ ಸಮಯ ಕೊಡಿ’ ಅಂದರು. ಮರುದಿನ ಸಂಜೆ ನಾನು ಫೋನ್ ಮಾಡಿದಾಗ ಅವರು ಹೇಳಿದರು, ‘ಐ ಹ್ಯಾವ್ ಲಿಸನ್ಡ್ ಟು ಮೈ ಹಾರ್ಟ್’ ಅಂದರು. ಅವರಿಗೆ ಎಲ್ಲ ಭಾಷೆಗಳಿಗಿಂತ ಹೃದಯದ ಭಾಷೆಯೇ ಹೆಚ್ಚು ಆಪ್ಯಾಯಮಾನ. ‘ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಅವರು ಈಗ ನಮ್ಮೆಲ್ಲರ ಜೊತೆ ಇದ್ದಾರೆ. ಹಿಮಾಂಶಿ ಶೆಲತ್ ನಾಳೆ ಕುಪ್ಪಳಿಯ ಕವಿಮನೆಗೂ ಹೋಗಿಬರುತ್ತಾರೆ.
ಇದನ್ನು ಓದಿದ್ದೀರಾ?: ಗುಜರಾತ್ ನರಮೇಧದ ಹಿಂದಿದ್ದವರು ಮೋದಿಯೇ ಎಂದು ನಿರಂತರ ಸಮರ ಸಾರಿದ್ದರು ಝಕಿಯಾ ಜಾಫ್ರಿ
ಪ್ರತಿಷ್ಠಾನದ ಪುರಸ್ಕಾರಗಳನ್ನು ತೀರ್ಮಾನ ಮಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಒಂದು ನಿಯಮವನ್ನು ಪಾಲಿಸುವುದನ್ನು ಒಂದೆರಡು ಬಾರಿ ನಾನು ಗಮನಿಸಿದ್ದೇನೆ. ಜ್ಞಾನಪೀಠ ಮತ್ತು ಸರಸ್ವತಿ ಸಮ್ಮಾನ ಬಂದಿರುವ ಲೇಖಕ ಲೇಖಕಿಯರನ್ನ ಪರಿಗಣಿಸುವುದು ಬೇಡ ಅನ್ನುವುದೇ ಆ ನಿಯಮ. ಆಶ್ಚರ್ಯವನ್ನುವಂತೆ ಕೆಲವು ಸಂದರ್ಭಗಳಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದ ನಂತರದಲ್ಲಿ ಆ ಪುರಸ್ಕಾರಗಳನ್ನು ಪಡೆದ ಸುದ್ದಿಗಳು ಬಂದಾಗ ಪ್ರತಿಷ್ಠಾನ ಹೆಮ್ಮೆ ಪಟ್ಟಿದ್ದುಂಟು. ಅದರಿಂದ ಈ ಆಯ್ಕೆಯ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ ಅರಿವು ನಮಗುಂಟಾಗುತ್ತೆ…. ಇಲ್ಲಿ. ಹಾಗೆಯೇ ಮುಂದೆ ಇನ್ನೂ ಹೆಚ್ಚಿನ ಗೌರವಗಳು ಅವರಿಗೆ ಸಿಗಲಿ ಮತ್ತು ಅವುಗಳನ್ನು ಅವರು ಒಪ್ಪಿಕೊಳ್ಳಲಿ ಎಂದು ಇಲ್ಲಿ ನೆರದಿರುವ ಎಲ್ಲರ ಪರವಾಗಿ, ಕನ್ನಡಿಗರ ಪರವಾಗಿ ಕೇಳಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ. ಎಲ್ಲರಿಗೂ ನಮಸ್ಕಾರಗಳು.
