ಒಂದು ಕಡೆ ಹಸಿವಿನಿಂದ ಕೋಟ್ಯಂತರ ಮಂದಿ ನರಳುವಾಗ, ಮತ್ತೊಂದೆಡೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬಾನಿ ಪುತ್ರನ ವಿವಾಹೋತ್ಸವ ನಡೆಸುವುದು ಹಸಿವಿನ ಅಣಕ ಮಾತ್ರವಲ್ಲ; ಕ್ರೌರ್ಯ, ನಿರ್ಲಜ್ಜತೆ ಹಾಗೂ ಸಂವೇದನಾಶೂನ್ಯತೆಯ ಪರಮಾವಧಿ ಕೂಡ.
“ಊಟ ತನ್ನಿಚ್ಛೆ, ನೋಟ ಪರರಿಚ್ಛೆ” ಎಂಬ ನಾಣ್ಣುಡಿಯೊಂದಿದೆ. ಈ ಸಾಲಿಗೆ ವಿವಾಹಗಳನ್ನೂ ಸೇರಿಸಲು ಅಡ್ಡಿಯಿಲ್ಲ. ಬಹುತೇಕರ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ವಿವಾಹೋತ್ಸವವನ್ನು ಸ್ಮರಣೀಯವಾಗಿಸಿಕೊಳ್ಳಬೇಕು ಎಂಬ ಇರಾದೆ ಪ್ರತಿಯೊಬ್ಬರಲ್ಲೂ ಇದೆ. ಹೀಗಾಗಿಯೇ ‘ಹೊಟ್ಟೆ ಬಟ್ಟೆ ಕಟ್ಟಿಯಾದರೂ’ ವಿವಾಹಗಳನ್ಮು ನೆರವೇರಿಸುವ ಅದೆಷ್ಟೋ ಬಡ ಕುಟುಂಬಗಳು ನಮ್ಮ ದೇಶದಲ್ಲಿವೆ. ಇತ್ತೀಚೆಗೆ ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫ್ರೀಸ್ ನಡೆಸಿರುವ ಸಮೀಕ್ಷೆಯ ಪ್ರಕಾರ, ಭಾರತೀಯ ಕುಟುಂಬಗಳು ತಮ್ಮ ಸರಾಸರಿ ವಾರ್ಷಿಕ ಆದಾಯದ ನಾಲ್ಕು ಪಟ್ಟು ವೆಚ್ಚವನ್ನು ವಿವಾಹಗಳಿಗೇ ಮಾಡುತ್ತಿವೆ. ಹೀಗೆ ಆಗುತ್ತಿರುವ ವಾರ್ಷಿಕ ವೆಚ್ಚ ಒಟ್ಟು 130 ಶತಕೋಟಿ ಡಾಲರ್. ಅಮೆರಿಕಾದ ವಿವಾಹ ಮಾರುಕಟ್ಟೆಗೆ ಹೋಲಿಸಿದರೆ ರೂ. 60 ಶತಕೋಟಿ ಡಾಲರ್ನಷ್ಟು ಹೆಚ್ಚು (ಅಮೆರಿಕಾದಲ್ಲಿನ ವಾರ್ಷಿಕ ವಿವಾಹ ವೆಚ್ಚದ ಒಟ್ಟು ಮೊತ್ತ ಸರಾಸರಿ 70 ಶತಕೋಟಿ ಡಾಲರ್).
ಈ ನಡುವೆ, ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯಾದ ಮುಕೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿಯ ವಿವಾಹೋತ್ಸವಕ್ಕೆ ಬರೋಬ್ಬರಿ 5,000 ಕೋಟಿ ವೆಚ್ಚ ಮಾಡಿ ಇಡೀ ಜಗತ್ತೇ ಹುಬ್ಬೇರುವಂತೆ ಮಾಡಿದ್ದಾರೆ. ಭರ್ತಿ ಒಂದು ತಿಂಗಳ ಕಾಲ ನಡೆದ ಈ ವಿವಾಹೋತ್ಸವವು ಸಾರ್ವಜನಿಕ ವಾದ-ವಿವಾದಕ್ಕೆ ಗುರಿಯಾಗಿದೆ.
