“ನಾನು ಒಬ್ಬ ವ್ಯಕ್ತಿಯ ತಲೆಬುರುಡೆಯನ್ನೇ ಒಡೆದಿದ್ದರೂ ನನಗೆ ಜೈಲು ಶಿಕ್ಷೆಯಾಗಿಲ್ಲ. ಏಕೆಂದರೆ ನನ್ನ ಮೇಲೆ ಬಿಜೆಪಿ ನಾಯಕರ ಮತ್ತು ಸರ್ಕಾರದ ಆಶೀರ್ವಾದವಿದೆ” ದೆಹಲಿ ಮೂಲದ ಹಿಂದುತ್ವ ಕಾರ್ಯಕರ್ತ ಸ್ವತಂತ್ರ ಭಾರದ್ವಾಜ್ ಬಹಿರಂಗವಾಗಿ ಹೇಳಿಕೊಂಡಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ವೈರಲ್ ಆಗುತ್ತಿದೆ. ಈ ವಿಡಿಯೋ ತುಣುಕುಗಳು ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯೊಂದರ ಸಂದರ್ಭದಲ್ಲಿ ಬಾಲಕಿಯೊಬ್ಬಳ ತಂದೆಯ ಮೇಲೆ ಸ್ವತಂತ್ರ ಭಾರದ್ವಾಜ್ ತೀವ್ರವಾಗಿ ಹಲ್ಲೆ ನಡೆಸಿ, ಅವರ ತಲೆಬುರುಡೆಗೆ ಪೆಟ್ಟು ಬೀಳುವಂತೆ ಮಾಡಿದ್ದನೆಂದು ಸಾಮಾಜಿಕ ಹಕ್ಕುಗಳ ಹೋರಾಟಗಾರರು ಮತ್ತು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸೇರಿದಂತೆ ಹಲವು ಸಂಘಟನೆಗಳು ಆರೋಪಿಸಿದ್ದವು.
ಇದನ್ನೂ ಓದಿ: ಪೆಲೆಟ್ ಗನ್ ಬಳಕೆ ಮಾನವಹಕ್ಕು ಉಲ್ಲಂಘನೆಯಲ್ಲ: ಆರ್‌ಟಿಐ ಅರ್ಜಿಗೆ CRPF ಉತ್ತರ
ಈ ಗಂಭೀರ ಸ್ವರೂಪದ ಹಲ್ಲೆಯ ಘಟನೆ ನಡೆದಿದ್ದರೂ ಮತ್ತು ಆತನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಹಾಗೂ ಕಠಿಣ ಐಪಿಸಿ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದರೂ, ದೆಹಲಿ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿರಲಿಲ್ಲ.
ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡುತ್ತಾ ಭಾರದ್ವಾಜ್, ತನಗೆ ರಾಜಕೀಯ ನಾಯಕರ ಬೆಂಬಲವಿದೆ ಎಂಬುದನ್ನು ಅತಿ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. “ನಾನು ಹಲ್ಲೆ ನಡೆಸಿದರೂ ತನ್ನ ವಿರುದ್ಧ ಕಾನೂನು ಕ್ರಮ ಜರುಗಿಲ್ಲ, ಕಪಿಲ್ ಮಿಶ್ರಾ ಅವರಂತಹ ನಾಯಕರು ತನಗೆ ಬೆಂಬಲವಾಗಿದ್ದಾರೆ” ಎಂದು ಆತ ಬೀಗಿ ನುಡಿದಿದ್ದಾನೆ.
