ಆರೆಸ್ಸೆಸ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಐಎಡಿಎಂಕೆ ಶಾಸಕ, ಮಾಜಿ ಸಚಿವ ಎನ್ ತಲವೈ ಸುಂದರಂ ಅವರನ್ನು ಪಕ್ಷದ ಪದಾಧಿಕಾರಿ ಹುದ್ದೆಯಿಂದ ತಾತ್ಕಾಲಿಕವಾಗಿ ಕೈಬಿಡಲಾಗಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕನ್ಯಾಕುಮಾರಿ ಶಾಸಕ ಮತ್ತು ಜಯಲಲಿತಾ ಸಂಪುಟದಲ್ಲಿ ಈ ಹಿಂದೆ ಸಚಿವರಾಗಿದ್ದ ತಲವೈ ಸುಂದರಂ ಅವರನ್ನು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡ ಕಾರಣ ಅವರನ್ನು ಪಕ್ಷದ ಎಐಎಡಿಎಂಕೆಯ ಕನ್ಯಾಕುಮಾರಿ ಜಿಲ್ಲಾ ಘಟಕದ ಕಾರ್ಯದರ್ಶಿ ಮತ್ತು ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಕೈ ಬಿಡಲಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ
ತಲವೈ ಸುಂದರಂ ಅವರು ಎಐಎಡಿಎಂಕೆಯ ಹಿರಿಯ ನಾಯಕರಾಗಿದ್ದರು. ಶಾಸಕ, ಸಚಿವ, ರಾಜ್ಯಸಭಾ ಸಂಸದರಾಗಿದ್ದ ಇವರು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.
ಅವರು ಕನ್ಯಾಕುಮಾರಿ ಜಿಲ್ಲೆಯಲ್ಲಿ ಈ ಬಾರಿ ಆಯ್ಕೆಯಾಗಿದ್ದ ಎಐಎಡಿಎಂಕೆಯ ಏಕೈಕ ಶಾಸಕರಾಗಿದ್ದಾರೆ. ಆರೆಸ್ಸೆಸ್ ಸ್ಥಾಪನೆಯ 100ನೇ ವರ್ಷದ ಅಂಗವಾಗಿ ಕನ್ಯಾಕುಮಾರಿಯಲ್ಲಿ ಆರೆಸ್ಸೆಸ್ ಆಯೋಜಿಸಿದ್ದ ಮೆರವಣಿಗೆಗೆ ತಲವೈ ಸುಂದರಂ ಚಾಲನೆ ನೀಡಿದ್ದರು, ಇದು ವ್ಯಾಪಕವಾಗಿ ಟೀಕೆಗೆ ಕಾರಣವಾಗಿತ್ತು.