ಮೊದಲೇ ಹೇಳಿದಂತೆ ವಿವಾಹ ಕೂಡಾ ಭಾರತೀಯರ ಪಾಲಿಗೆ ಅವರಿಚ್ಛೆಯಾಗಿದೆ. ಭಾರತದಲ್ಲಿ ಈಗಲೂ ವಿವಾಹ ಕಾರ್ಯಕ್ರಮ ಜೀವನದ ಪ್ರಮುಖ ಘಟ್ಟವಾಗಿರುವುದರಿಂದ, ಈ ಗಳಿಗೆಯನ್ನು ಸ್ಮರಣೀಯವಾಗಿಸಿಕೊಳ್ಳಲೇ ಪ್ರತಿ ಭಾರತೀಯ ಕುಟುಂಬಗಳು ತವಕಿಸುತ್ತವೆ. ವಿವಾಹಗಳು ಸ್ವಂತ ಖರ್ಚಿನಲ್ಲಿ ನಡೆಯುವುದರಿಂದ, ಅವನ್ನು ಟೀಕೆ-ಟಿಪ್ಪಣಿಗೆ ಒಳಪಡಿಸಲೂ ಸಾಧ್ಯವಿಲ್ಲ. ಮೇಲಾಗಿ ವಿವಾಹ ಕಾರ್ಯಕ್ರಮಗಳು ಆರ್ಥಿಕ ಚಲನಶೀಲತೆಗೆ ಕಾರಣವಾಗುತ್ತವೆ. ವೀಳ್ಯದೆಲೆ ಮಾರಾಟಗಾರರಿಂದ ಹಿಡಿದು, ಆಭರಣ, ಉಡುಪು, ವಾದ್ಯ, ಅಡುಗೆ ಭಟ್ಟರು, ದೀಪಾಲಂಕಾರದವರು – ಹೀಗೆ ಅನೇಕ ಶ್ರಮಿಕ ವಲಯಗಳಿಗೆ ಆದಾಯದ ಮೂಲವಾಗಿರುವುದರಿಂದ, ಅದ್ದೂರಿ ವಿವಾಹಗಳನ್ನು ಏಕಾಏಕಿ ಅಲ್ಲಗಳೆಯಲೂ ಬರುವುದಿಲ್ಲ. ಯಾವುದೇ ಬಗೆಯ ಆರ್ಥಿಕತೆ ಚಲನಶೀಲವಾಗಿದ್ದಾಗ ಮಾತ್ರ ದೇಶವೊಂದು ಪ್ರಗತಿಯತ್ತ ಸಾಗಲು ಸಾಧ್ಯ. ಆದರೆ, ಮುಕೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ವಿವಾಹೋತ್ಸವಕ್ಕೆ ಮಾಡಿದ ವೆಚ್ಚ ಈ ವ್ಯಾಪ್ತಿಗೆ ಬರುವುದಿಲ್ಲ. ಅದೊಂದು ಶ್ರೀಮಂತಿಕೆ ಅಸಭ್ಯ ಮತ್ತು ದುಂದುವೆಚ್ಚದ ಪ್ರದರ್ಶನವಾಗಿತ್ತು. ಅದಕ್ಕೆ ಜ್ವಲಂತ ಉದಾಹರಣೆ: ಉಳ್ಳವರಿಗೇ ಕೋಟಿ ಕೋಟಿ ಮೌಲ್ಯದ ಉಡುಗೊರೆಗಳನ್ನು ಮುಕೇಶ್ ಅಂಬಾನಿ ನೀಡಿದ್ದು.
ಭಾರತದ ಶೇ. 50ಕ್ಕಿಂತಲೂ ಹೆಚ್ಚು ಸಂಪತ್ತು ಕೆಲವೇ ಅತಿ ಶ್ರೀಮಂತರ ಬಳಿ ಶೇಖರಣೆಯಾಗಿದೆ ಎನ್ನುತ್ತವೆ ಸಮೀಕ್ಷಾ ವರದಿಗಳು. ಅಂತಹ ಅತಿ ಶ್ರೀಮಂತರ ಪೈಕಿ ಮುಕೇಶ್ ಅಂಬಾನಿ ಕೂಡಾ ಒಬ್ಬರು. ಹೀಗಿದ್ದೂ, ಇವರ ಕಂಪನಿಗಳು ಬ್ಯಾಂಕ್ಗಳಿಂದ ಮನ್ನಾ ಮಾಡಿಸಿಕೊಂಡಿರುವ ಸಾಲದ ಪ್ರಮಾಣವೂ ಕಮ್ಮಿಯಿಲ್ಲ. ಭಾರತದಲ್ಲಿನ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಯಾವ ಪರಿ ಹಿಗ್ಗುತ್ತಿದೆಯೆಂದರೆ, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 125 ದೇಶಗಳ ಪೈಕಿ 111ನೇ ಸ್ಥಾನದಲ್ಲಿದೆ. ಹಾಗೆಯೇ ಅಪೌಷ್ಟಿಕತೆಯ ಪ್ರಮಾಣ ಶೇ. 16.6ರಷ್ಟಿದೆ. ಐದು ವರ್ಷದೊಳಗಿನ ಮಕ್ಕಳ ಮರಣ ಪ್ತಮಾಣ ಶೇ. 3.1ರಷ್ಟಿದೆ. ಇದರೊಂದಿಗೆ 15-24 ವರ್ಷ ವಯಸ್ಸಿನೊಳಗಿನ ಮಹಿಳೆಯರಲ್ಲಿನ ರಕ್ತಹೀನತೆ ಪ್ರಮಾಣ ಶೇ. 58.1ರಷ್ಟಿದೆ. ಹಾಗೆಯೇ 2024ನೇ ಸಾಲಿನಲ್ಲಿ 3.44 ಕೋಟಿ ಮಂದಿ ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಅಪ್ಪಟ ಕನ್ನಡತಿ ಅಪರ್ಣಾ | ಶುದ್ಧ, ಅಶುದ್ಧ ಅನ್ನೋದು ಭಾಷಾ ಭಯೋತ್ಪಾದನೆ
