‘ಜಾತ್ಯತೀತತೆ, ಸಮಾಜವಾದವೇ ನಮ್ಮ ಸಂವಿಧಾನದ ತಳಹದಿ’ ಎಂದಿದ್ದರು ಅಂಬೇಡ್ಕರ್; ಇಲ್ಲಿದೆ ಪುರಾವೆ!

Date:

Advertisements
ಇಂಗ್ಲಿಷ್ ಕಾದಂಬರಿಕಾರರಾದ ಮುಲ್ಕ್ ರಾಜ್ ಆನಂದ್‍ರವರು, 1950ರ ಮೇ ತಿಂಗಳ ಒಂದು ಸಂಜೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ನಡೆಸಿರುವ ಮಾತುಕತೆ ಸ್ವಾರಸ್ಯಕರವಾಗಿದೆ

“ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪಿಸಿದ ಮೂಲ ಸಂವಿಧಾನದಲ್ಲಿ ‘ಜಾತ್ಯತೀತತೆ’ (ಸೆಕ್ಯುಲರಿಸಂ) ಮತ್ತು ‘ಸಮಾಜವಾದ’ (ಸೋಷಿಯಲಿಸಂ) ಎಂಬ ಪದಗಳು ಇರಲಿಲ್ಲ. ಆದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಈ ಪದಗಳನ್ನು ಸೇರಿಸಲಾಯಿತು” ಎಂದು ಬಿಜೆಪಿ ಮತ್ತು ಸಂಘಪರಿವಾರದವರು ವಿವಾದ ಸೃಷ್ಟಿಸುತ್ತಿದ್ದಾರೆ. ಆ ಮೂಲಕ ಅಂಬೇಡ್ಕರ್ ಅವರ ಹೆಗಲ ಮೇಲೆ ಬಂದೂಕು ಇಟ್ಟು, ಸುಳ್ಳನ್ನು ಹಬ್ಬಿಸುವ ಕಸರತ್ತಿನಲ್ಲಿ ತೊಡಗಿದ್ದಾರೆ.

‘ಜಾತ್ಯತೀತತೆ’ ಮತ್ತು ‘ಸಮಾಜವಾದ’ ಎಂಬ ಪದಗಳನ್ನು ಸಂವಿಧಾನ ಪೀಠಿಕೆಯಿಂದ ತೆಗೆಯಬೇಕು ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿಕೆ ನೀಡಿದ ಬಳಿಕ ವಿವಾದ ಉಂಟಾಗಿದೆ. “ಅಂಬೇಡ್ಕರ್ ಅವರ ವಿಚಾರಗಳಿಗೆ ವಿರುದ್ಧವಾಗಿ ಈ ಪದಗಳನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಗಿದೆ” ಎಂದು ಅಪಪ್ರಚಾರವನ್ನು ಬಿಜೆಪಿಯವರು ಶುರು ಮಾಡಿದ್ದಾರೆ. ಅಂಬೇಡ್ಕರ್ ಅವರು ಪೀಠಿಕೆಯಲ್ಲಿ ಈ ಪದಗಳನ್ನು ಸೇರಿಸದೆ ಇದ್ದರೂ ಸಂವಿಧಾನದಲ್ಲಿ ಈ ಎರಡು ಪದಗಳ ಆಶಯಗಳು ಅಡಕವಾಗಿವೆ. ಮತ್ತೊಂದೆಡೆ, ‘ಜಾತ್ಯತೀತತೆ ಮತ್ತು ಸಮಾಜವಾದವೇ ನಮ್ಮ ಸಂವಿಧಾನದ ತಳಹದಿ’ ಎಂದು ಅಂಬೇಡ್ಕರ್ ಅವರೇ ಹೇಳಿರುವುದನ್ನು ಮುಚ್ಚಿಹಾಕಲು ಸಾಧ್ಯವೆ?

‘ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ- 17, ಭಾಗ 1’ರಲ್ಲಿ (Dr. Babasaheb Ambedkar Writings and Speeches Vol. 17 Part 1) ದಾಖಲಾಗಿರುವ ಪ್ರಕಾರ, “ನಮ್ಮ ಸಂವಿಧಾನದಲ್ಲಿ ನಾವು ಪಾಲಿಸ ಹೊರಟಿರುವುದು ಜಾತ್ಯತೀತ ಮತ್ತು ಸಮಾಜವಾದಿ ಪ್ರಜಾಪ್ರಭುತ್ವ” ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ಇಂಗ್ಲಿಷ್ ಆವೃತ್ತಿಯ 17ನೇ ಸಂಪುಟ ಭಾಗ 1ರ ಪು.ಸಂ. 378- 382ರವರೆಗೆ ಇರುವ ಮಾತುಕತೆಯನ್ನು ಗಮನಿಸಬಹುದು. ಕನ್ನಡ ಆವೃತ್ತಿ ಸಂಪುಟ 17ರಲ್ಲಿ ಪು.ಸಂ. 339- 343ರಲ್ಲಿ ಈ ಮಾತುಗಳು ದಾಖಲಾಗಿವೆ.

