5 ಸಾವಿರ ಕೋಟಿ ಖರ್ಚು ಮಾಡಿ ಮಗನ ಮದುವೆ ಮಾಡಿದ್ದ ಮುಖೇಶ್ ಅಂಬಾನಿ ಈಗ ಸುದ್ದಿಯಲ್ಲಿದ್ದಾರೆ. ಟೆಲಿಕಾಂ ವಲಯದ ದೈತ್ಯ ಕಂಪನಿಯಾದ ರಿಲಯನ್ಸ್ ಜಿಯೋ ತನ್ನ 1 ಕೋಟಿಗೂ ಅಧಿಕ ಗ್ರಾಹಕರನ್ನು ಕಳೆದುಕೊಂಡಿದೆ. ಜಿಯೋ ವಿರುದ್ಧ ಗ್ರಾಹಕರು ಸಿಟ್ಟಾಗಿದ್ದಾರೆ. ಜಿಯೋಗೆ ಗುಡ್ ಬೈ ಹೇಳುತ್ತಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯಾದ ಮುಕೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿಯ ವಿವಾಹೋತ್ಸವಕ್ಕೆ ಬರೋಬ್ಬರಿ 5,000 ಕೋಟಿ ವೆಚ್ಚ ಮಾಡಿ, ಇಡೀ ಜಗತ್ತೇ ಹುಬ್ಬೇರುವಂತೆ ಮಗನ ಮದುವೆ ಮಾಡಿದ್ದರು. ಮಾರ್ಚ್ 2024ರ ಆರಂಭದಲ್ಲಿ ವಿವಾಹಪೂರ್ವ ಕಾರ್ಯಕ್ರಮಗಳು ನಡೆದಿದ್ದವು. ಜುಲೈ 12ರಿಂದ ನಾಲ್ಕು ದಿನ ವಿವಾಹ ಕಾರ್ಯಕ್ರಮಗಳು ನಡೆದವು. ಬರೋಬ್ಬರಿ ಈ ಮದುವೆ ಸಂಭ್ರಮ ಒಂದು ವರ್ಷವೇ ನಡೆಯಿತು. ದೇಶದ ಬಹುಸಂಖ್ಯಾತರು ಒಂದು ದಿನದ ಮದುವೆ ಕಾರ್ಯಕ್ರಮ ಮಾಡಲೂ ಆಗದೆ ಮದುವೆಗಾಗಿ ತಿಣಕಾಡುವ, ಸಾಲ ಮಾಡುತ್ತಿರುವ ಸಮಯದಲ್ಲಿ ಮುಕೇಶ್ ಅಂಬಾನಿ ಮಾಡಿದ ಮದುವೆ ಸಂಪತ್ತು ಕ್ರೋಢೀಕರಣದ ಬಗೆಗಿನ ಚರ್ಚೆಯನ್ನೂ ಹುಟ್ಟು ಹಾಕಿತ್ತು.
ಭಾರತದ ಶೇ.50ಕ್ಕಿಂತಲೂ ಹೆಚ್ಚು ಸಂಪತ್ತು ಕೆಲವೇ ಅತಿ ಶ್ರೀಮಂತರ ಬಳಿ ಶೇಖರಣೆಯಾಗಿದೆ ಎಂದು ಹಲವಾರು ಸಮೀಕ್ಷೆಗಳು ಹೇಳುತ್ತಿವೆ. ಅಂತೆಯೇ, ಮೋದಿ ಆಡಳಿತದಲ್ಲಿ ಹೆಚ್ಚು ಲಾಭ ಮಾಡಿಕೊಂಡು, ದೇಶದ ಹೆಚ್ಚಿನ ಸಂಪತ್ತನ್ನು ತಮ್ಮ ಕಿಸೆಯಲ್ಲಿ ಇಟ್ಟುಕೊಂಡಿರುವ ಇಬ್ಬರು ಗುಜರಾತಿ ಉದ್ಯಮಗಳಲ್ಲಿ ಮುಕೇಶ್ ಅಂಬಾನಿ ಒಬ್ಬರು. ಮತ್ತೊಬ್ಬರು ಗೌತಮ್ ಅದಾನಿ.
