ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್,ದೇಶದಲ್ಲಿನ ಹಲವು ಸಮಸ್ಯೆಗಳು ಇದಕ್ಕಿಂತ ಹೆಚ್ಚು ಮುಖ್ಯವಾಗಿದೆ ಎಂದು ತಿಳಿಸಿದರು.
ಲಖನೌದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅಖಿಲೇಶ್ ಯಾದವ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಎಪಿ ಸಂಸದ ಸಂಜಯ್ ಸಿಂಗ್, “ಮಣಿಪುರದಲ್ಲಿ ಕಾರ್ಗಿಲ್ ಯೋಧರೊಬ್ಬರ ಪತ್ನಿಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ಪ್ರತಿಯೊಬ್ಬರಿಗೂ ಅಲ್ಲದೆ ಇಡೀ ದೇಶ ಕೂಡ ಇನ್ನೂ ನೋವಿನಲ್ಲಿದೆ. ನೂರಾರು ಮಹಿಳೆಯರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಯಿತು. ಆದರೂ ಭಾರತದ ಪ್ರಧಾನಿ ಮೌನವಾಗಿದ್ದಾರೆ. ಪ್ರಜ್ವಲ್ ರೇವಣ್ಣ ಆತನ ತಾಯಿ ವಯಸ್ಸಿನ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅತ್ಯಾಚಾರವೆಸಗಿದ್ದಾನೆ. ಆದರೆ ಪ್ರಧಾನ ಮಂತ್ರಿಗಳು ಆತನ ಪರವಾಗಿ ಮತಯಾಚಿಸುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಚಿನ್ ತೆಂಡೂಲ್ಕರ್ ಮನೆಯಲ್ಲಿ ಭದ್ರತೆಗಿದ್ದ ಪೊಲೀಸ್ ಆತ್ಮಹತ್ಯೆ
ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಅರವಿಂದ್ ಕೇಜ್ರಿವಾಲ್ ಕೂಡ ಯಾವುದೇ ಉತ್ತರ ನೀಡಲಿಲ್ಲ.
ಕೆಲವು ದಿನಗಳ ಹಿಂದಷ್ಟೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ಕಚೇರಿ ಸಿಬ್ಬಂದಿ ಬಿಬವ್ ಕುಮಾರ್ ಎಂಬುವವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು ದೂರು ನೀಡಿದ್ದರು. ಎಎಪಿ ಕೂಡ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯೆ ನೀಡಿತ್ತು.