Advertisements

ಇಂಗ್ಲಿಷ್ ಕಾದಂಬರಿಕಾರರಾದ ಮುಲ್ಕ್ ರಾಜ್ ಆನಂದ್‍ರವರು, The Untouchable, Coolie, The Village ಮುಂತಾದ ಕೃತಿಗಳ ಮೂಲಕ 1930ರ ಸುಮಾರಿಗೆ ಪ್ರಸಿದ್ಧಿಗೆ ಬಂದವರು. ಸಮಾಜವಾದಿ ಚಿಂತಕರಾದ ಇವರು, 1950ರ ಮೇ ತಿಂಗಳ ಒಂದು ಸಂಜೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಮುಂಬಯಿಯ ಕೊಲಬದಲ್ಲಿ ನಡೆಸಿದ ಮಾತುಕತೆಯು ಸ್ವಾರಸ್ಯಕರವಾಗಿದೆ. ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ‘ನಮ್ಮ ಸಂವಿಧಾನವನ್ನು ಜಾತ್ಯತೀತ, ಸಮಾಜವಾದಿ ಆಶಯದಡಿ ರೂಪಿಸಿದ್ದೇವೆ’ ಎನ್ನುತ್ತಾರೆ. ‘ನಿಮಗೆ ನೀವೇ ಬೆಳಕಾಗಿ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ‘ಮಾತುಕತೆ’ಯನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಪ್ರೊ. ಎಂ. ನಾರಾಯಣ ಸ್ವಾಮಿ ಅವರು ಅನುವಾದಿಸಿದ್ದಾರೆ. ಆ ಭಾಗ ಇಲ್ಲಿದೆ:

ಇದನ್ನೂ ಓದಿರಿ: ಮೋದಿ ಮತ್ತು ಇಂದಿರಾ ನಡುವಣ ಐದು ಹೋಲಿಕೆಗಳು, ಇನ್ನೈದು ಭಿನ್ನತೆಗಳು

***

ಆನಂದ್: ನಮಸ್ಕಾರ, ಡಾ. ಅಂಬೇಡ್ಕರ್ ರವರಿಗೆ.

ಅಂಬೇಡ್ಕರ್: ನನಗೆ ಬೌದ್ದರ ಶುಭಾಶಯ ಹಿಡಿಸುತ್ತದೆ. “ಓಮ್ ಮಣಿ ಪದ್ಮಯೇ”, ಅಂದರೆ ಕಮಲಗಳರಳಿ ಜಾಗೃತವಾಗಲಿ ಎಂದರ್ಥ.

ಆನಂದ್: ನಾನೂ ಅದನ್ನು ಒಪ್ಪುತ್ತೇನೆ. ನಾವೆಷ್ಟು ವಿವೇಚನಾರಹಿತರು! ಅವಿವೇಕಿಗಳು! ಪದಗಳ ಅರ್ಥವನ್ನು ಪ್ರಶ್ನಿಸಿ ತಿಳಿಯದೆ, ಸಾಂಪ್ರದಾಯಕವಾಗಿ ಉಪಯೋಗಿಸುತ್ತಿರುತ್ತೇವೆ. ನಮಸ್ಕಾರವೆಂದರೆ ನಾನು ಬಾಗಿ ವಂದಿಸುತ್ತೇನೆ ಎಂದರ್ಥ.

ಅಂಬೇಡ್ಕರ್: ಅದು ಮನುಷ್ಯರನ್ನು ಅಧೀನರನ್ನಾಗಿಸುತ್ತದೆ. ‘ಕಮಲಗಳರಳಿ ಜಾಗೃತವಾಗಲಿ’ ಎಂಬ ಬೌದ್ಧಧರ್ಮದ ಶುಭಾಶಯವು ಜ್ಞಾನೋದಯದ ಮತ್ತು ಪ್ರಭುದ್ದತೆಯ ಸಂಕೇತವಾಗಿದೆ.

ಆನಂದ್: ಗೊಡ್ಡು ಸಂಪ್ರದಾಯಗಳು ಸಾಯುವುದೇ ಇಲ್ಲ. ಪ್ರಶ್ನಿಸದೆ ಅವುಗಳನ್ನು ಪಾಲಿಸುತ್ತಿರುತ್ತೇವೆ. ಆ ಬಗ್ಗೆಯೇ ಯೋಚಿಸೋಣ. ಹುಟ್ಟುವಾಗ ಯಾರೂ ಕೂಡ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಂಬ ಹಣೆಪಟ್ಟಿ ಧರಿಸಿ ಹುಟ್ಟಿರುವುದಿಲ್ಲ. ಹಿಂದೂಗಳು ತಮ್ಮ ಮಗುವಿಗೆ ಹೆಸರಿಡುವಾಗ ಸಂಸ್ಕೃತದ ಶ್ಲೋಕಗಳು ಪಠಣವಾಗುತ್ತವೆ. ಪವಿತ್ರವೆನ್ನುವ ದಾರವೊಂದನ್ನು ಮಗುವಿನ ದೇಹಕ್ಕೆ ಹಾಕಲಾಗುತ್ತದೆ. ಆಗ ಮಗು ಹಿಂದುವಾಗಿಬಿಡುತ್ತದೆ.

ಅಂಬೇಡ್ಕರ್: ಮೂರ್ಖತನ (Idiocy)

ಆನಂದ್: ಈಗ ನೀವು ಬಳಸಿದ Idiocy ಒಂದು ಗ್ರೀಕ್ ಪದ. ಹಾಗೆಂದರೆ ಒಂದು ವೃತ್ತದಲ್ಲಿ ವೃಥಾ ಸುತ್ತುವುದು ಎಂದರ್ಥ.

ಅಂಬೇಡ್ಕರ್: ಪ್ರತಿಯೊಬ್ಬರೂ ಹಳೆಯ ಆಚರಣೆಗಳು, ಹವ್ಯಾಸಗಳು, ನಂಬಿಕೆಗಳು, ವಿಚಾರಗಳನ್ನು ಪ್ರಶ್ನಿಸಬೇಕು. ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರಶ್ನೆ ಕೇಳುವ ಶಿಕ್ಷಣ ಪದ್ಧತಿ ರೂಪುಗೊಳ್ಳಬೇಕು.