“ಯಾವ ಸೆಕ್ಷನ್ ಅನ್ವಯಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? 307. ಅಂದರೆ ಹಾಫ್ ಮರ್ಡರ್. ನಾನು ಹಲ್ಲೆ ಮಾಡಿದಾತನ ತಲೆಗೆ 60 ಹೊಲಿಗೆಗಳು ಹಾಕಬೇಕಾಗಿತ್ತು. ಆಂಬ್ಯುಲೆನ್ಸ್‌ನಲ್ಲಿ ಸಾಯುವ ಹಂತದಲ್ಲಿದ್ದನು. ಆತನ ಮಗಳು ಪೊಲೀಸ್ ಠಾಣೆಯ ಹೊರಗೆ ನಿಂತು ನನ್ನ ತಂದೆಗೆ ನ್ಯಾಯ ಸಿಗದಿದ್ದರೆ ನಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಳು. ಆದರೆ ನಾನು ಮರುದಿನವೇ ಠಾಣೆಯಿಂದ ಹೊರಗೆ ಬಂದೆ. ನಾನು ಜೈಲಿಗೆ ಹೋಗಿಲ್ಲ. ಇಡೀ ಜಗತ್ತಿಗೆ ತಿಳಿದಿರಬೇಕು, ನಾನು ಜೈಲಿಗೆ ಹೋಗಲಿಲ್ಲ. ನಾನು ರಾತ್ರಿಯಿಡೀ ಸುತ್ತಾಡುತ್ತಿದ್ದೆ” ಎಂದು ತನ್ನ ದುಷ್ಕೃತ್ಯವನ್ನು ಈ ಹಿಂದುತ್ವವಾದಿ ವಿವರಿಸಿದ್ದಾನೆ.
ಅದಾದ ಬಳಿಕ “ನನಗೆ ಹನುಮಂತ ದೇವರ ಆಶೀರ್ವಾದವಿದೆ. ಅಲ್ಲದೆ, ಕಪಿಲ್ ಮಿಶ್ರಾ ನನ್ನ ಅಣ್ಣನಂತೆ. ಕಪಿಲ್ ಮಿಶ್ರಾ ಅವರಿಂದ ಕರೆ ಬಂದ ಕೂಡಲೇ ನನ್ನನ್ನು ಬಿಡುಗಡೆ ಮಾಡಲಾಯಿತು. ಕಪಿಲ್ ಮಿಶ್ರಾ ನನ್ನ ಅಣ್ಣ, ಚಿರಾಗ್ ಪಾಸ್ವಾನ್ ನನ್ನ ಅಣ್ಣ. ನಿಮಗೆ ಯಾವ ನಾಯಕ ಗೊತ್ತು ಹೇಳಿ? ನಿಮಗೆ ಮೋದಿ ಜಿ ಗೊತ್ತಾ? ಮೋದಿ ಜಿ ಕೂಡಾ ನನ್ನ ಅಣ್ಣ. ನನಗೆ ಎಲ್ಲರ ಬೆಂಬಲವಿದೆ,” ಎಂದು ಭಾರದ್ವಾಜ್ ಹೇಳಿಕೊಂಡಿದ್ದಾನೆ.
ಈ ವೇಳೆ ಸಿಜೆಪಿ ಪ್ರತಿಭಟನೆಯಲ್ಲಿ ನಿಮ್ಮ ಕೈಯಲ್ಲಿದ್ದ ಲಾಠಿ ಎಲ್ಲಿಂದ ಬಂತು ಎಂದು ನಿರೂಪಕಿ ಪ್ರಶ್ನಿಸಿದ್ದು, “ನನ್ನ ಶೂ ನಿಮಗೆ ಕಾಣಿಸುತ್ತಿದೆಯೇ? ಈ ಶೂ ದೆಹಲಿ ಪೊಲೀಸರದ್ದು. ನಾನು ಯಾವುದೇ ಫಾರ್ಮ್ ತುಂಬುವುದಿಲ್ಲ. ಆದರೆ ಸ್ವಯಂಚಾಲಿತವಾಗಿ ನಾನು ದೆಹಲಿ ಪೊಲೀಸರಂತೆ ತಿರುಗಾಡುತ್ತೇನೆ. ನನ್ನ ಶೂ ದೆಹಲಿ ಪೊಲೀಸರದ್ದು, ಲಾಠಿ ಇತ್ಯಾದಿ ಎಲ್ಲವೂ ದೆಹಲಿ ಪೊಲೀಸರದ್ದೇ” ಎಂದು ಕೊಲೆ ಯತ್ನದ ಆರೋಪಿ ಭಾರದ್ವಾಜ್ ನಗುತ್ತಾ ಹೇಳಿದ್ದಾರೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಒಬ್ಬ ಕೊಲೆ ಯತ್ನದ ಆರೋಪಿ ಇಷ್ಟೊಂದು ನಿರ್ಭಯವಾಗಿ, ಬಹಿರಂಗವಾಗಿ ತನ್ನ ತಪ್ಪುಗಳನ್ನೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವುದಾದರೆ ನಮ್ಮ ದೇಶ ಯಾವ ಸ್ಥಿತಿಗೆ ಬಂದು ತಲುಪಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸಿಜೆಪಿ ನಾಯಕರು, ವಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಜೆಪಿ ನಾಯಕ ಸೌರವ್ ದಾಸ್, “ಮ್ಮ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಬಿಜೆಪಿ ರಕ್ಷಣೆಯಲ್ಲಿರುವ ಗೂಂಡಾ ಸ್ವತಂತ್ರ ಭಾರದ್ವಾಜ್ ದಲಿತ ವ್ಯಕ್ತಿ ಸಂಜಯ್ ಮೇಲೆ ಹಲ್ಲೆ ನಡೆಸಿದ ನಂತರ ನಿಖರವಾಗಿ ಏನಾಯಿತು ಎಂದು ನಾನು ನಿಮಗೆ ಹೇಳುವುದು ಬೇಕಾಗಿಲ್ಲ. ಸಂಜಯ್ ಜಿ ಅವರ ತಲೆಬುರುಡೆ ಬಿರುಕು ಬಿಟ್ಟಿತ್ತು. ಗಾಯ ಎಷ್ಟು ದೊಡ್ಡದಾಗಿತ್ತೆಂದರೆ ಎಫ್‌ಐಆರ್‌ನಲ್ಲಿ (ಐಪಿಸಿಯ ಸೆಕ್ಷನ್ 307) ಕೊಲೆ ಯತ್ನ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸುವಂತಿತ್ತು. ಆದರೆ ಪೊಲೀಸರು ಆ ಸೆಕ್ಷನ್ ಸೇರಿಸಲು ನಿರಾಕರಿಸಿದರು. ಇದು ಜಾಮೀನು ರಹಿತ ಅಪರಾಧವಾಗಿರುವುದರಿಂದ ಆರೋಪಿಗಳನ್ನು ತಕ್ಷಣ ಬಂಧನ ಮಾಡಬೇಕಾಗುತ್ತಿತ್ತು. ಈ ಬಂಧನವನ್ನು ತಪ್ಪಿಸಲು ಪೊಲೀಸರು ಈ ಸೆಕ್ಷನ್ ಸೇರಿಸಲು ನಿರಾಕರಿಸಿದರು” ಎಂದು ಆರೋಪಿಸಿದ್ದಾರೆ.