ಇಡೀ ದೇಶದಲ್ಲಿಯೇ ಯಾರು ಮಾಡದಂತೆ ಮುಕೇಶ್ ಅಂಬಾನಿ ತನ್ನ ಮಗ ಅನಂತ್ ಅಂಬಾನಿಯ ಮದುವೆ ಮಾಡಿದ್ದಾರೆ. ಅನಂತನ ವಿವಾಹೋತ್ಸವಕ್ಕೆ ಬರೋಬ್ಬರಿ 5,000 ಕೋಟಿ ವೆಚ್ಚ ಮಾಡಿದ್ದಾರೆ. ನಾವೆಲ್ಲರೂ, ಮದುವೆಗೆ ಬಂದ ಅತಿಥಿಗಳಿಗೆ ಊಡುಗೂರೆ ನೀಡುವುದನ್ನ ಸಾಮಾನ್ಯವಾಗಿ ನೋಡಿದ್ದೇವೆ. ಆದರೆ, ಅಂಬಾನಿ ರಿಲಯನ್ಸ್ ಗ್ರೂಪ್‌ನಲ್ಲಿ ಕೆಲಸ ಮಾಡುವ ಎಲ್ಲರಿಗೂ ಸ್ವೀಟ್ ಬಾಕ್ಸ್ ಕಳಿಸಿದ್ದರು. ಮಾತ್ರವಲ್ಲದೆ, ಮದುವೆಗೆ ಬಂದ ಸೆಲೆಬ್ರಿಟಿಗಳಿಗೆ ಬರೋಬ್ಬರಿ ₹2 ಕೋಟಿ ಮೌಲ್ಯದ ವಾಚ್ ಗಿಫ್ಟ್ ಮಾಡಿದ್ದಾರೆ. ಇನ್ನು, ಅವರು ಮಾಡಿಸಿದ್ದ ವಿವಾಹ ಆಮಂತ್ರಣ ಪತ್ರಿಕೆಯ ಬೆಲೆ ಭಾರತೀಯನ ತಲಾ ಆದಾಯಕ್ಕಿಂತ 5 ಪಟ್ಟು ಹೆಚ್ಚು ಮೌಲ್ಯದ್ದಾಗಿದೆ. ಅಂದರೆ, ಒಂದು ಆಮಂತ್ರಣ ಪತ್ರಿಕೆಯ ಮೌಲ್ಯ ಸುಮಾರು 6-7 ಲಕ್ಷ ರೂಪಾಯಿ. ಜೊತೆಗೆ, ಇಂಟರ್ ನ್ಯಾಷನಲ್ ಲೆವೆಲ್ ಹೆಸರು ಮಾಡಿದ್ದ ಸಿಂಗರ್ಸ್, ಡಾನ್ಯರ್ಸ್‌ಗಳನ್ನು ಕೋಟಿ ಕೋಟಿ ನೀಡಿ ಮದುವೆಗೆ ಕರೆಸಲಾಗಿತ್ತು.
ಹೇಳಿ-ಕೇಳಿ ವ್ಯಾಪಾರಿಯಾಗಿರುವ ಅಂಬಾನಿ, ಇಷ್ಟೊಂದು ಆಡಂಬರದ ಮದುವೆಗೆ ಹಾಕಿದ ಬಂಡವಾಳವನ್ನು ಮತ್ತೆ ಪಾವಸ್ ಪಡೆಯಲೇಬೇಕಲ್ಲ. ಅದಕ್ಕಾಗಿ, ಅವರು ಕೈಹಾಕಿದ್ದು, ಭಾರತೀಯರ ಜೇಬಿಗೆ. ಮದುವೆಗಾಗಿ ಖರ್ಚು ಮಾಡಿದ ಹಣವನ್ನು ಮರಳಿ ಪಡೆಯಲು ಅಂಬಾನಿ ಭಾರತೀಯ ಜನರಿಂದ ವಸೂಲಿ ಮಾಡಲು ಇಳಿದಿದ್ದಾರೆ. ಅಂಬಾನಿ ವಿರುದ್ಧ ಇದೀಗ ಭಾರತೀಯರು ತಿರುಗಿಬಿದ್ದಿದ್ದಾರೆ.