ಆನಂದ್: ಶಿಕ್ಷಕರನ್ನು ಪರಿಣತರನ್ನಾಗಿಸುವ ಉತ್ತಮ ಮಾರ್ಗ ಅದೇ. ಶಿಕ್ಷಕರಿಗೆ ಪಠ್ಯಕ್ರಮದಲ್ಲಿಲ್ಲದ ವಿಷಯಗಳು ಬಹಳಷ್ಟು ಸಂದರ್ಭಗಳಲ್ಲಿ ತಿಳಿದಿರುವುದೇ ಇಲ್ಲ. ಪ್ರಶ್ನಿಸುವಿಕೆಯಿಂದಲೇ ಮಾನಸಿಕವಾಗಿ ಪ್ರಬುದ್ಧರಾಗಬಹುದು. ನಾನಿದನ್ನು ಹೆನ್ರಿ ಬೆರ್ಗ್‍ಸನ್ ಬರೆದ “Creative Evolution” (ಸೃಜನಾತ್ಮಕ ವಿಕಾಸವಾದ) ಓದಿ ತಿಳಿದೆ. ಹೆಗೆಲ್, ಕಾಂಟ್ ಮತ್ತು ಡೆಸ್ಕಾರ್ಟ್ ಅಂಥವರ ತತ್ವಶಾಸ್ತ್ರದ ಹೇಳಿಕೆಗಳು ಗೋಜಲು ಗೋಜಲಾಗಿದ್ದವು. “ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೇರಿಸಿಕೊಳ್ಳಲು ತತ್ವಶಾಸ್ತ್ರಜ್ಞರ ಚಿಂತನೆಗಳನ್ನೂ ಪ್ರಶ್ನಿಸಬೇಕು, ಪ್ರತಿಭಟಿಸಬೇಕು” ಎಂದು ಬೆರ್ಗ್ ಸನ್ ಹೇಳಿದ್ದಾನೆ.

ಇದನ್ನೂ ಓದಿರಿ: ಬೆಂಗಳೂರಿನ ದಿಣ್ಣೂರು ದಲಿತ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ: ಕ್ರೂರಿಯಾಯಿತೇ ಸರ್ಕಾರ?

ಅಂಬೇಡ್ಕರ್: ಬ್ರಾಹ್ಮಣರ ಎಲ್ಲ ಆಚಾರ – ವಿಚಾರಗಳನ್ನೂ ಬುದ್ಧ ಪ್ರಶ್ನಿಸಿದ. ಬ್ರಾಹ್ಮಣರು ಇತರರನ್ನೆಲ್ಲಾ ಹೊರ ಜಾತಿಯವರೆಂದು ಶೋಷಿಸಿದರು. ಅವರ ಪ್ರಕಾರ, ನಾಲ್ಕು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರನ್ನು ದೇವರೇ ಸೃಷ್ಟಿಸಿದ್ದಾನಂತೆ. ಬುದ್ಧ ಇದನ್ನೂ ಪ್ರಶ್ನಿಸಿದ. ಮನುಷ್ಯರ ಬಗ್ಗೆ ಏನು ಹೇಳುತ್ತಾರೆ ಬ್ರಾಹ್ಮಣರು? ಸತ್ತ ಪ್ರಾಣಿಗಳ ದೇಹವನ್ನು ಹೂಳುವ ಕುಟುಂಬದಲ್ಲಿ ಹುಟ್ಟಿದವರನ್ನು ಅಸ್ಪೃಶ್ಯರೆಂದು ಹೀನಾಯವಾಗಿ ನೋಡಲಾಗುತ್ತದೆ…..

ಆನಂದ್: ತಿರಸ್ಕೃತರು. ತ್ಯಾಜ್ಯರು!

ಅಂಬೇಡ್ಕರ್: ತಮ್ಮ ತೋಳಬಲದಿಂದ ದುಡಿಯುವ ವರ್ಗವನ್ನು ತುಚ್ಛರನ್ನಾಗಿ ಪರಿಗಣಿಸಲಾಗಿದೆ! ಚರ್ಮ ಸುಲಿಯುವವರನ್ನು, ಸಗಣಿ ಹೊರುವವರನ್ನು, ಹೊಲಗದ್ದೆಗಳಲ್ಲಿ ಕೂಲಿಯಾಳುಗಳಾಗಿರುವವರನ್ನು, ಎಲ್ಲರನ್ನೂ ಜೀತಕ್ಕೊಳಪಡಿಸಿ ಶೋಷಿಸಲಾಗಿದೆ. ಐದು ಸಾವಿರ ವರ್ಷಗಳ ನಂತರವೂ ಇದೆಲ್ಲಾ ಮುಂದುವರೆದಿದೆ. ಅಸ್ಪೃಶ್ಯರು ದೇವಾಲಯ ಪ್ರವೇಶಿಸುವಂತಿಲ್ಲ. ಹಳ್ಳಿಯ ಬಾವಿಯಿಂದ ನೀರನ್ನು ಸೇದಿಕೊಳ್ಳುವಂತಿಲ್ಲ. ಅವರು ದೂರದ ಹಳ್ಳ – ಕೊಳ್ಳಗಳಿಂದ ಕೊಳಕು ನೀರನ್ನು ತೆಗೆದುಕೊಳ್ಳಬೇಕು. ಅವರ ದನಗಳನ್ನು ಭೂಮಾಲೀಕರ ಜಮೀನಿನಲ್ಲಿ ಮೇಯಿಸುವಂತಿಲ್ಲ. ಹೊಲಸನ್ನು ಶುಚಿ ಮಾಡುವ ಕೆಲಸ ವಹಿಸಿಕೊಟ್ಟಿದ್ದಲ್ಲದೆ ಅಸ್ಪೃಶ್ಯರನ್ನೇ ಹೊಲಸಿನ ಹಾಗೆ ನೋಡಲಾಗುತ್ತಿದೆ. ಹಿಂದೂಗಳು ಪ್ರಾಣಿಗಳನ್ನು ಮುಟ್ಟುತ್ತಾರೆ. ಆದರೆ ಅಸ್ಪೃಶ್ಯರನ್ನು ಮುಟ್ಟುವುದಿಲ್ಲ!

ಆನಂದ್: ಸಂವಿಧಾನ ರಚನೆಯ ಸಂದರ್ಭದಲ್ಲಿ ತಾವು ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೀರಾ? ನನಗನ್ನಿಸಿದಂತೆ ನಿಮ್ಮ ಸಮಿತಿಯು ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ಆಶ್ಚರ್ಯವೆಂದರೆ, ಅದರ ಜೊತೆಗೇ ಆಸ್ತಿಯ ಹಕ್ಕನ್ನೂ ದಯಪಾಲಿಸಿದ್ದೀರಿ. ಶ್ರೀಮಂತರಿಗೆ ಇದೊಂದು ಭಾರೀ ವರದಾನವಾಗಿದೆಯಲ್ಲವೆ? ಬಡವರಲ್ಲಿಯೇ ಬಡವರಾದ ಅಸ್ಪೃಶ್ಯರಿಗೆ ಇದರಿಂದ ಅತ್ಯಂತ ಅನಾನುಕೂಲವಾಗಿದೆ.

ಅಂಬೇಡ್ಕರ್: ನಾವು ಸಂವಿಧಾನವನ್ನು ಜಾತ್ಯತೀತ ತತ್ವ, ಸಮಾಜವಾದ ಪ್ರಜಾಪ್ರಭುತ್ವ ಇವುಗಳ ತಳಹದಿಯ ಮೇಲೆ ಕಟ್ಟಿದ್ದೇವೆ. ಮುಂದೆ ಸರ್ಕಾರ ತೆಗೆದುಕೊಳ್ಳಬಹುದಾದ ನಿರ್ಧಾರಗಳಿಂದಾಗಿ ಗೇಣಿದಾರರಿಗೆ, ಉಳುವವರಿಗೆ ಭೂಮಿ ಸಿಕ್ಕರೆ, ಆಗ ವ್ಯಕ್ತಿಯ ಹಕ್ಕುಗಳನ್ನು ಕಾಪಾಡಿದಂತಾಗಿ, ಶೋಷಣೆಗೆ ಕಿಂಚಿತ್ತೂ ಎಡೆಯಿರುವುದಿಲ್ಲ. ಬಹುತೇಕ ಅಸ್ಪೃಶ್ಯರು, ಹಾಗೆಯೇ ಕೆಲ ಸವರ್ಣೀಯರು ಮತ್ತು ಮುಸ್ಲಿಮರು ಭೂಹೀನರಾಗಿದ್ದಾರೆ.

ಆನಂದ್: ಹಾಗಿದ್ದರೆ, ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬಹುದಿತ್ತು?

ಅಂಬೇಡ್ಕರ್: ಸಂವಿಧಾನ ರಚನಾ ಸಮಿತಿಯಲ್ಲಿ ನನಗಿದ್ದುದು ಒಂದು ಮತ ಮಾತ್ರ.

ಆನಂದ್: ಅಂದರೆ, ನೀವು ಸಿಂಹಗಳೆದುರು ಕುರಿಮರಿಯಾದಿರಿ!

ಅಂಬೇಡ್ಕರ್: ನನ್ನ ದನಿಯಿದ್ದಷ್ಟೂ ಕೂಗಾಡಿ ಉತ್ತಮವಾದದ್ದನ್ನೇ ಆರಿಸಿಕೊಂಡೆ! ಆದರೆ ಈಗ ಗರ್ಜಿಸುತ್ತಿದ್ದೇನೆ!

ಇದನ್ನೂ ಓದಿರಿ: ಹೇಮಾ ಕಮಿಟಿ ವರದಿಯಲ್ಲಿದ್ದ ಎಲ್ಲ 35 ಪ್ರಕರಣ ಕೈಬಿಟ್ಟ ಕೇರಳ ಸರ್ಕಾರ; ಮರೀಚಿಕೆಯಾದ ನ್ಯಾಯ

ಆನಂದ್: ನ್ಯಾಯಾಧೀಶರು ಮೇಲ್ಜಾತಿ ಮತ್ತು ಮೇಲ್ವರ್ಗದ ಹಿಂದೂಗಳ ಪರವಾಗಿಯೇ ಸದಾ ಹೇಗೆ ತೀರ್ಪು ನೀಡುತ್ತಾರೆ ನೋಡಿ. ನೀವೊಬ್ಬ ವಕೀಲರಾಗಿ ಇದನ್ನು ಗಮನಿಸಿದ್ದೀರಿ ಎಂದುಕೊಳ್ಳುವೆ.

ಅಂಬೇಡ್ಕರ್: ನಿಜ. ನೆಹರೂ ಸರ್ಕಾರದಲ್ಲಿ, ನೆಹರೂರವರು ಆಸ್ತಿಯ ಹಕ್ಕು ಮೂಲಭೂತ ಹಕ್ಕಾಗುವುದರ ವಿರುದ್ದ ಅಸಮಾಧಾನದಿಂದಿದ್ದರು. ಆದರೆ, ಬಾಬು ರಾಜೇಂದ್ರ ಪ್ರಸಾದರು, ಈ ನೆಹರೂ ಭಾರತವನ್ನು ರಶಿಯಾ ಮಾಡಿಬಿಡುತ್ತಾರೆ ಎಂದುಕೊಂಡುಬಿಟ್ಟರು. ವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನದ ನಿರ್ದೇಶಕ ತತ್ವಗಳಡಿಯಲ್ಲಿ ಸೇರಿಸಲು ಒತ್ತಾಯಿಸಿದರು. ಇವನ್ನು ಪಾರ್ಲಿಮೆಂಟಿನಲ್ಲಿ ಹೋರಾಡಿ ಪಡೆದುಕೊಳ್ಳಬೇಕು.

