ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ನಿರ್ವಹಿಸುತ್ತಿರುವ ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ (ಮೃಗಾಲಯ) ಕೊಲ್ಲಾಪುರದ ನಂದನಿ ಮಠದಲ್ಲಿರುವ ದೇವಾಲಯದ ಆನೆಯನ್ನು ಕೇಂದ್ರ ಸರ್ಕಾರ ಸ್ಥಳಾಂತರಿಸಿದೆ. ಈ ನಡೆಯನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದ ಜೈನ ಸಮುದಾಯವು ವಿರೋಧಿಸಿದೆ.
ಪೆಟಾ-ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಆನೆಯನ್ನು ವಂತಾರ ಮೃಗಾಲಯಕ್ಕೆ ವರ್ಗಾಯಿಸಲು ಸೂಚಿಸಿತ್ತು. ಅದರಂತೆ ಆನೆಯನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಈ ಕ್ರಮವನ್ನು ಅನೇಕ ಜೈನರು ಖಂಡಿಸಿದ್ದಾರೆ. ಆನೆಯನ್ನು ಅನಂತ್ ಅಂಬಾನಿಯ ಖಾಸಗಿ ಉದ್ಯಮವಾಗಿರುವ ವಂತಾರ ಕೇಂದ್ರದಲ್ಲಿ ಇರಿಸುವ ಬದಲು ಮಠಕ್ಕೆ ಹಿಂತಿರುಗಿಸಬೇಕು ಅಥವಾ ಸರ್ಕಾರಿ ಮೃಗಾಯಲಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಜೈನ ಸಮುದಾಯದವರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಭಾರತದಾದ್ಯಂತದ ಪ್ರಮುಖ ಜೈನ ಸಂತರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಆನೆಯನ್ನು ಮಠಕ್ಕೆ ಹಿಂದಿರುಗಿಸುವಂತೆ ಒತ್ತಾಯಿಸಿ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರಿಗೆ ಅರ್ಜಿ ಸಲ್ಲಿಸಲು ಉದ್ದೇಶಿಸಿದೆ.