ಪೂರ್ವ ಇಂಡೋನೇಷ್ಯಾದ ಪೂರ್ವ ನುಸಾ ತೆಂಗಾರ ಪ್ರಾಂತ್ಯದ ಫ್ಲೋರ್ಸ್ ದ್ವೀಪದಲ್ಲಿ ಮೌಂಟ್ ಲೆವೊಟೊಬಿ ಲಕಿ-ಲಕಿ ಜ್ವಾಲಾಮುಖಿಯು ಸ್ಫೋಟಗೊಂಡಿದೆ. ಅಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಘಟನೆಯು ವಾಯುಯಾನದ ಮೇಲೂ ಪ್ರಭಾವ ಬೀರಿದೆ. ಹೀಗಾಗಿ, ಏರ್ ಇಂಡಿಯಾ, ಸಿಂಗಾಪುರ್ ಏರ್‌ಲೈನ್ಸ್, ಏರ್ ನ್ಯೂಜಿಲೆಂಡ್, ಜೆಟ್‌ಸ್ಟಾರ್, ವರ್ಜಿನ್ ಆಸ್ಟ್ರೇಲಿಯಾ ಹಾಗೂ ಚೀನಾದ ಜುನ್ಯಾವೊ ಏರ್‌ಲೈನ್ಸ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಬಾಲಿಗೆ ತೆರಳಬೇಕಿದ್ದ ತಮ್ಮ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿವೆ. ಹೀಗಾಗಿ, ದೆಹಲಿಯಿಂದ ಬಾಲಿಗೆ ಹಾರಾಟ ಆರಂಭಿಸಿದ್ದ ‘ಏರ್ ಇಂಡಿಯಾ’ ವಿಮಾನವು ಮರಳಿ ದೆಹಲಿ ಬಂದಿದೆ.
ಜ್ವಾಲಾಮುಖಿ ಸ್ಪೋಟದಿಂದ ಉಂಟಾದ ದಟ್ಟ ಹೊಗೆಯು ಸುಮಾರು 10 ಕಿ.ಮೀ ಎತ್ತರದವರೆಗೆ ಆವರಿಸಿದೆ. ಇದು, ವಿಮಾನ ಸಂಚಾರಕ್ಕೆ ಭಾರೀ ತೊಂದರೆ ಉಂಟು ಮಾಡಿದೆ.ಜ್ವಾಲಾಮುಖಿ ಸ್ಪೋಟದಿಂದ ಈವರೆಗೆ ಯಾವುದೇ ಸಾವು-ನೋವು ವರದಿಯಾಗಿಲ್ಲ.
ಸ್ಪೋಟದಿಂದ ಹೊಗೆ ಆವರಿಸಿಕೊಂಡಿರುವ ಕಾರಣ, ಇಂಡೋನೇಷ್ಯಾದ ಬಾಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ‘AI2145’ ತನ್ನ ಪ್ರಯಾಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ದೆಹಲಿಗೆ ವಾಪಸ್ ಬಂದಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಏರ್ ಇಂಡಿಯಾ ಸಂಸ್ಥೆಯು ವಿಷಾದ ವ್ಯಕ್ತಪಡಿಸಿದೆ. ಪರಿಹಾರವಾಗಿ ಹೋಟೆಲ್ ವಸತಿ, ಟಿಕೆಟ್‌ನ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದಾಗಿ ತಿಳಿಸಿದೆ.
ಪೂರ್ವ ನುಸಾ ತೆಂಗಾರ ಪ್ರಾಂತ್ಯದಲ್ಲಿ 2024ರ ನವೆಂಬರ್‌ನಲ್ಲಿಯೂ ಜ್ವಾಲಾಮುಖಿ ಸ್ಪೋಟಗೊಂಡಿತ್ತು. ಆಗ, 9 ಮಂದಿ ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು.