ಜಾತಿ ತಾರತಮ್ಯದ ಆರೋಪದ ನಡುವೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಡಿಎಂಕೆಯ ಪಪ್ಪಕುಡಿ ಪಂಚಾಯತ್ ಯೂನಿಯನ್ ಅಧ್ಯಕ್ಷೆ ಪೂಂಗೋಥೈ ಶಶಿಕುಮಾರ್ ಅವರು ರಾಜೀನಾಮೆ ನೀಡಿದ್ದಾರೆ.
ಅತ್ಯಂತ ಹಿಂದುಳಿದ ವರ್ಗ (ಎಂಬಿಸಿ) ಸಮುದಾಯಕ್ಕೆ ಸೇರಿದ ಪಂಚಾಯತ್ ಉಪಾಧ್ಯಕ್ಷ ಜಾತಿ ಆಧಾರಿತ ತಾರತಮ್ಯವನ್ನು ಮಾಡುತ್ತಾರೆ ಎಂಬ ಕಾರಣ ನೀಡಿ ಪೂಂಗೋಥೈ ಶಶಿಕುಮಾರ್ ಇತ್ತೀಚೆಗೆ ತಿರುನಲ್ವೇಲಿ ಕಲೆಕ್ಟರ್ ಡಾ ಕೆ ಪಿ ಕಾರ್ತಿಕೇಯನ್ ಮತ್ತು ಡಿಎಂಕೆ ನಾಯಕರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಪೂಂಗೋಥೈ ಶಶಿಕುಮಾರ್ ಅವರು ಎರಡು ವರ್ಷಗಳ ಹಿಂದೆ ತಮ್ಮ ಹುದ್ದೆಯನ್ನು ತ್ಯಜಿಸಲು ಮುಂದಾಗಿದ್ದರು. ಜಾತಿ ತಾರತಮ್ಯ ನಡೆಯುತ್ತಿರುವ ಬಗ್ಗೆ ಅಂದಿನ ಕಲೆಕ್ಟರ್ ವಿ ವಿಷ್ಣು ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಡಿಎಂಕೆ ನಾಯಕತ್ವವು ಹುದ್ದೆಯಲ್ಲಿ ಮುಂದುವರಿಯಲು ಆಕೆಯ ಮನವೊಲಿಸಿತ್ತು ಎಂದು ವರದಿಯಾಗಿದೆ. ಇಂದಿಗೂ ಜಾತಿ ತಾರತಮ್ಯ ನಡೆಯುತ್ತಲೇ ಇದೆ ಎಂದು ಆರೋಪಿಸಿ ಪೂಂಗೋಥೈ ಶಶಿಕುಮಾರ್ ರಾಜೀನಾಮೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶದಲ್ಲಿ ಜಾತಿ ತಾರತಮ್ಯಕ್ಕೆ ದಲಿತ ಸರ್ಕಾರಿ ವೈದ್ಯರ ಬಲಿ
ಈ ಬಗ್ಗೆ ಮಾಧ್ಯಮ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ ಕಾರ್ತಿಕೇಯನ್ ಅಧ್ಯಕ್ಷೆ ಪೂಂಗೋಥೈ ಶಶಿಕುಮಾರ್ ಅವರು ರಾಜೀನಾಮೆ ನೀಡಿರುವುದನ್ನು ಖಚಿತಪಡಿಸಿದ್ದಾರೆ.
“ಅಧ್ಯಕ್ಷರು, ಅವರ ಪತಿ ಮತ್ತು ಉಪಾಧ್ಯಕ್ಷರ ನಡುವೆ ಜಗಳ ನಡೆದಿದೆ ಎಂದು ಆರೋಪಗಳಿವೆ. ವಿವರವಾದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಪೂರ್ಣಗೊಂಡ ಬಳಿಕವಷ್ಟೇ ಅವರ ರಾಜೀನಾಮೆ ಕುರಿತು ನಿರ್ಧಾರ ಕೈಗೊಳ್ಳಬಹುದು” ಎಂದು ತಿಳಿಸಿದ್ದಾರೆ.
ಪೂಂಗೋಥೈ ಅವರ ಪತಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ” ಪಂಚಾಯತ್ ಉಪಾಧ್ಯಕ್ಷ ಮತ್ತು ಡಿಎಂಕೆ ಯೂನಿಯನ್ ಕಾರ್ಯದರ್ಶಿ ಮರಿವಣ್ಣಮುತ್ತು ಅವರು ಜಾತಿಯ ಕಾರಣಕ್ಕಾಗಿ ಪೂಂಗೋಥೈ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಆಕೆಗೆ ಕಚೇರಿಯಲ್ಲಿ ಕೆಲಸ ಮಾಡಲು ಸರಿಯಾದ ಕುರ್ಚಿ, ಮೇಜು ಕೂಡ ನೀಡಿಲ್ಲ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಜಾತಿ ಆಧಾರದಲ್ಲಿ ಕೈದಿಗಳ ನಡುವೆ ತಾರತಮ್ಯ ಸಲ್ಲ: ಸುಪ್ರೀಂ ಕೋರ್ಟ್
“ಇತ್ತೀಚೆಗಷ್ಟೇ ಉಪಾಧ್ಯಕ್ಷರ ಬೆಂಬಲಿಗರೊಬ್ಬರು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ತಾನೇ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದರು. ನಮ್ಮ ಪಕ್ಷದ ಅಧ್ಯಕ್ಷ ಎಂಕೆ ಸ್ಟಾಲಿನ್, ಡಿಎಂಕೆ ಸಂಸದೆ ಕನಿಮೋಳಿ ಮತ್ತು ಪಕ್ಷದ ಜಂಟಿ ಸಂಘಟನಾ ಕಾರ್ಯದರ್ಶಿ ಅನ್ಬಗಂ ಕಲೈ ಅವರ ಬಳಿ ನಾವು ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ” ಎಂದು ತಿಳಿಸಿದರು.