ಅಂಬಾನಿ ಮಗನ ಮದುವೆ ಸಮಯದಲ್ಲಿಯೇ ಅವರ ಒಡೆತನದ ಜಿಯೋ ನೆಟ್ ವರ್ಕ್ ರಿಚಾರ್ಜ್ ಬೆಲೆಯನ್ನು ವಿಪರೀತ ಏರಿಕೆ ಮಾಡಲಾಯಿತು. ಕಂಪನಿಯು ಬಹುತೇಕ ಎಲ್ಲ ರಿಚಾರ್ಜ್ ಯೋಜನೆಗಳ ದರವನ್ನು ಗಣನೀಯವಾಗಿ ಏರಿಸಿತು.
ಒಂದು ಜಿಬಿ ಡಾಟಾ ಪ್ಯಾಕ್‌ನ ರೀಚಾರ್ಜ್ ₹15 ಇದ್ದದ್ದನ್ನು ₹19ಗೆ ಏರಿಕೆ ಮಾಡಲಾಗಿತ್ತು. 84 ದಿನಗಳ ಪ್ಯಾಕ್ ದರವನ್ನು ₹666 ರಿಂದ ₹799 ಗೆ ಏರಿಕೆ ಮಾಡಲಾಗಿದೆ. 75 ಜಿಬಿ ಪೋಸ್ಟ್ ಪೇಯ್ಡ್ ಡಾಟಾ ಬೆಲೆ ₹399 ರಿಂದ ₹499 ಇರಲಿದೆ. ₹1599 ರೂಪಾಯಿ ರಿಚಾರ್ಜ್ ಬೆಲೆ ₹1899 ಆಗಲಿದೆ. ₹2,999 ವಾರ್ಷಿಕ ಪ್ಯಾಕ್ ₹3,599ಗೆ ಏರಿಕೆಯಾಗಿದೆ. ಅಂದರೆ, ಜಿಯೋ ರಿಚಾರ್ಜ್ ಶುಲ್ಕ 12% ರಿಂದ ಬರೋಬ್ಬರಿ ಶೇ. 27% ಏರಿಕೆ ಮಾಡಲಾಗಿತ್ತು. 5ಜಿ ಸೇವೆಗಳ ಅನಿಯಮಿತ ಬಳಕೆ ಮೇಲೆ ನಿರ್ಬಂಧ ಕೂಡ ಹೇರಲಾಗಿತ್ತು. ಜಿಯೋ ಜತೆಗೆ ಇದೇ ಸಮಯದಲ್ಲಿ ಏರ್‌ಟೇಲ್ ಕೂಡ ದರವನ್ನು ಏರಿಸಿತು. ಈಗಾಗಲೇ ನೆಲಕಚ್ಚಿರುವ ವಿಐ ಕೂಡ ಜಿಯೋವನ್ನೇ ಹಿಂಬಾಲಿಸಿತು.
ನೆಟ್‌ವರ್ಕ್ ಕಂಪನಿಗಳು ಚಂದಾದಾರಿಕೆ ರಿಜಾರ್ಜ್ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಅವುಗಳ ಗ್ರಾಹಕರು ಸಿಟ್ಟಿಗೆದ್ದರು. ಈ ಕಂಪನಿಗಳ ಸೇವೆಯನ್ನು ತೊರೆಯಲಾರಂಭಿಸಿದರು. ಇದರ ಪರಿಣಾಮ, ಈ ನೆಟ್ ವರ್ಕ್‌ಗಳು ಗ್ರಾಹಕರನ್ನ ಕಳೆದುಕೊಂಡಿವೆ. ಆದರೆ, ವಿಶೇಷ ಏನೆಂದರೇ ಇದೇ ಸಮಯದಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಲ್ ಅಂದರೆ, ಬಿಎಸ್ಎನ್ಎಲ್ ಜುಲೈ ತಿಂಗಳಲ್ಲಿ ಬರೋಬ್ಬರಿ 29 ಲಕ್ಷ ಹೊಸ ಗ್ರಾಹಕರನ್ನು ಗಳಿಸಿದೆ.
ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ಮೆರೆಯುತ್ತಿದ್ದ ರಿಲಯನ್ಸ್ ಜಿಯೋಗೆ ಅನಿರೀಕ್ಷಿತ ಹೊಡೆತ ಬಿದ್ದಿದೆ. ಈ ನೆಟ್‌ವರ್ಕ್ ಆರಂಭವಾದಾಗಿನಿಂದ ಪ್ರತಿ ತ್ರೈಮಾಸಿಕದಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, ಈ ವರ್ಷದ ಜುಲೈ – ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ. ಕಳೆದ ಮೂರೇ ತಿಂಗಳಲ್ಲಿ ಒಂದು ಕೋಟಿಗೂ ಅಧಿಕ ಚಂದಾದಾರರು ಜಿಯೋವನ್ನ ತೊರೆದಿದ್ದಾರೆ. ಸದ್ಯ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಜಿಯೋಗೆ ಸ್ಪರ್ಧೆ ಒಡ್ಡುತ್ತಿದೆ.
ಮಗನ ಮದುವೆ ಮಾಡುವುದಕ್ಕಾಗಿ ಅಂಬಾನಿ ಏಕಾಏಕಿ ರಿಚಾರ್ಜ್ ಪ್ಲ್ಯಾನ್ ಏರಿಕೆ ಮಾಡಿದ್ದಾರೆ. ಇದರಿಂದ ಗ್ರಾಹಕರು ಜಿಯೋನ ಬಿಟ್ಟು ಬಿಎಸ್ಎನ್ಎಲ್‌ನತ್ತ ಮುಖ ಮಾಡಿದ್ದಾರೆ. ಸದ್ಯ ಜಿಯೋ ಕಂಪನಿ ಯಾವುದೇ ದೊಡ್ಡ ಸಮಸ್ಯೆಯನ್ನು ಎದುರಿಸಿಲ್ಲ. ವಾಪಾಸ್ ಹೋದ ಚಂದಾದಾರರು ಶೀಘ್ರದಲ್ಲೇ ಮರಳಿ ಬರುತ್ತಾರೆ ಎಂದು ಜಿಯೋ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಏಪ್ರಿಲ್-ಜೂನ್ 2024 ತ್ರೈಮಾಸಿಕದಲ್ಲಿ, ರಿಲಯನ್ಸ್ ಜಿಯೋ 489.7 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಆದರೆ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಬರುವ ವೇಳೆಗೆ ಬಳಕೆದಾರರ ಸಂಖ್ಯೆ 478.8 ಮಿಲಿಯನ್ ಅಂದರೆ 47.8 ಕೋಟಿಗೆ ಇಳಿದಿದೆ. ಅಂದರೆ, ಸುಮಾರು 1.09 ಕೋಟಿ ಜನರು ಜಿಯೋ ನೆಟ್‌ವರ್ಕ್ ತೊರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಿತಿಮೀರಿದ ಯತ್ನಾಳ ವರ್ತನೆ; ಕೋಮುದ್ವೇಷ ಭಾಷಣಕ್ಕೆ ಇಲ್ಲವೇ ಬ್ರೇಕ್?!
ಜುಲೈ ತಿಂಗಳಲ್ಲಿ ಜಿಯೋ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಈ ಕ್ರಮದಲ್ಲಿ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಪ್ಲಾನ್‌ಗಳನ್ನು ತಂದಿದೆ. ಪರಿಣಾಮ, ಬಳಕೆದಾರರು ಬಿಎಸ್ಎನ್ಎಲ್ ಕಡೆ ಮುಖ ಮಾಡಿದ್ದಾರೆ. ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಜವಾಬ್ದಾರಿ ಬಿಎಸ್ಎನ್ಎಲ್ ಮೇಲಿದೆ. ಅದಕ್ಕೆ ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ.
