ಮಾಧ್ಯಮ ಪ್ರತಿನಿಧಿಯೊಬ್ಬರನ್ನು ಅನಗತ್ಯವಾಗಿ ವಶಕ್ಕೆ ಪಡೆದು, ಪೊಲೀಸ್ ಠಾಣೆಯಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ತೀವ್ರವಾಗಿ ಖಂಡಿಸಿದೆ.
ದೆಹಲಿಯಲ್ಲಿ ವರದಿಗಾರಿಕೆಯಲ್ಲಿ ತೊಡಗಿದ್ದ ಮಹಿಳಾ ಪತ್ರಕರ್ತೆಯೊಬ್ಬರನ್ನು ದೆಹಲಿಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತದನಂತರ ಪೊಲೀಸ್ ಠಾಣೆಯಲ್ಲಿ ಅವರ ಮೇಲೆ ದೈಹಿಕ ದೌರ್ಜನ್ಯ ಹಾಗೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಒಬ್ಬನ ತಲೆಬುರುಡೆ ಒಡೆದರೂ ಜೈಲಿಗೆ ಹೋಗಿಲ್ಲ, ಬಿಜೆಪಿ ‘ಆಶೀರ್ವಾದ’ದ ಬಲ ಎಂದ ಹಿಂದುತ್ವ ಕಾರ್ಯಕರ್ತ; ವಿಡಿಯೋ ವೈರಲ್
ಈ ಘಟನೆಯ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (KUWJ), ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಪ್ರಶ್ನಿಸಲು ಯತ್ನಿಸಿದ ವೇಳೆ 4PM ಸುದ್ದಿ ವಾಹಿನಿಯ ಪತ್ರಕರ್ತೆ ಶಾಹಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಅತ್ಯಂತ ಗಂಭೀರ ಹಾಗೂ ಖಂಡನೀಯವಾಗಿದೆ ಎಂದು ಹೇಳಿದ್ದಾರೆ.
“ಈ ಪ್ರಕರಣದ ಕುರಿತು ನ್ಯಾಯಸಮ್ಮತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು. ಘಟನೆ ನಡೆದ ಸ್ಥಳ ಹಾಗೂ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡಲೇ ಸಂರಕ್ಷಿಸಿ, ಸತ್ಯಾಂಶವನ್ನು ಬಹಿರಂಗಪಡಿಸಬೇಕು. ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು” ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಆಗ್ರಹಿಸಿದೆ.
“ಪತ್ರಕರ್ತರ ಧ್ವನಿಯನ್ನು ಬಲಪ್ರಯೋಗದಿಂದ ಹತ್ತಿಕ್ಕಲು ಸಾಧ್ಯವಿಲ್ಲ. ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ಪ್ರಜಾಪ್ರಭುತ್ವದ ಮೂಲ ಜವಾಬ್ದಾರಿಯಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಪತ್ರಕರ್ತೆ ಶಾಹಿನ್ ಅವರೊಂದಿಗೆ ನಿಲ್ಲುತ್ತದೆ” ಎಂದು ತಿಳಿಸಿದೆ.
ಇತ್ತೀಚೆಗೆ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಶಾಂತಿಯುತ ಪ್ರತಿಭಟನೆ ನಡೆಸಿದಾಗಲೂ ದೆಹಲಿ ಪೊಲೀಸರು ಪ್ರತಿಭಟನಾಕಾರ ವಿದ್ಯಾರ್ಥಿಗಳ ಮೇಲೆ ತೀವ್ರವಾದ ದಾಳಿ ನಡೆಸಿದ್ದರು. ಪೆಲೆಟ್ ಗನ್ ಬಳಸಿದ್ದರು ಮತ್ತು ಮೊಳೆಗಳಿದ್ದ ಲಾಠಿಯಿಂದ ತೀವ್ರವಾಗಿ ಲಾಠಿ ಚಾರ್ಜ್ ಮಾಡಿದ್ದರು. ಇದರಿಂದಾಗಿ ನೂರಾರು ವಿದ್ಯಾರ್ಥಿಗಳು, ಪೋಷಕರು ತೀವ್ರವಾಗಿ ಗಾಯಗೊಂಡಿದ್ದಾರೆ. ದೆಹಲಿ ಪೊಲೀಸರೊಂದಿಗೆ ಹಿಂದುತ್ವವಾದಿಗಳೂ ಸೇರಿಕೊಂಡಿದ್ದರು. ಇದನ್ನು ಹಿಂದುತ್ವವಾದಿ ನಾಯಕ ಸ್ವತಂತ್ರ ಭಾರದ್ವಾಜ್ ಪಾಡ್‌ಕಾಸ್ಟ್ ಒಂದರಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.