ಆನಂದ್: ಇದು ಹೇಗೆ ಸಾಧ್ಯ?

ಅಂಬೇಡ್ಕರ್: ಪಾರ್ಲಿಮೆಂಟಿನಲ್ಲಿ ಸಮಾಜವಾದಿಗಳೇ ಒಂದು ದಿನ ಬಹುಮತವನ್ನು ಪಡೆದುಕೊಳ್ಳಬೇಕು. ಆಗ, ಹೆಚ್ಚಿನದನ್ನು ಸಾಧಿಸಬಹುದು.

ಆನಂದ್: ಮೇಲ್ಜಾತಿ ಹಿಂದೂಗಳು ಯಾವಾಗಲೂ ಮೀಸಲಾತಿಯನ್ನು ವಿರೋಧಿಸುತ್ತಾರೆ?

ಅಂಬೇಡ್ಕರ್: ನಾವು ಅಶಕ್ತರನ್ನು ಸಂಘಟಿಸಬೇಕು. ಅವರ್ಣೀಯರು, ಜಾತಿವಾದಿಗಳ ಲೆಕ್ಕಾಚಾರದಲ್ಲಿ ಅಸ್ಪೃಶ್ಯರಾಗಿರುವ ಮುಸ್ಲಿಮರು, ಗಿರಿಜನರು, ಸಮಾಜವಾದಿಗಳೊಂದಿಗೆ ಸೇರಿದರೆ, ಆಸ್ತಿಯ ಹಕ್ಕಿನ ರದ್ದತಿಗಾಗಿ ಹೋರಾಡಬಹುದು. ಭೂಮಾಲೀಕರಿಲ್ಲದ ಮೇಲೆ ಭೂರಹಿತ ಕಾರ್ಮಿಕರು ಇರುವುದಿಲ್ಲ. ಗುತ್ತಿಗೆ ಪದ್ಧತಿಯಲ್ಲಿ ಬೇಸಾಯ ಮಾಡುವ ಭೂರಹಿತ ಉಳುಮೆದಾರರೂ ಇರುವುದಿಲ್ಲ.

ಆನಂದ್: ಭೂ ಒಡೆತನಕ್ಕೆ ಸಂಬಂಧಿಸಿದಂತೆ ಸರ್ಕಾರಿ ಒಡೆತನವೂ ಅಪಾಯಕಾರಿಯಾಗಬಲ್ಲದು. ರಶಿಯಾದಲ್ಲಿ ಸ್ಟಾಲಿನ್ ಏನು ಮಾಡಿದ ಎಂಬುದು ನಿಮಗೂ ಗೊತ್ತಿದೆ. ಕಮ್ಯುನಿಸಂ ಹೆಸರಿನಲ್ಲಿ ಅಧಿಕಾರಶಾಹಿಯನ್ನು ಜನತೆಯ ಮೇಲೆ ಛೂಬಿಟ್ಟು ಹಿಂಸಿಸಿದ.

ಅಂಬೇಡ್ಕರ್: ನಾವು ವ್ಯಕ್ತಿ ಮೇಲೆ ಸವಾರಿ ಮಾಡುವುದನ್ನು, ಹಕ್ಕುಗಳನ್ನು ಕಸಿದುಕೊಳ್ಳುವುದನ್ನು ವಿರೋಧಿಸಬೇಕು. ವ್ಯಕ್ತಿಸ್ವಾತಂತ್ರ್ಯವೇ ಪ್ರಾಥಮಿಕ ಅಗತ್ಯವಾಗಬೇಕು. ಮೂಲಭೂತ ಹಕ್ಕುಗಳನ್ನು ನಾನು ಒತ್ತಾಯಿಸಿದಾಗ, ಇದೇ ನನ್ನ ಮನಸ್ಸಿನಲ್ಲಿತ್ತು.

ಆನಂದ್: ಹಾಗಾದರೆ, ನಾವು ಮೂಲಭೂತ ಹಕ್ಕುಗಳನ್ನು ಮರುಪರಿಶೀಲಿಸಲು ಪಾರ್ಲಿಮೆಂಟಿನ ಮೇಲೆ ಒತ್ತಡ ಹೇರಬೇಕು. ಖಾಸಗಿ ಒಡೆತನದ ಜೊತೆಗೆ ಸರ್ಕಾರಿ ಒಡೆತನದ ವಿರುದ್ಧವೂ ಹೋರಾಡಬೇಕು.

ಅಂಬೇಡ್ಕರ್: ಇಂದು ಭೂಮಾಲೀಕರು ತಮ್ಮ ಬಾಡಿಗೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬಂಡವಾಳಶಾಹಿಗಳು ಕೂಲಿಯನ್ನು ಕಡಿಮೆ ಮಾಡಿ, ದುಡಿಮೆಯ ಅವಧಿಯನ್ನು ಹೆಚ್ಚುಮಾಡುತ್ತಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯು ಸರ್ವಾಧಿಕಾರಕ್ಕೆ ಕಾರಣವಾಗಿದೆ…….