“ಈ ಸಮಯದಲ್ಲಿ, ‘ಗಂಭೀರ ಗಾಯ’ ಎಂಬ ಸೆಕ್ಷನ್ (ಸೆಕ್ಷನ್ 326) ಅನ್ನು ಸೇರಿಸಬೇಕೆಂದು ನಾವು ಕೇಳಿಕೊಂಡೆವು. ಈ ಸೆಕ್ಷನ್ ಅಡಿಯಲ್ಲಿಯೂ ಆರೋಪಿಗಳನ್ನು ತಕ್ಷಣ ಬಂಧಿಸಬೇಕಾಗುತ್ತದೆ. ಆದರೆ ಈ ಸೆಕ್ಷನ್ ಅಡಿ ಎಫ್‌ಐಆರ್ ದಾಖಲಿಸಲು ಡಿಸಿಪಿ ಸಚಿನ್ ಶರ್ಮಾ, ಎಸಿಪಿ ಅಜಯ್ ಶರ್ಮಾ ಅವರು ನಿರಾಕರಿಸಿದರು. ಅಷ್ಟೇ ಅಲ್ಲ, ‘ಕೋರ್ಟ್ ಆದೇಶ ಪಡೆದುಕೊಂಡು ಬನ್ನಿ’ ಎಂದು ಹೇಳಿದ್ದರು. ತಜ್ಞ ವೈದ್ಯಕೀಯ ಅಭಿಪ್ರಾಯವನ್ನು ನಮಗೆ ಇನ್ನೂ ಸಿಕ್ಕಿಲ್ಲ” ಎಂದೂ ದಾಸ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
“ಈಗ ದೆಹಲಿ ಸಚಿವ ಕಪಿಲ್ ಮಿಶ್ರಾ ಅವರು ಪೊಲೀಸ್ ಠಾಣೆಯಿಂದ ತಮ್ಮನ್ನು ಬಿಡುಗಡೆ ಮಾಡಿದ್ದಾಗ, ಕಠಿಣ ಸೆಕ್ಷನ್‌ಗಳನ್ನು ಹಾಕದಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾಗಿ ಭಾರದ್ವಾಜ್ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ಕಾನೂನುಬಾಹಿರವಾಗಿ ಹಸ್ತಕ್ಷೇಪ ಮಾಡಿದ ಆರೋಪದಲ್ಲಿ ಎಫ್‌ಐಆರ್‌ನಲ್ಲಿ ಮಿಶ್ರಾ ಅವರ ಹೆಸರೂ ಸೇರಿಸಬಾರದೇಕೆ? ಗ್ಯಾಂಗ್ ಸದಸ್ಯರನ್ನು ರಕ್ಷಿಸಿದ್ದಕ್ಕಾಗಿ ಮತ್ತು ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಮಿಶ್ರಾ ರಾಜೀನಾಮೆ ಏಕೆ ನೀಡಬಾರದು? ಬಿಜೆಪಿ ನಾಯಕತ್ವ ಇದನ್ನು ಬೆಂಬಲಿಸುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಿಜೆಪಿಯ ಅಶುತೋಷ್ ರಾಂಕಾ ಕೂಡಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸೌರವ್ ದಾಸ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಇನ್ನು ದೆಹಲಿಯ ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಈ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ನೀವು ಈ ವಿಡಿಯೋವನ್ನು ಖಂಡಿತ ನೋಡಲೇಬೇಕು. ವಿಡಿಯೋ ನೋಡಿದರೆ ನಿಮ್ಮ ರಕ್ತ ಕುದಿಯುತ್ತದೆ. ಮುಂದೊಂದು ದಿನ ಈ ದೇಶಕ್ಕೆ ಇಂತಹ ಗೂಂಡಾಗಳನ್ನು ಬಹಿರಂಗವಾಗಿ ರಕ್ಷಿಸುವ ಪ್ರಧಾನಿ ಸಿಗಲಿ ಎಂಬ ಉದ್ದೇಶದಿಂದಲೇ ಭಗತ್ ಸಿಂಗ್‌ರಂತಹ ವೀರರು ತಮ್ಮ ಪ್ರಾಣ ತೆತ್ತಿದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇಟ್ ಕೂಡ ಈ ಪಾಡ್‌ಕಾಸ್ಟ್‌ನ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. “ಇದು ಸ್ವತಂತ್ರ ಭಾರದ್ವಾಜ್. ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರ ತಂದೆಯ ಮೇಲೆ ಹಲ್ಲೆ ಮಾಡಿದ್ದೇನೆ. ಅವರ ತಲೆಗೆ 60 ಹೊಲಿಗೆಗಳು ಬೇಕಾಗಿದ್ದವು. ಅವರು ಸಾವಿನ ಅಂಚಿನಲ್ಲಿದ್ದರು. ಆದರೆ ಅವನು ಜೈಲಿಗೆ ಹೋಗಲಿಲ್ಲ. ರಾತ್ರಿಯಿಡೀ ನಿರ್ಭಯವಾಗಿ ಸುತ್ತಾಡಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾನೆ. ತನಗೆ ಕಪಿಲ್ ಮಿಶ್ರಾ, ಚಿರಾಗ್ ಪಾಸ್ವಾನ್, ಮೋದಿಜಿ ಬೆಂಬಲಿವಿದೆ, ಅವರು ನನ್ನ ಅಣ್ಣಂದಿರು ಎಂದೂ ಹೇಳಿಕೊಂಡಿದ್ದಾನೆ” ಎಂದು ಬರೆದಿದ್ದಾರೆ.
ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿನ ಹಲವು ಅಧ್ವಾನಗಳನ್ನು ಪ್ರಶ್ನಿಸಿ, ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಜುಲೈನಲ್ಲಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪೊಲೀಸರು ಮತ್ತು ಹಿಂದುತ್ವವಾದಿಗಳು ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳನ್ನು ಬಳಸಿದ್ದರು ಹಾಗೂ ಮೊಳೆಗಳನ್ನು ಜೋಡಿಸಲಾಗಿದ್ದ ಲಾಠಿಗಳಿಂದ ಬಳಸಿ ತೀವ್ರ ಸ್ವರೂಪದ ಲಾಠಿಚಾರ್ಜ್ ನಡೆಸಿದ್ದರು. ನೂರಾರು ವಿದ್ಯಾರ್ಥಿಗಳು, ಪೋಷಕರು ಗಂಭೀರವಾಗಿ ಗಾಯಗೊಂಡಿದ್ದರು.
ಪೊಲೀಸರು ಮೊಳೆಗಳಿದ್ದ ಲಾಠಿಗಳನ್ನು ಹಿಡಿದುಕೊಂಡಿರುವ ಮತ್ತು ಪೆಲೆಟ್ ಗನ್‌ಗಳಿಂದ ಗಾಯಗೊಂಡವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಆರಂಭದಲ್ಲಿ ದೆಹಲಿ ಪೊಲೀಸರು ಈ ಆರೋಪಗಳನ್ನು ನಿರಾಕರಿಸಿದ್ದರು. ಆದರೆ, ಪರಿಸ್ಥಿತಿ ಕೈಮೀರಿದಾಗ ನಿಯಮಾವಳಿಗಳ ಪ್ರಕಾರವೇ ‘ಗ್ರೇಡೆಡ್ ರೆಸ್ಪಾನ್ಸ್’ ಭಾಗವಾಗಿ ಪ್ಲಾಸ್ಟಿಕ್/ರಬ್ಬರ್ ಪೆಲೆಟ್‌ಗಳನ್ನು ಬಳಸಲಾಗಿದೆ ಎಂದು ಬಳಿಕ ವಾದಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿಪಕ್ಷ ನಾಯಕರು, ಗಾಯಗೊಂಡ ಪ್ರತಿಭಟನಾಕಾರರ ಪರವಾಗಿ ನಿಂತು ದೆಹಲಿ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಇಂತಹ ಅಮಾನವೀಯ ಬಲಪ್ರಯೋಗ ಮಾಡಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಿದೆ ಎಂದು ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಈ ನಡುವೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಗಾಯಗೊಂಡ ಪ್ರತಿಭಟನಾಕಾರರು ಈ ಮಾರಕ ಅಸ್ತ್ರಗಳ ಬಳಕೆಯನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜನಸಂದಣಿ ನಿಯಂತ್ರಣಕ್ಕೆ ಇಂತಹ ಕಠಿಣ ಆಯುಧಗಳನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಎಂಬುದರ ಬಗ್ಗೆ ಸ್ಪಷ್ಟ ‘ಮಾರ್ಗಸೂಚಿ’ಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸುವ ಇಂಗಿತ ವ್ಯಕ್ತಪಡಿಸಿದೆ.





