ಯುವತಿಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಕೃತ್ಯಕ್ಕೆ ಸಂತ್ರಸ್ತೆಯೇ ಕಾರಣ ಎಂಬಂತೆ ಅಲಹಾಬಾದ್ ಹೈಕೋರ್ಟ್ ಅಘಾತಕಾರಿ ತೀರ್ಪು ನೀಡಿದೆ. ‘ಮಹಿಳೆಯೇ ಸಮಸ್ಯೆಯನ್ನು ಮೈಗಳೆದುಕೊಂಡಿದ್ದಾರೆ. ಅವರ ವಿರುದ್ಧದ ಅಪರಾಧಕ್ಕೆ ಅವರೇ ಕಾರಣರಾಗಿದ್ದಾರೆ’ ಎಂದು ಹೇಳಿದ್ದು, ಆರೋಪಿಗೆ ಜಾಮೀನು ನೀಡಿದೆ.
2024ರ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಯುವತಿಯೊಬ್ಬರು ಮೇಲೆ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣದ ಆರೋಪಿ ನಿಶ್ಚಲ್ ಚಂದಕ್ ಎಂಬಾತನನ್ನು ಡಿಸೆಂಬರ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಸಂಜಯ್ ಕುಮಾರ್ ಸಿಂಗ್ ಅವರು ಮಾರ್ಚ್ 11ರಂದು ಆರೋಪಿಗೆ ಜಾಮೀನು ನೀಡಿದ್ದಾರೆ. ಅಲ್ಲದೆ, ವಿಚಾರಣೆ ವೇಳೆ, ಕೃತ್ಯಕ್ಕೆ ಸಂತ್ರಸ್ತೆಯೇ ಕಾರಣವೆಂಬ ರೀತಿಯಲ್ಲಿ ಮಾತನಾಡಿದ್ದಾರೆ. ಅವರ ತೀರ್ಪು ಮತ್ತು ಮಾತನಾಡಿದ್ದ ಕುರಿತಾದ ವರದಿಯು ಇದೀಗ ಮುನ್ನೆಲೆಗೆ ಬಂದಿದೆ.
“ಸಂತ್ರಸ್ತೆಯ ಆರೋಪ ನಿಜವೆಂದು ಒಪ್ಪಿಕೊಂಡರೂ ಸಹ, ಆಕೆಯೇ ಸಮಸ್ಯೆಯನ್ನು ಸ್ವತಃ ಮೈಗೆಳೆದುಕೊಂಡಿದ್ದಾರೆ. ಅಪರಾಧಕ್ಕೆ ಕಾರಣಳಾಗಿದ್ದಾರೆ ಎಂಬುದಾಗಿ ತೀರ್ಮಾನಿಸಬಹುದು ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ” ಎಂದು ನ್ಯಾಯಾಧೀಶ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ತನ್ನ ಮೇಲಾದ ಕೃತ್ಯದ ಬಗ್ಗೆ ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಯುವತಿ, “2024ರ ಸೆಪ್ಟೆಂಬರ್‌ನಲ್ಲಿ ತನ್ನ ಮೂವರು ಸ್ನೇಹಿತೆಯರೊಂದಿಗೆ ದೆಹಲಿಯ ಬಾರ್‌ಗೆ ಹೋಗಿದ್ದೆ. ಅಲ್ಲಿ, ಕೆಲವು ಪರಿಯಸ್ಥ ಸ್ನೇಹಿತರನ್ನು ಭೇಟಿ ಮಾಡಿದೆ. ಅವರಲ್ಲಿ ಆರೋಪಿ ನಿಶ್ಚಲ್ ಚಂದಕ್ ಕೂಡ ಒಬ್ಬ. ನಾವು ಬಾರ್‌ನಲ್ಲಿ ಮದ್ಯಪಾನ ಮಾಡಿದೆವು. ಬೆಳಗಿನ ಜಾವ 3 ಗಂಟೆವರೆಗೂ ಬಾರ್‌ನಲ್ಲಿಯೇ ಇದ್ದೆ. ಈ ವೇಳೆ, ತನ್ನೊಂದಿಗೆ ಬರುವಂತೆ ನಿಶ್ಚಲ್ ಒತ್ತಾಯಿಸುತ್ತಲೇ ಇದ್ದ. ಆದರೆ, ನಾನು ಹೋಗಲು ನಿರಾಕರಿಸಿದ್ದೆ. ಆದಾಗ್ಯೂ, ಬೆಳಗಿನ ಜಾವ ತಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯಲು ಕೇಳಿದ, ಆಗ, ನಾನು ಆತನೊಂದಿಗೆ ತೆರಳಿದೆ” ಎಂದು ತಿಳಿಸಿದ್ದರು.