ಇದನ್ನೂ ಓದಿರಿ: ಮೋದಿ 3.0 | ಒಂದೇ ವರ್ಷದಲ್ಲಿ 947 ಹೇಟ್‌ ಕ್ರೈಮ್; ಆತಂಕ ಹುಟ್ಟಿಸುತ್ತೆ APCR ವರದಿ

ಆನಂದ್: ಜೀವನದ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಂತೋಷದ ಹಕ್ಕು…… ಇವು ಕನಸಾಗಿಯೇ ಉಳಿದಿವೆ.

ಅಂಬೇಡ್ಕರ್: ಯುವಜನಾಂಗ ನಿರಂತರ ಹೋರಾಡುತ್ತಿರಬೇಕು ಅವರೇ ಸಂವಿಧಾನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಲ್ಲರು.

ಆನಂದ್: ಫ್ರಾನ್ಸಿನ 1789ರ ಕ್ರಾಂತಿಯಂತಹ ಬಂಡಾಯವೇ ಬೇಕು, ಇದಕ್ಕೆ.

ಅಂಬೇಡ್ಕರ್: ಇದನ್ನು ನಿಮ್ಮಿಂದ ಕೇಳಲು ಆಶ್ಚರ್ಯವಾಗುತ್ತಿದೆ? ನಿಮ್ಮ ಕಾದಂಬರಿಯಲ್ಲಿ ಗಾಂಧಿಯನ್ನು ಅಸ್ಪೃಶ್ಯರ ವಿಮೋಚಕನೆಂದು ವಿಜೃಂಭಿಸಿಬಿಟ್ಟಿದ್ದೀರಿ.

ಆನಂದ್: ನಾನು ಆ ಮಹಾತ್ಮನ ಎತ್ತರಕ್ಕೆ ಬೆಳೆಯಲಾಗುವುದಿಲ್ಲ. ನಾವು ಹಿಟ್ಲರ್ ಮತ್ತು ಮುಸಲೋನಿಯನ್ನು ಎದುರಿಸಬೇಕಿತ್ತು. ನಾನು ಸ್ಪೈನಿಗೆ ಹೋಗಿ ಅಂತಾರಾಷ್ಟ್ರೀಯ ಬ್ರಿಗೇಡನ್ನು ಸೇರಿಕೊಂಡೆ. ಚಿಕಿತ್ಸಾಲಯದಲ್ಲಿ ರಕ್ತ ನೋಡಿ ಬೆವೆತುಹೋದೆ. ಚಿಕಿತ್ಸಾಲಯದಿಂದ ಹೊರಹೋಗಲು ನನಗೆ ಸೂಚಿಸಲಾಯಿತು.

ಅಂಬೇಡ್ಕರ್: ನಿಮಗೂ ಗೊತ್ತು. ಮಹಾತ್ಮನಾಗಬಯಸಿದ ಗಾಂಧಿ ಭಗವದ್ಗೀತೆಯಿಂದ ನಿರೂಪಿತವಾದ ವರ್ಣಾಶ್ರಮ ಪದ್ಧತಿಯನ್ನು ಬಿಟ್ಟುಕೊಡಲಿಲ್ಲ. ಹರಿಜನರೆಂದು, ದೇವರ ಮಕ್ಕಳೆಂದು ಕರೆಯುವ ಮೂಲಕ ಅವರನ್ನು ವೈಭವೀಕರಿಸಲು ಹೆಣಗಾಡಿದರು. ಆದರೆ ಪರಿಶಿಷ್ಟರು ಇನ್ನಷ್ಟು ಅವಮಾನಕ್ಕೊಳಗಾಗಿ ದುಸ್ಥಿತಿಯಲ್ಲೇ ಇದ್ದಾರೆ.

ಆನಂದ್: ಅದರಿಂದಾಗಿಯೇ ನೀವು ಬೌದ್ಧಧರ್ಮವನ್ನು ಸ್ವೀಕರಿಸಿದಿರಾ?

ಅಂಬೇಡ್ಕರ್: ಅದೇ ಮುಖ್ಯವಾದ ಕಾರಣವಾಗಿತ್ತು. ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿ ಉಳಿದಿದ್ದರೆ ಅವರ್ಣೀಯನ ಕೀಳು ಸ್ಥಾನವನ್ನು ಒಪ್ಪಿಕೊಂಡಂತೆ ಆಗುತ್ತಿತ್ತು. ಹಿಂದೂ ದೇವರಾದ ಬ್ರಹ್ಮನಲ್ಲಿ ಬುದ್ಧನಿಗೆ ನಂಬಿಕೆಯಿಲ್ಲ. ಇಂತಹ ಬ್ರಹ್ಮನನ್ನು ಬಲವಾಗಿ ತಿರಸ್ಕರಿಸುವ ಮನಸ್ಸು ಮಾತ್ರ ಮನುಷ್ಯರ ಹಕ್ಕು – ಸ್ವಾತಂತ್ರ್ಯಗಳನ್ನು ಕಟ್ಟಿಕೊಡಬಲ್ಲದು. ಆಗ ಮಾತ್ರ ನಂಬಿಕೆಗಳು, ಅದೃಷ್ಟಗಳು, ಕತೆಗಳನ್ನು ದೂರ ನೂಕಬಹುದು. ಜ್ಞಾನಾರ್ಜನೆಯನ್ನು ಪಡೆಯಬಹುದು. ಹಿಂದೂಗಳ ಜಾತಿ ಸೂಚಕ ದೇವರುಗಳಿಂದ, ಅವತಾರಗಳಿಂದ ದೂರವಿರಬಹುದು.

