ಟಿವಿಕೆ ಬೆಂಬಲಿಗರ ‘ವಿಜಯ್ ಪಿಎಂ’ ಘೋಷಣೆ ಬೆನ್ನಲ್ಲೇ ಎಐಸಿಸಿ ಸ್ಪಷ್ಟನೆ ನೀಡಿದೆ. ಮುಂದಿನ 2029ರ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ (I.N.D.I.A.) ಮೈತ್ರಿಕೂಟವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಮುನ್ನಡೆಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಬೆಂಬಲಿಗರು ಮತ್ತು ಕೆಲವು ಮುಖಂಡರು ನಟ ಹಾಗೂ ರಾಜಕಾರಣಿ ವಿಜಯ್ ಅವರನ್ನು ‘ಮುಂದಿನ ಪ್ರಧಾನಿ’ ಎಂದು ಬಿಂಬಿಸಿ ಘೋಷಣೆ ಕೂಗುತ್ತಿರುವ ಮಧ್ಯೆಯೇ ವೇಣುಗೋಪಾಲ್ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸೋನಿಯಾ, ರಾಹುಲ್ ಭೇಟಿಯಾಗದೇ ವಿಜಯ್ ವಾಪಸ್ ಬಳಿಕ ವದಂತಿ: ಟಿವಿಕೆ ಜತೆ ಭಿನ್ನಾಭಿಪ್ರಾಯವಿಲ್ಲ ಕಾಂಗ್ರೆಸ್
ಮಾಧ್ಯಮಗಳೊಂದಿಗೆ ಮಾತನಾಡಿದ ಕೆ ಸಿ ವೇಣುಗೋಪಾಲ್, “ಯಾರೂ ಕೂಡ ಯಾವುದೇ ಗೊಂದಲಗಳನ್ನು ಸೃಷ್ಟಿಸಬಾರದು. 2029ರ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟವು ರಾಹುಲ್ ಗಾಂಧಿ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸಲಿದೆ. ಒಕ್ಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಹಾಗೂ ಮೈತ್ರಿಕೂಟವು ಒಗ್ಗಟ್ಟಿನಿಂದ ಬಲವಾಗಿದೆ” ಎಂದು ಪ್ರತಿಪಾದಿಸಿದರು.
ಇತ್ತೀಚೆಗೆ ತಮಿಳುನಾಡಿನ ಮೈತ್ರಿ ವಲಯದಲ್ಲಿ ಟಿವಿಕೆ ಮುಖಂಡರು ವಿಜಯ್ ಅವರನ್ನು ದೇಶದ ಮುಂದಿನ ಪ್ರಧಾನಿ ಹುದ್ದೆಗೆ ಸೂಕ್ತ ನಾಯಕ ಎಂದು ಹೇಳಿಕೆ ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈ ಕುರಿತು ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ಅವರೇ 2029ರ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ತಮಿಳುನಾಡು ಕಾಂಗ್ರೆಸ್ ಘಟಕವೂ ಈಗಾಗಲೇ ಪುನರುಚ್ಚರಿಸಿದೆ.





