ಬಾಗಲಕೋಟೆ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಸರ್ಕಾರ ನಿರ್ಧಾರಕ್ಕೆ ಮಹಾರಾಷ್ಟ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸದಂತೆ ಕರ್ನಾಟಕವನ್ನು ತಡೆಯಿರಿ ಎಂದು ಒತ್ತಾಯಿಸಿದೆ
ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್ ಪಾಟೀಲ್ ಅವರನ್ನು ಭೇಟಿ ಮಾಡಿರುವ ಮಹಾರಾಷ್ಟ್ರ ನೀರಾವರಿ ಸಚಿವ ರಾಧಾಕೃಷ್ಣ ಪಾಟೀಲ್ ಅವರು ಕರ್ನಾಟಕದ ವಿರುದ್ಧ ದೂರು ನೀಡಿದ್ದಾರೆ. “ಕರ್ನಾಟಕವು ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಲು ಮುಂದಾಗಿದೆ. ಇದು ಕಾರ್ಯಗತವಾದರೆ, ಜಲಾಶಯದ ಹಿನ್ನೀರಿನಿಂದ ಮಹಾರಾಷ್ಟ್ರದ ಸಾಂಗ್ಲಿ, ಸತಾರಾ ಹಾಗೂ ಕೊಲ್ಹಾಪುರ ಜಿಲ್ಲೆಯ ಕೆಲವು ಪ್ರದೇಶಗಳು ಮುಳುಗುವ ಮತ್ತು ಪ್ರವಾಹ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ” ಎಂದು ಆರೋಪಿಸಿದ್ದಾರೆ.
“ಜಲಾಶಯದ ಎತ್ತರ ಹೆಚ್ಚಿಸುವುದರಿಂದ, ಮಹಾರಾಷ್ಟ್ರದ ಗಡಿ ಭಾಗದಲ್ಲಿ ಗಂಭೀರ ಪರಿಣಾಮಗಳು ಎದುರಾಗುತ್ತವೆ. ಇದು, ಪರಿಸರ ಮತ್ತು ಮನುಷ್ಯರ ಮೇಲೆ ನಾನಾ ಹಾನಿಗೆ ಕಾರಣವಾಗುತ್ತದೆ. ಇದೆಲ್ಲವನ್ನೂ ಪರಿಗಣಿಸಿಯೇ ಮಹಾರಾಷ್ಟ್ರವು ಕರ್ನಾಟಕದ ಯೋಜನೆಯನ್ನು ನಿರಂತರವಾಗಿ ಆಕ್ಷೇಪಿಸುತ್ತಲೇ ಬಂದಿದೆ. ಜಲಾಶಯ ಎತ್ತರದಿಂದ ಆಗುವ ನಷ್ಟಗಳ ಎಲ್ಲ ಅಂಕಿಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಕೇಂದ್ರ ಸರ್ಕಾರವು ಕರ್ನಾಟಕದ ಪ್ರಸ್ತಾಪವನ್ನು ರದ್ದುಗೊಳಿಸಬೇಕು” ಎಂದು ಕೇಂದ್ರ ಸಚಿವರನ್ನು ರಾಧಾಕೃಷ್ಣ ಪಾಟೀಲ್ ಒತ್ತಾಯಿಸಿದ್ದಾರೆ.