ಆನಂದ್: ಬುದ್ಧನ ಚಿಂತನೆಗಳು ನನಗೂ ಹಿಡಿಸಿವೆ. ಬುದ್ಧನೇ ಪ್ರಪಂಚದ ಮೊಟ್ಟಮೊದಲ ಭೌತಿಕವಾದಿ. ಬುದ್ಧನು ದುಃಖವನ್ನು ದೂರ ಸರಿಸಿದ. ಹಿಂದೂಗಳು ಯಾವಾಗಲೂ ನಂಬಿಕೆಗಳಿಗೇ ಜೋತು ಬೀಳುತ್ತಾರೆ. ಪೂಜಾರಿಗೆ ಹೂ, ಹಣ್ಣು – ಕಾಯಿ, ದಕ್ಷಿಣೆ ಕೊಟ್ಟು, ಫ್ಯೂಡಲ್ ದೇವರನ್ನು ಬೇಡಿದವರಿಗೆ ಸಿಗುವುದು ಸಮಾಧಾನಕರ ಬಹುಮಾನವಷ್ಟೇ.

ಇದನ್ನೂ ಓದಿರಿ: ಸಾರ್ವಕಾಲಿಕ ಶ್ರೇಷ್ಠ ದಾಖಲೆ ಬರೆದ ಕೊಬ್ಬರಿ ಧಾರಣೆ; ರೇಟ್‌ ಎಷ್ಟು ಗೊತ್ತಾ?

ಅಂಬೇಡ್ಕರ್: ಅದಕ್ಕೇ ಪೂಜಾರಿಗಳಿಗೆ ಬೊಜ್ಜು ಬಂದಿರುವುದು!

ಆನಂದ್: ಶೋಷಿತರಿಗೆ ನಿಮ್ಮ ಸಂದೇಶವೇನು?

ಅಂಬೇಡ್ಕರ್: ಹಿಂದೂಗಳು ಕುರಿ ಮೇಕೆಗಳನ್ನಷ್ಟೇ ಬಲಿಕೊಡುತ್ತಾರೆ. ಆದರೆ ನೀವು ಕುರಿಗಳಾಗಬೇಡಿ. ಸಿಂಹಗಳಾಗಿ. ಅತ್ತ ದೀಪ ಭವ್. ನಿಮಗೆ ನೀವೇ ಬೆಳಕಾಗಿ.

ಆನಂದ್: ಆನಂದನಿಗೆ ಬುದ್ಧ ಹೇಳಿದ್ದೂ “ನಿನಗೆ ನೀನೆ ದೀಪವಾಗು” ಎಂದೇ ತಾನೆ?

  • -ಇದಿಷ್ಟು ಮುಲ್ಕ್‌ ರಾಜ್ ಆನಂದ್ ಮತ್ತು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನಡುವೆ 1950ರಲ್ಲಿ ನಡೆದಿರುವ ಮಾತುಕತೆ. ಸುಮಾರು 40 ವರ್ಷಗಳ ಬಳಿಕ ಮುಲ್ಕರಾಜ್ ಈ ಮಾತುಕತೆಯನ್ನು ಮೆಲುಕು ಹಾಕಿ ದಾಖಲಿಸಿದ್ದರು. ಸಮಾಜವಾದ ಮತ್ತು ಜಾತ್ಯತೀತ ತತ್ವಗಳ ಸಂಬಂಧ ಅಂಬೇಡ್ಕರರಿಗಿದ್ದ ಸ್ಪಷ್ಟ ನಿಲುವು ಇದರಿಂದ ಗೊತ್ತಾಗುತ್ತದೆ.

***

ಸಂವಿಧಾನದ ಕುರಿತ ಚರ್ಚೆಯಲ್ಲಿ ಡಾ.ಅಂಬೇಡ್ಕರ್ ಅವರು ಕೇಟಿ ಶಾ ಅವರಿಗೆ ಕೊಟ್ಟಿರುವ ಪ್ರತಿಕ್ರಿಯೆಯೊಂದು ಅಂಬೇಡ್ಕರ್ ಅವರಿಗಿದ್ದ ಸಮಾಜವಾದಿ ದೃಷ್ಟಿಕೋನಕ್ಕೆ ಕನ್ನಡಿ ಹಿಡಿಯುತ್ತದೆ.

ಚಿಂತಕರಾದ ಶಿವಸುಂದರ್ ಅವರು ಇತ್ತೀಚೆಗೆ ‘ವಾರ್ತಾ ಭಾರತಿ’ಯಲ್ಲಿ ಬರೆಯುತ್ತಾ ಸಂವಿಧಾನ ರಚನಾ ಸಭೆಯ ಚರ್ಚೆಯನ್ನು ದಾಖಲಿಸಿದ್ದಾರೆ.

ಶಿವಸುಂದರ್ ಹೀಗೆ ಬರೆಯುತ್ತಾರೆ:

ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಮುನ್ನುಡಿಯ ಬಗೆಗಿನ ಚರ್ಚೆಯನ್ನು ಅತ್ಯಂತ ಕೊನೆಗೆ ಕೈಗೆತ್ತಿಕೊಳ್ಳಲಾಗಿತ್ತು. ಈ ಬಗ್ಗೆ ಹಲವಾರು ಚರ್ಚೆಗಳು ನಡೆದು 17-10- 1949ರಂದು ಸಂವಿಧಾನದ ಮುನ್ನುಡಿಯನ್ನು ಅಂಗೀಕರಿಸಲಾಗಿತ್ತು. ಚರ್ಚೆಯ ಭಾಗವಾಗಿ ಸಂವಿಧಾನದ ಮುನ್ನುಡಿಯಲ್ಲಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಸೇರಿಸಲು ಕೆಲವು ಸದಸ್ಯರು ಆಗ್ರಹಪಡಿಸಿದ್ದರು. ಅದಕ್ಕೆ ಅಂಬೇಡ್ಕರ್ ಅವರು ‘‘ಆ ಎರಡೂ ಆಶಯಗಳು ನಮ್ಮ ಸಂವಿಧಾನದಲ್ಲಿ ಅಂತರ್ಧಾರೆಯಾಗಿ ಹರಿದಿರುವುದರಿಂದ ಅದನ್ನು ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿಲ್ಲ’’ ಎಂದು ಉತ್ತರಿಸಿದ್ದರೇ ವಿನಾ ಆ ಪ್ರಸ್ತಾಪಗಳನ್ನು ವಿರೋಧಿಸಿರಲಿಲ್ಲ.