“ಆದರೆ, ದಾರಿಯುದ್ದಕ್ಕೂ ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದ. ಅಲ್ಲದೆ, ನೋಯ್ಡಾದಲ್ಲಿರುವ ಮನೆಗೆ ಕರೆದೊಯ್ಯುವ ಬದಲು, ಗುರುಗಾಂವ್‌ನಲ್ಲಿರುವ ಆತನ ಸಂಬಂಧಿಯ ಮನೆಗೆ ಕರೆದೊಯ್ದು, ಅಲ್ಲಿ ಅತ್ಯಾಚಾರ ಎಸಗಿದ್ದಾನೆ” ಎಂದು ಯುವತಿ ಆರೋಪಿಸಿದ್ದರು.
ಈ ವರದಿ ಓದಿದ್ದೀರಾ?: ಅನಂತ್ ಅಂಬಾನಿಯ ಪಾದಯಾತ್ರೆ ಪ್ರಹಸನಕ್ಕೆ ಸನಾತನ ಧರ್ಮವೇ ಸರಕು!
ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ನೋಯ್ಡಾ ಪೊಲೀಸರು, 2024ರ ಡಿಸೆಂಬರ್ 11ರಂದು ಆರೋಪಿಯನ್ನು ಬಂಧಿಸಿದ್ದರು. ಆರೋಪಿ ನಿಶ್ಚಲ್ ಚಂದಕ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜಿಯಲ್ಲಿ, “ನಾನು ಆಕೆಯ ಮೇಲೆ ಅತ್ಯಾಚಾರ ಎಸಗಿಲ್ಲ. ನಮ್ಮಿಬ್ಬರ ನಡುವೆ ನಡೆದದ್ದು ಸಮ್ಮತಿಯ ಲೈಂಗಿಕತೆ. ಅದ ಅತ್ಯಾಚಾರವಲ್ಲ” ಎಂದು ವಾದಿಸಿದ್ದಾನೆ. ಅಲ್ಲದೆ, ಯುವತಿಯೇ ತನ್ನ ಮನಗೆ ಬಂದು ವಿಶ್ರಾಂತಿ ಪಡೆಯುವುದಾಗಿ ಒಪ್ಪಿಕೊಂಡಿದ್ದರು ಎಂದಿದ್ದಾನೆ.
ಆತನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಸಿಂಗ್, “ಸಂತ್ರಸ್ತ ಯುವತಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದಾರೆ. ಎಫ್‌ಐಆರ್‌ನಲ್ಲಿ ಬಹಿರಂಗಪಡಿಸಿದಂತೆ ಆಕೆಯು ಕೃತ್ಯದ ನೈತಿಕತೆ ಮತ್ತು ಮಹತ್ವವನ್ನು ಅರ್ಥಮಾಡಿಕೊಳ್ಳುವಷ್ಟು ಸಮರ್ಥಳಾಗಿದ್ದಾರೆ. ಯುವತಿಯ ವೈದ್ಯಕೀಯ ಪರೀಕ್ಷೆಯಲ್ಲಿ, ಆಕೆ ಲೈಂಗಿಕತೆಗೆ ಒಳಗಾಗಿರುವುದಾಗಿ ಹೇಳಲಾಗಿದೆ. ಆದರೆ, ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಬಗ್ಗೆ ವೈದ್ಯರು ಯಾವುದೇ ಅಭಿಪ್ರಾಯ ನೀಡಿಲ್ಲ” ಎಂದಿದ್ದಾರೆ.
“ಪ್ರಕರಣದ ಸಂಗತಿಗಳು, ಸಂದರ್ಭಗಳು ಹಾಗೂ ಅಪರಾಧದ ಸ್ವರೂಪ, ಸಾಕ್ಷ್ಯಗಳು, ಆರೋಪಿಗಳ ಶಾಮೀಲುದಾರಿಕೆ ಮತ್ತು ಎರಡು ಕಡೆಯವರ ವಕೀಲರ ವಾದಗಳನ್ನು ಗಮನದಲ್ಲಿಟ್ಟುಕೊಂಡು, ಅರ್ಜಿದಾರರು ಜಾಮೀನಿಗೆ ಸೂಕ್ತವಾದ ವಾದವನ್ನು ಮಂಡಿಸಿದ್ದಾರೆಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಜಾಮೀನು ನೀಡಿದ್ದಾರೆ.