ಸಂಗೀತ ಮಾಂತ್ರಿಕ ಪದ್ಮಭೂಷಣ ಉಸ್ತಾದ್ ರಶೀದ್ ಖಾನ್ ಬುಧವಾರ ನಿಧನರಾಗಿದ್ದಾರೆ. 55 ವರ್ಷ ವಯಸ್ಸಿನ ಕಲಾವಿದ ಖಾನ್ ಅವರು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಕೋಲ್ಕತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜನವರಿ 9ರಂದು ಬುಧವಾರ ಇಹಲೋಕ ತ್ಯಜಿಸಿದ್ದಾರೆ.
ದೀರ್ಘಕಾಲದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಶೀದ್ ಅವರ ಆರೋಗ್ಯವು, ಕಳೆದ ತಿಂಗಳು ಸೆರೆಬ್ರಲ್ ಅಟ್ಯಾಕ್ ನಂತರ ತೀವ್ರವಾಗಿ ಕುಸಿಯಿತು. ಆರಂಭದಲ್ಲಿ ಅವರು ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ತೆರಳಿದರು.
ರಶೀದ್ ಅವರ ಸಾವಿನ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದು, “ರಶೀದ್ ಖಾನ್ ನಿಧನ ಇಡೀ ದೇಶಕ್ಕೆ ಮತ್ತು ಸಂಪೂರ್ಣ ಸಂಗೀತ ಕ್ಷೇತ್ರಕ್ಕೆ ಆದ ದೊಡ್ಡ ನಷ್ಟವಾಗಿದೆ. ರಶೀದ್ ಇನ್ನಿಲ್ಲ ಎಂದು ನನ್ನಿಂದ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನನಗೆ ತುಂಬಾ ನೋವಾಗಿದೆ” ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬದಾಯುನ್‌ನಲ್ಲಿ ಜನಿಸಿದ ರಶೀದ್ ಖಾನ್, ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರ ಸೋದರಳಿಯ. ತಮ್ಮ ತಾತ ಉಸ್ತಾದ್ ನಿಸಾರ್ ಹುಸೇನ್ ಖಾನ್ ಅವರಿಂದ ಆರಂಭಿಕ ತರಬೇತಿ ಪಡೆದರು. ಅವರಲ್ಲಿನ ಸಂಗೀತ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಅವರ ಚಿಕ್ಕಪ್ಪ ಗುಲಾಮ್ ಮುಸ್ತಫಾ ಖಾನ್. ಹೀಗಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ ಅವರಿಗೆ ಆರಂಭಿಕ ತರಬೇತಿ ಕೊಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಕೇವಲ 11 ವರ್ಷದವರಾಗಿದ್ದಾಗಲೇ ಸಂಗೀತ ಕಛೇರಿ ನಡೆಸಿದ ಕೀರ್ತಿ ಅವರದ್ದು, 1994 ರ ಹೊತ್ತಿಗೆ ಅವರು ಸಂಗೀತಗಾರರಾಗಿ ಮನ್ನಣೆ ಗಳಿಸಿದ್ದರು. ಬಾಲ್ಯದಿಂದಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಿಂದ ಆಳವಾಗಿ ಪ್ರಭಾವಿತರಾದ ರಶೀದ್ ಅವರು ತಮ್ಮ ಅಜ್ಜ ಇನಾಯತ್ ಹುಸೇನ್ ಖಾನ್ ಅವರ ಮಾರ್ಗದರ್ಶನದಲ್ಲಿ ಸಂಗೀತ ಪಾಠಗಳನ್ನು ಪ್ರಾರಂಭಿಸಿದರು.
ಸಂಗೀತ ಕ್ಷೇತ್ರದಲ್ಲಿ, ರಾಂಪುರ-ಸಹಸ್ವಾನ್ ಗಾಯಕಿ ಗ್ವಾಲಿಯರ್ ಘರಾನಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಉಸ್ತಾದ್ ಅಮೀರ್ ಖಾನ್ ಮತ್ತು ಪಂಡಿತ್ ಭೀಮಸೇನ್ ಜೋಶಿಯಂತಹ ಗುರುಗಳಿಂದ ಆಳವಾಗಿ ಪ್ರಭಾವಿತರಾಗಿದ್ದಾರೆ.
ಹಿಂದೂಸ್ತಾನಿ ಗಾಯನದಲ್ಲಿ ಮಿಂಚುತ್ತಿರುವಾಗಲೇ, ರಶೀದ್ ಅವರು ಹಿನ್ನೆಲೆ ಸಂಗೀತದಲ್ಲಿ ತಮ್ಮ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ್ದಾರೆ. ಬಾಲಿವುಡ್ ಸಿನಿಮಾಗಳಾದ “ಮೈ ನೇಮ್ ಈಸ್ ಖಾನ್,” “ಜಬ್ ವಿ ಮೆಟ್,” “ಇಸಾಕ್,” “ಮಂಟೋ,” “ಮೌಸಮ್,” “ಬಾಪಿ ಬಾರಿ ಜಾ”, “ಕಾದಂಬರಿ,” ಮುಂತಾದ ಸಿನಿಮಾಗಳಿಗೆ ಕೊಡುಗೆ ನೀಡಿದ್ದಾರೆ.
ನೂರಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ರಶೀದ್ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳಲ್ಲದೆ, 2012 ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ರಾಜ್ಯ ಗೌರವವಾದ ಬಂಗಭೂಷಣವನ್ನು ನೀಡಿ ಗೌರವಿಸಲಾಗಿದೆ.