ಇಂತಹ ಆತಂಕಕಾರಿ ಅಂಕಿ-ಅಂಶಗಳನ್ನು ಹೊಂದಿರುವ ದೇಶವೊಂದರ ಪ್ರಜೆಯಾದ ಯಾರೇ ಆದರೂ ಸುಮಾರು 5,000 ಕೋಟಿ ರೂಪಾಯಿಯನ್ನು ಕೇವಲ ವಿವಾಹೋತ್ಸವವೊಂದಕ್ಕೇ ಮಾಡುವುದು ಖಂಡಿತ ಸಮರ್ಥನೀಯವಲ್ಲ. ಹಾಗೆಯೇ ಎಲ್ಲ ಶ್ರೀಮಂತರೂ ಕೊಡುಗೈ ದಾನಿಗಳಾಗಿರಬೇಕು ಎಂದು ಬಯಸುವುದೂ ಬಾಲಿಶ ಮತ್ತು ಹಾಸ್ಯಾಸ್ಪದವಾಗುತ್ತದೆ. ಆದರೆ, ಪ್ರತಿ ಬಾರಿ ಉದ್ಯಮಿಗಳ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಿದಾಗಲೂ, ಅದರಿಂದ ಉದ್ಯಮಪತಿಗಳು ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗುತ್ತದೆ ಎಂಬ ಅಸಂಬದ್ಧ ಸಮರ್ಥನೆಗಳು ಕೇಳಿ ಬರುತ್ತವೆ. ಈ ಸಮರ್ಥನೆಗಳನ್ನು ವಾದಕ್ಕೆಂದು ಒಪ್ಪಿಕೊಂಡರೂ, ಮುಕೇಶ್ ಅಂಬಾನಿ ತಮ್ಮ ಪುತ್ರನ ವಿವಾಹೋತ್ಸವಕ್ಕೆ ವೆಚ್ಚ ಮಾಡಿರುವ ರೂ. 5,000 ಕೋಟಿ ಮೊತ್ತದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಬಹುದಿತ್ತು. ಆ ಮೂಲಕ ನಿರುದ್ಯೋಗಿಗಳಾಗಿ ಅಲೆಯುತ್ತಿರುವ ಯುವಕರನ್ನು ಸ್ವಾವಲಂಬಿಗಳನ್ನಾಗಿಸಬಹುದಿತ್ತು. ಇಂತಹ ಉಪಕ್ರಮದಿಂದ ತಮ್ಮ ಪುತ್ರನ ವಿವಾಹೋತ್ಸವವನ್ನು ಮತ್ತಷ್ಟು ಸ್ಮರಣೀಯವಾಗಿಸಬಹುದಿತ್ತು.
ಆದರೆ, ಭಾರತದಲ್ಲಿ ಶ್ರೀಮಂತಿಕೆಯ ಅಸಭ್ಯ ಪ್ರದರ್ಶನಕ್ಕೆ ನೀಡುವ ಆದ್ಯತೆ ಸಮಾನತೆಗೆ ದೊರೆಯುವುದಿಲ್ಲ. ಯಾಕೆಂದರೆ, ಅಸಮಾನತೆಯೇ ಭಾರತೀಯ ಸಮಾಜದ ಮೂಲ ಬೇರು. ತನ್ನೆದುರೇ ಸಹ ಮಾನವನೊಬ್ಬ ಹಸಿವು, ನೀರಡಿಕೆಯಿಂದ ಸಾಯುತ್ತಿದ್ದರೂ, ಆತನನ್ನು ತುಚ್ಚೀಕರಿಸಿ ಪ್ರಾಣಿಗಳಿಗೆ ಅನ್ನವುಣಿಸುವ ಕೋಟ್ಯಂತರ ಮಂದಿ ನಮ್ಮ ನಡುವೆಯೇ ಯಾವುದೇ ಅಂಜಿಕೆ, ಪಾಪಪ್ರಜ್ಞೆ ಇಲ್ಲದೆ ಬದುಕುತ್ತಿದ್ದಾರೆ. ಈ ಜೀವನ ಪರಂಪರೆಯೇ ಮುಕೇಶ್ ಅಂಬಾನಿ ತಮ್ಮ ಪುತ್ರನ ವೈಭವೋಪೇತ ವಿವಾಹೋತ್ಸವ ನಡೆಸಲು ನೈತಿಕ ಸ್ಥೈರ್ಯ ನೀಡಿರುವುದು.
ಒಂದು ಕಡೆ ಹಸಿವಿನಿಂದ ಕೋಟ್ಯಂತರ ಮಂದಿ ನರಳುವಾಗ, ಮತ್ತೊಂದೆಡೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ವಿವಾಹೋತ್ಸವವೊಂದನ್ನು ನಡೆಸುವುದು ಹಸಿವಿನ ಅಣಕ ಮಾತ್ರವಲ್ಲ; ಬದಲಿಗೆ ಕ್ರೌರ್ಯ, ನಿರ್ಲಜ್ಜತೆ ಹಾಗೂ ಸಂವೇದನಾಶೂನ್ಯತೆಯ ಪರಮಾವಧಿ ಕೂಡ.

ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