ಇದು ಡಿಜಿಟಲ್ ಯುಗ ಎಲ್ಲವೂ ಡಿಜಿಟಲ್ ವ್ಯವಹಾರಗಳಾಗಿ ಮಾರ್ಪಡುತ್ತಿವೆ. ಇದೇ ಹೊತ್ತಿನಲ್ಲಿ ಸೈಬರ್ ಕ್ರೈಮ್ ಕೂಡ ಹೆಚ್ಚಾಗುತ್ತಿದ್ದು, ಗುಜರಾತ್‌ನ ಅಹಮದಾಬಾದ್ ಮತ್ತು ಸೂರತ್ ನಗರಗಳು ದೇಶದ ಸೈಬರ್ ಕ್ರೈಮ್ ಹಾಟ್‌ಸ್ಪಾಟ್‌ಗಳಾಗಿ ಗುರುತಿಸಿಕೊಂಡಿವೆ. ಈ ಎರಡು ನಗರಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿವೆ ಎಂದು ಐಐಟಿ ವರದಿ ನೀಡಿದೆ.
ಉತ್ತರ ಪ್ರದೇಶದ ಕಾನ್ಪುರ ಮೂಲದ ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಶನ್ (ಎಫ್‌ಸಿಆರ್‌ಎಫ್) ಹೊಸ ಅಧ್ಯಯನ ನಡೆಸಿ, ಈ ಮಾಹಿತಿಯನ್ನು ಖಚಿತಪಡಿಸಿದೆ.
ಸಂಸ್ಥೆ ಬಿಡುಗಡೆ ಮಾಡಿರುವ ವರದಿಯು 2020ರ ಜನವರಿ ಮತ್ತು 2023ರ ಜೂನ್ ನಡುವೆ ರಾಷ್ಟ್ರವ್ಯಾಪಿ ವರದಿಯಾದ ಸೈಬರ್ ಅಪರಾಧ ಘಟನೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದೆ. 18 ರಾಜ್ಯಗಳಲ್ಲಿ 83 ಸಣ್ಣ ಪಟ್ಟಣಗಳು ಮತ್ತು ನಗರಗಳನ್ನು ತ್ವರಿತವಾಗಿ ಸೈಬರ್ ಕ್ರೈಮ್ ಹಬ್‌ಗಳಾಗಿವೆ ಎಂದು ವರದಿ ಹೇಳಿದೆ.
ಆನ್‌ಲೈನ್ ಹಣಕಾಸು ವಂಚನೆ, ಹ್ಯಾಕಿಂಗ್ ಒಳಗೊಂಡಂತೆ ಅಧ್ಯಯನದಲ್ಲಿ ಗುರುತಿಸಲಾದ ಪ್ರಮುಖ ಸೈಬರ್ ಕ್ರೈಮ್‌ಗಳಾಗಿವೆ. ಗುಜರಾತ್‌ನಲ್ಲಿ ಟಾಸ್ಕ್ ಆಧಾರಿತ ಮತ್ತು ಮೊಬೈಲ್ ಆಧಾರಿತ ಹೂಡಿಕೆ ವಂಚನೆಗಳು ಹೆಚ್ಚುತ್ತಿವೆ ಎಂದು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ, ಕಳಪೆ ಕೆವೈಸಿ ನಿಯಮಗಳು ಅಪರಾಧಿಗಳನ್ನು ಹುಟ್ಟುಹಾಕುತ್ತಿವೆ ಎಂದು ವರದಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಮರ್ಯಾದೆಗೇಡು ಹತ್ಯೆ | ಪ್ರೀತಿಸಿದಕ್ಕೆ ಮಗಳನ್ನೇ ಕೊಂದ ತಂದೆ