ಉದಾಹರಣೆಗೆ ಕೆ.ಟಿ. ಶಾ ಎಂಬ ಸಂವಿಧಾನ ಸಭೆಯ ಮಾನ್ಯ ಸದಸ್ಯರು ಮುನ್ನುಡಿಯಲ್ಲಿ ಸಮಾಜವಾದ ಎಂಬ ಪದವನ್ನು ಸ್ಪಷ್ಟವಾಗಿ ಸೇರಿಸಬೇಕೆಂಬ ತಿದ್ದುಪಡಿಯನ್ನು ಸೂಚಿಸಿದಾಗ ಅಂಬೇಡ್ಕರ್ ಕೊಟ್ಟ ಉತ್ತರ ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಈ ಬಗ್ಗೆ 15-11-1948ರಂದು ಕೆ.ಟಿ. ಶಾ ಅವರ ಪ್ರಸ್ತಾವನೆಗೆ ದೀರ್ಘವಾಗಿ ಉತ್ತರಿಸುತ್ತಾ ಅಂಬೇಡ್ಕರ್ ಅವರು: ‘‘ಇಂದು ಶೋಷಕ ಬಂಡವಾಳಶಾಹಿ ಸಮಾಜಕ್ಕಿಂತ ಸಮಾಜವಾದಿ ಸಮಾಜ ಉತ್ತಮವೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಮುಂದಿನ ಪೀಳಿಗೆ ಬಂಡವಾಳಶಾಹಿ ಸಮಾಜಕ್ಕೆ ವಿರುದ್ಧವಾಗಿ ಸಮಾಜವಾದಕ್ಕಿಂತ ಉತ್ತಮವಾದ ಮತ್ತೊಂದು ವ್ಯವಸ್ಥೆಯನ್ನು ಹುಡುಕಬಹುದು.’’ ಮುಂದುವರಿದು ‘‘..ಅಷ್ಟು ಮಾತ್ರವಲ್ಲ. ಸಂವಿಧಾನದಲ್ಲಿ ಈಗ ಅಡಕಗೊಳಿಸಲಾಗಿರುವ ಪರಿಚ್ಛೇದ 4ರ ಪ್ರಭುತ್ವ ನಿರ್ದೇಶನಾ ತತ್ವಗಳೆಲ್ಲಾ ಸಮಾಜವಾದಿ ಆಶಯಗಳನ್ನು ಪಾಲಿಸುವಂತೆ ಪ್ರಭುತ್ವಕ್ಕೆ ಮಾರ್ಗದರ್ಶನ ಮಾಡುತ್ತಿದೆ’’ ಎಂದು ಹೇಳುತ್ತಾರೆ. ಹೀಗಾಗಿ ಅಂಬೇಡ್ಕರ್ ಅವರು ಸಂವಿಧಾನವು ಮತ್ತು ಅದರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಪ್ರಭುತ್ವವು ಪಕ್ಕಾ ಸೆಕ್ಯುಲರ್ ಹಾಗೂ ಸಮಾಜವಾದಿಯಾಗಿಯೇ ಇರಬೇಕೆಂದು ನಿರೀಕ್ಷಿಸಿದ್ದರು. ಸಂವಿಧಾನದ ಮುನ್ನುಡಿಯಲ್ಲಿ ಅ ಪದಗಳಿರಬೇಕೇ ಬೇಡವೇ ಎಂಬ ಬಗ್ಗೆ ಅವರ ಅಭಿಪ್ರಾಯ ತಾಂತ್ರಿಕ ಸ್ವರೂಪದ್ದೇ ವಿನಾ ತಾತ್ವಿಕ ರೂಪದ್ದಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. (ಕೃಪೆ: ವಾರ್ತಾ ಭಾರತಿ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. ಕೇವಲ ಕಾಲ್ಪನಿಕ ಮತ್ತು ಅಂಬೇಡ್ಕರ್ ಅವರೂ ಯಾವತ್ತೂ ಈ ಪದಗಳನ್ನು ಸೇರಿಸಿಲ್ಲ, ಇದನ್ನು2 ಕಾಂಗ್ರೆಸ್ ಅವರೇ ಒಪ್ಪಿಕೊಂಡು ಸುಮ್ಮನಿದ್ದಾರೆ, ಮೇಲೆ ಹೇಳಿರುವ ಮಾತುಗಳು ಕೇವಲ ಮತ್ತು ಕೇವಲ ಕಾಲ್ಪನಿಕ.

  2. Aagadre constitution alli yaake ee yeradu padagallana serisilla…. You are creating fake news. Ninge Ambedkar bagge and avru barediruva constitution bagge gowrava iddidre idanna heltirlilla… Congigalu modify maadiridanna Ambedkar maadiro tara heltidiya….

  3. ಮೂಲದಲ್ಲಿ ಇತ್ತೋ ಇಲ್ಲವೋ? ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೇರಿಸಿದ್ದು ಅಸಾಂವಿಧಾನಿಕ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X