ಅಂಬಾನಿಯ ಜಿಯೋ ಬಂದ ಬಳಿಕ, ಬಿಎಸ್ಎನ್ಎಲ್ ಅತ್ಯಂತ ಕೆಟ್ಟ ಸೇವೆ ನೀಡಲು ಆರಂಭಿಸಿತು. ಪರಿಣಾಮ, ನಷ್ಟದ ಹೊರೆ ಹೊರಲಾರಂಭಿಸಿತು. ಜಿಯೋ ಬರುವುದಕ್ಕೂ ಮುನ್ನ ಇಡೀ ದೇಶಕ್ಕೆ ಉತ್ತಮ ಸೇವೆ ನೀಡುತ್ತಿದ್ದ ಬಿಎಸ್ಎನ್ಎಲ್ ಇದ್ದಕ್ಕಿದ್ದಂತೆ ಕಳಪೆ ಸೇವೆ ನೀಡಲಾರಂಭಿಸಿತ್ತು. ಇದು, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅನ್ನು ಮುಚ್ಚಿ, ಗ್ರಾಹಕರನ್ನು ಜಿಯೋ ಎಡೆಗೆ ದೂಡುವ ಮೋದಿ ಸರ್ಕಾರದ ತಂತ್ರವಾಗಿತ್ತು ಎಂಬುದು ಗುಟ್ಟಾಗಿ ಉಳಿದಿಲ್ಲ.
ಆದರೆ, ಈಗ ಬಿಎಸ್ಎನ್ಎಲ್‌ಗೆ ಮತ್ತೆ ಜೀವ ಕಳೆ ಬಂದಿದೆ. ಆದರೂ, ಬೃಹತ್ ನಗರಗಳೂ ಸೇರಿದಂತೆ ಹಲವೆಡೆ ಬಿಎಸ್ಎನ್ಎಲ್ ನೆಟ್‌ವರ್ಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ. ಇನ್ನೂ ಹಲವು ಪಟ್ಟಣಗಳಲ್ಲಿ 3ಜಿ ನೆಟ್‌ವರ್ಕ್ ಕೂಡ ಸಿಗುತ್ತಿಲ್ಲ. ಬೆಂಗಳೂರಿನಂತಹ ನಗರದಲ್ಲಿ ಕೆಲವೆಡೆ ಮಾತ್ರವೇ 4ಜಿ ನೆಟ್‌ವರ್ಕ್ ಸಿಗುತ್ತಿದ್ದರೆ, ಬಹುತೇಕ ಭಾಗಗಳಲ್ಲಿ 3ಜಿಯೇ ಇನ್ನೂ ಇದೆ. ಉಳಿದೆಲ್ಲ ನೆಟ್‌ವರ್ಕ್‌ಗಳು 5ಜಿ ಸೇವೆ ನೀಡುತ್ತಿರುವಾಗ ಬಿಎಸ್ಎನ್ಎಲ್ ಇನ್ನೂ 4ಜಿ ಸೇವೆಯನ್ನೂ ಕೊಡದೇ ಇರುವುದು ಗ್ರಾಹಕರಿಗೆ ಅಮಾಧಾನ ತಂದಿದೆ. ಬಿಎಸ್ಎನ್ಎಲ್ ತ್ವರಿತವಾಗಿ ಅಪ್‌ಡೇಟ್ ಆಗಬೇಕು. ಉತ್ತಮ ಸೇವೆ ನೀಡಬೇಕು. ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸಬೇಕು. ಅಂಬಾನಿಯ ಜಿಯೋವನ್ನು ಬೆನ್ನಟ್ಟಬೇಕು. ಅದಕ್ಕಾಗಿ ಬಿಎಸ್ಎನ್‌ಎಲ್ ಚುರುಕಾಗಬೇಕು.
ನಿಮ್ಮ ಪೂರ್ವಗ್ರಹಪೀಡಿತ ಸುದ್ದಿ ತಮ್ಮ ಸುದ್ದಿ ವಿಶ್ವಾಸಾರ್ಹತೆ ಪ್ರಶ್ನೆ/ ಸಂಶಯಾಸ್ಪದ ವಾಗಿದೆ. ಭಾರತೀಯ ಟೆಲಿಕಾಂ ವಲಯದಲ್ಲಿ ಬಿರುಗಾಳಿ ಎಬ್ಬಿಸಿ ಸಾಮಾನ್ಯರೂ ಸಹ ನೆಟ್ ಬಳಕೆಗೆ ,ಮೊಬೈಲ್ ಬಳಕೆಗೆ ಸಹಕಾರಿ ಆಗಿರುವವರನ್ನು ಟೀಕೆ ಮಾಡಿ ಏನು ಸಾರ್ ಸಾಧಿಸಬೇಕಾಗಿದೆ. ಜನಸಾಮಾನ್ಯರಿಗೆ ಮಾದ್ಯಮ ಹಾಗೂ ಎಲ್ಲರಿಗೂ ತುಂಬಾ ಸಹಾಯ ಮಾಡಿರುವ ಕಂಪನಿಗೆ ಟೀಕೆ ಮಾಡಿ ದೇಶವನ್ನು ಜಿಯೋ ಗಿಂತ ಮೊದಲು ಲೂಟಿ ಮಾಡುತ್ತಿದ್ದ ಕಂಪನಿಗಳ ಬಗ್ಗೆ ಪಕ್ಷಪಾತ ಬೇಡ.