“ಕಳೆದ 16 ತಿಂಗಳುಗಳಲ್ಲಿ, ಕಾರ್ಯ ಆಧಾರಿತ ಮತ್ತು ಮೊಬೈಲ್ ಅಪ್ಲಿಕೇಶನ್ ಆಧಾರಿತ ಹೂಡಿಕೆಗಳಲ್ಲಿ ಏರಿಕೆ ಕಂಡುಬಂದಿದೆ. ಅಹಮದಾಬಾದ್ ಪೊಲೀಸರು ಮೋಸದ ಜಾಲದಲ್ಲಿ ತೊಡಗಿರುವ ಗುಂಪುಗಳನ್ನು ಗುರುತಿಸಿದ್ದಾರೆ. ಈ ಗುಂಪುಗಳು ಸಂತ್ರಸ್ತರಿಗೆ ಗಣನೀಯ ನಷ್ಟವನ್ನು ಉಂಟುಮಾಡಿವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಈ ವರ್ಷದ ಜುಲೈನಲ್ಲಿ ಮುಂಬೈ, ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ಸೈಬರ್ ಅಪರಾಧಗಳ ವಿರುದ್ಧ ಕಾರ್ಯಾಚರಣೆಗಳು ನಡೆದಿವೆ. ಹೈದರಾಬಾದ್ ಪೊಲೀಸರು ನೂರಾರು ಕೋಟಿ ರೂಪಾಯಿ ಮೊತ್ತದ ಹೂಡಿಕೆ ವಂಚನೆಯ ಜಾಲವನ್ನು ಬಹಿರಂಗಪಡಿಸಿದ್ದಾರೆ. ಮೂರು ನಗರಗಳಿಂದ ಒಂಬತ್ತು ಜನರನ್ನು ಬಂಧಿಸಲಾಗಿದೆ. ಈ ಗುಂಪುಗಳ ಬಲೆಗೆ ಬಿದ್ದು ಹಲವಾರು ಸಂತ್ರಸ್ತರು ದೊಡ್ಡ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ.
ವರದಿ ಪಟ್ಟಿ ಮಾಡಿರುವ ಸೈಬರ್ ಕ್ರೈಮ್ ಹಾಟ್‌ಸ್ಪಾಟ್‌ಗಳ ಪೈಕಿ, ಪಶ್ಚಿಮ ಬಂಗಾಳವು ಅತಿ ಹೆಚ್ಚು ಅಂದರೆ 14 ಪಟ್ಟಣಗಳು ಮತ್ತು ನಗರಗಳನ್ನು ಹೊಂದಿದೆ. ಉತ್ತರ ಪ್ರದೇಶವು 11 ಪಟ್ಟಣಗಳನ್ನು ಹೊಂದಿದೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ನಗರಗಳೂ ಕಳವಳಕಾರಿಯಾಗಿ ಹಾಟ್‌ಸ್ಪಾಟ್‌ಗಳಾಗುತ್ತಿವೆ. “ಈ ಹಾಟ್‌ಸ್ಪಾಟ್‌ಗಳು ಡಿಜಿಟಲ್ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚುತ್ತಿರುವ ಪ್ರದೇಶಗಳನ್ನು ಪ್ರತಿನಿಧಿಸುತ್ತವೆ. ಕಾನೂನು ಜಾರಿ ಏಜೆನ್ಸಿಗಳು ಮತ್ತು ಸಾರ್ವಜನಿಕರನ್ನು ರಕ್ಷಿಸುತ್ತವೆ” ಎಂದು ಎಫ್‌ಸಿಆರ್‌ಎಫ್ ವರದಿ ನೀಡಿದೆ.
ಬಿಜೆಪಿ ‘ಗುಜರಾತ್ ಮಾಡೆಲ್’ ಮುಂದಿಟ್ಟು ಪ್ರಚಾರ ಮಾಡಿತ್ತು. ಚುನಾವಣೆಗಳಲ್ಲಿ ಮತ ಗಳಿಸಿತ್ತು, ಕೇಂದ್ರದಲ್ಲಿ ಅಧಿಕಾರಕ್ಕೇರಿತ್ತು. ದಿನ ಕಳೆದಂತೆ, ಗುಜರಾತ್ ಯಾವುದಕ್ಕೆ ಮಾಡೆಲ್ ಎನ್ನುವುದು ಒಂದೊಂದಾಗಿ ಬಿಚ್ಚಿಕೊಳ್ಳತೊಡಗಿದೆ, ಇದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ವ್ಯಂಗ್ಯಕ್ಕೆ ಗುರಿಯಾಗಿದೆ.