ಭಾರತೀಯ ವಾಯುಪಡೆಯ ಹಿರಿಯ ವಿಂಗ್ ಕಮಾಂಡರ್ ತಮಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ‘ಓರಲ್ ಸೆಕ್ಸ್’ಗೆ ಒತ್ತಾಯಿಸಿದ್ದು, ಅತ್ಯಾಚಾರ ಎಸಗಿದ್ದಾರೆ ಎಂದು ವಾಯುಪಡೆಯ ಮಹಿಳಾ ಫ್ಲೈಯಿಂಗ್ ಆಫಿಸರ್ ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಅಧಿಕಾರಿ ದೂರು ದಾಖಲಿಸಿದ್ದಾರೆ. “ಕಳೆದ ಎರಡು ವರ್ಷಗಳಿಂದ ತಮಗೆ ಹಿರಿಯ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ದೌರ್ಜನ್ಯದಿಂದಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
“ಕಳೆದ ವರ್ಷ ಹೊಸ ವರ್ಷಾಚರಣೆ ವೇಳೆ ನಡೆದ ಪಾರ್ಟಿಯಲ್ಲಿ ಆರೋಪಿ ಹಿರಿಯ ಅಧಿಕಾರಿ, ‘ನಿಮಗೆ ಗಿಫ್ಟ್ ಸಿಕ್ಕಿದೆಯಾ’ ಎಂದು ಕೇಳಿದರು. ಇಲ್ಲವೆಂದು ಹೇಳಿದ್ದಕ್ಕೆ ‘ನನ್ನ ರೂಮ್‌ನಲ್ಲಿದೆ. ಬಂದು ಪಡೆದುಕೊಳ್ಳಿ’ ಎಂದಿದ್ದರು. ಅವರ ಮನೆಗೆ ತೆರಳಿದಾಗ, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು” ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
“ಆರಂಭದಲ್ಲಿ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲು ಭಯವಾಯಿತು. ಯಾರಿಗೂ ಕಿರುಕುಳದ ಬಗ್ಗೆ ಹೇಳಿಕೊಳ್ಳಲಿಲ್ಲ. ಈ ವಿಚಾರದಲ್ಲಿ ಚಿಂತೆ ಮಾಡಿ, ಖಿನ್ನತೆಗೆ ಒಳಗಾಗಿದ್ದೇನೆ. ನಂತರ, ಸಹೋದ್ಯೋಗಿಗಳೊಂದಿಗೆ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದು, ಅವರು ದೂರು ನೀಡುವಂತೆ ಸಲಹೆ ನೀಡಿದರು. ಅವರ ಸಲಹೆಯಂತೆ ಆಂತರಿಕ ಫ್ಲೈಯಿಂಗ್ ಅಧಿಕಾರಿಗೆ ದೂರು ನೀಡಿದ್ದೆ. ಆದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ” ಎಂದೂ ಅವರು ಆರೋಪಿಸಿದ್ದಾರೆ.
“ಆಂತರಿಕ ಸಮಿತಿಗೆ ಎರಡು ಬಾರಿ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಮಾನಸಿಕ ಖಿನ್ನತೆಯಿಂದ ಹೊರ ಬರಲು ಬೇರೆ ಕಡೆಗೆ ವರ್ಗಾವಣೆ ಕೇಳಿದರೂ ಸ್ಪಂದಿಸಿಲ್ಲ. ರಜೆಯನ್ನೂ ನೀಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ವಾಯುಪಡೆ, “ಪ್ರಕರಣದ ತನಿಖೆಯಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ” ಎಂದು ಹೇಳಿದೆ.