ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆಯಾಗಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ವಜಾಗೊಳಿಸಿದೆ. ಅರ್ಜಿದಾರರು ತಮ್ಮ ಆರೋಪಕ್ಕೆ ಬೆಂಬಲವಾಗಿ ಯಾವುದೇ ಸೂಕ್ತ ಸಾಕ್ಷ್ಯಾಧಾರ ಅಥವಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ವಿಫಲರಾದ ಕಾರಣ, ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿ ಪೀಠವು ಈ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಶೇಖರ್ ಬಿ. ಸರಾಫ್ ಮತ್ತು ನ್ಯಾಯಮೂರ್ತಿ ಅಬ್ಧೇಶ್ ಕುಮಾರ್ ಚೌಧರಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅರ್ಜಿ ವಿಚಾರಣೆ ನಡೆಸಿದೆ. ಅರ್ಜಿದಾರರಾದ ಅಶೋಕ್ ಪಾಂಡೆ ಮತ್ತು ರಜನೀಶ್ ಕುಮಾರ್ ಸಿಂಗ್ ಅವರು ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆಯಾಗಿರುವುದರಿಂದ ರಾಯ್‌ಬರೇಲಿಯ ಲೋಕಸಭಾ ಸಂಸದರಾಗಿ ಮುಂದುವರಿಯಲು ಅರ್ಹರಲ್ಲ ಎಂದು ಪ್ರತಿಪಾದಿಸಿ ‘ಕ್ವೋ ವಾರಾಂಟೊ’ (Quo Warranto) ರಿಟ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ಬ್ರಿಟೀಷ್ ಪ್ರಜೆ; ಸಂಸದ ಸ್ಥಾನ ರದ್ದುಗೊಳಿಸಿ: ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ
ಅರ್ಜಿದಾರರು, ರಾಹುಲ್ ಗಾಂಧಿ 2003ರಲ್ಲಿ ಯುಕೆಯಲ್ಲಿ ಸ್ಥಾಪಿತವಾದ ‘ಬ್ಯಾಕ್‌ಆಪ್ಸ್ ಲಿಮಿಟೆಡ್’ ಕಂಪನಿಯ ನಿರ್ದೇಶಕ ಮತ್ತು ಪ್ರಮುಖ ಶೇರುದಾರರಾಗಿದ್ದು, ಅಲ್ಲಿ ತಮ್ಮನ್ನು ಬ್ರಿಟಿಷ್ ಪ್ರಜೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಈ ಕುರಿತು ಬ್ರಿಟಿಷ್ ಕಂಪನಿಗಳ ರಿಜಿಸ್ಟ್ರಾರ್ ದಾಖಲೆಗಳಾಗಲಿ ಅಥವಾ ರಾಹುಲ್ ಗಾಂಧಿ ಮಾಡಿದ್ದರೆನ್ನಲಾದ ಯಾವುದೇ ಅಧಿಕೃತ ಘೋಷಣೆಯ ಪತ್ರಗಳಾಗಲಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿಲ್ಲ.
ಅರ್ಜಿದಾರರು ಸಲ್ಲಿಕೆ ಮಾಡಿದ ಏಕೈಕ ದಾಖಲೆಯೆಂದರೆ ‘ರಾವುಲ್ ವಿಂಚಿ’ ಎಂಬ ಹೆಸರಿನ ವ್ಯಕ್ತಿಯ ಶಿಕ್ಷಣಕ್ಕೆ ಸಂಬಂಧಿಸಿದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪತ್ರ ಮಾತ್ರ. ಈ ಪತ್ರಕ್ಕೂ ಅರ್ಜಿಯಲ್ಲಿ ಮಾಡಲಾದ ಪೌರತ್ವದ ಆರೋಪಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಇದರಿಂದಾಗಿ ಅರ್ಜಿದಾರರು ಅರ್ಜಿ ಹಿಂಪಡೆಯಲು ಅನುಮತಿ ಕೋರಿದರು. ನ್ಯಾಯಾಲಯವು ಅರ್ಜಿಯನ್ನು ಹಿಂಪಡೆದ ಆಧಾರದ ಮೇಲೆ ವಜಾಗೊಳಿಸಿ ಆದೇಶಿಸಿತು.
ಈ ಹಿಂದೆ 2015 ಮತ್ತು 2019ರಲ್ಲೂ ಇದೇ ವಿಷಯವಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಪೌರತ್ವಕ್ಕೆ ಸಂಬಂಧಿಸಿದ ದೂರುಗಳನ್ನು ಪೌರತ್ವ ಕಾಯ್ದೆ 1955 ರ ಸೆಕ್ಷನ್ 9(2) ರ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಮುಂದೆ ಪ್ರಸ್ತಾಪಿಸಬೇಕು ಎಂದು ನೆನಪಿಸಿತು.