ಸುದ್ದಿ ಸಂಕ್ಷಿಪ್ತವಾಗಿರಲಿ
ನಿಮ್ಮ ವರದಿಯಲ್ಲಿರುವಂತೆ ಬಿ ಎಸ್ ಎನ್ ಎಲ್ ಗೆ ಹೋದವರು ಮತ್ತೇ ಮರಳಿ ಬರುವುದು ಖಚಿತ. ಏಕೆಂದರೆ, ಬಿ. ಎಸ್ .ಎನ್ ಎಲ್ ಗುಣಮಟ್ಟದ ಸೇವೆ ಒದಗಿಸುತ್ತಿಲ್ಲಾ, ಇಂಟರ್ ನೆಟ್ ಅಂತೂ ತೀರಾ ಕಳಪೆ ಯಾಗಿದೆ. ಹೋದವರು ಪಶ್ಚಾತಾಪ ಪಡುವುದು ನಿಜ. ನನ್ನಂತೆ.
Third class Internet in BSNL network
BSNL ಗೆ ಪೋರ್ಟ್ ಆದ 3 ತಿಂಗಳ ನಂತರ ಇವಾಗ 4G ವರ್ಕ್ ಆಗ್ತಾ ಇದೆ. ಲೇಟ್ ಆಗಿ ಬಂದರು ಲೇಟೆಸ್ಟ್ ಆಗಿ ವರ್ಕ್ ಆಗ್ತಾ ಇದೆ, ಮುಂದೆ ಇನ್ನೂ ಉತ್ತಮ ಆಗಬಲ್ಲದು ಎನ್ನುವ ನಿರೀಕ್ಷೆ ಇದೆ. ಮೋದಿ ಅವರು ಬಿಎಸ್ಎನ್ಎಲ್ ಅನ್ನು ಬೆಳೆಸಲು ವಿಶೇಷ ಅನುದಾನ ನೀಡಿದ್ದಾರೆ. ನಿಮ್ಮ ಪೂರ್ವಗ್ರಹ ಪೀಡಿತ ಮೋದಿ ಅವರ ಮೇಲಿನ ಆರೋಪ ಸುದ್ದ ಸುಳ್ಳು..
ಶ್ರೀಮಂತರು ಖರ್ಚು ಮಾಡುವುದರಿಂದ ಎಷ್ಟೋ ಬಡ ಜನಗಳಿಗೆ ಉದ್ಯೋಗ ಸಿಗಳಿಲ್ಲವೇ..ಅದನ್ನು ಯಾಕೆ ನೀವು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ..
ನೀವು ಯಾರೊಬ್ಬರ ಬಗ್ಗೆ ನಕಾರಾತ್ಮಕ ದೃಷ್ಟಿ ಇಟ್ಟುಕೊಂಡರೆ ಅವರ ಎಲ್ಲಾ ವಿಚಾರಗಳೂ ನಕಾರಾತ್ಮಕ ಆಗಿಯೇ ಕಾಣುತ್ತದೆ.
ಈಗಿನ ಮಾಧ್ಯಮಗಳು ವ್ಯಾಪಾರ ಆಗಿಬಿಟ್ಟಿದೆ.
ಯಾವುದೇ ಪಕ್ಷಪಾತ ಇಲ್ಲದೆ ಕೇವಲ ಸುದ್ದಿ ತಿಳಿಸುವುದು ಪತ್ರಕರ್ತರ ಕೆಲಸ. ಏನೆಂದು ನಿರ್ಧರಿಸುವುದು ಜನತೆ.