ತಮಿಳುನಾಡು ಮತ್ತು ಪುದುಚೇರಿಯ ಎಲ್ಲ ನ್ಯಾಯಾಲಯಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಇತರ ನಾಯಕರ ಭಾವಚಿತ್ರಗಳನ್ನು ತೆರವುಗೊಳಿಸಬೇಕು ಎಂದು ಮದ್ರಾಸ್ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಹೊರಡಿಸಿದ ಸುತ್ತೋಲೆಯ ಬಗ್ಗೆ ತಮಿಳುನಾಡು ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗ ಬೇಸರ ವ್ಯಕ್ತಪಡಿಸಿದೆ.
ಸಂವಿಧಾನದ ಕರಡು ಸಮಿತಿಯ ಮುಖ್ಯಸ್ಥರೂ ಮತ್ತು ಭಾರತದ ಮೊದಲ ಕಾನೂನು ಸಚಿವರೂ ಆಗಿದ್ದ ಅಂಬೇಡ್ಕರ್ ಭಾವಚಿತ್ರಗಳನ್ನು ನ್ಯಾಯಾಲಯದ ಕೊಠಡಿಗಳಲ್ಲಿ ಪ್ರದರ್ಶಿಸುವಂತೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ತಮಿಳುನಾಡು ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಎಂ ಪಿ ರಂಜನ್ ಕುಮಾರ್ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಸಂವಿಧಾನವನ್ನು ರಚಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಇದು ಜನರ ಹಕ್ಕುಗಳನ್ನು ರಕ್ಷಿಸುವ ಗುರಾಣಿಯಾಗಿ ಮುಂದುವರಿಯುತ್ತದೆ. ಜನರ ಮಾನವ ಹಕ್ಕುಗಳ ಉಲ್ಲಂಘನೆಯಾದಾಗ, ನ್ಯಾಯಾಲಯಗಳು ಈ ಹಕ್ಕುಗಳನ್ನು ರಕ್ಷಿಸುತ್ತವೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸಿದರೆ ತೆಗೆದು ಹಾಕುವುದಾಗಿ ಹೇಳಿಕೆ ನೀಡಿರುವುದು ಒಪ್ಪಲಾಗದು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಲಿತ ಯುವಕನ ಮೇಲೆ ಮಲ ಬಳಿದ ಪ್ರಕರಣ: ಕಠಿಣ ಕ್ರಮಕ್ಕೆ ಖರ್ಗೆ ಆಗ್ರಹ
ಏಪ್ರಿಲ್ 11 ರಂದು ಮದ್ರಾಸ್ ಹೈಕೋರ್ಟ್ನ ಪೂರ್ಣ ನ್ಯಾಯಾಲಯವು ತಮಿಳುನಾಡು ಮತ್ತು ಪುದುಚೇರಿಯ ನ್ಯಾಯಾಲಯಗಳು ಮಹಾತ್ಮಾ ಗಾಂಧಿ ಮತ್ತು ತಮಿಳು ಕವಿ ಸಂತ ತಿರುವಳ್ಳುವರ್ ಅವರ ಭಾವಚಿತ್ರಗಳನ್ನು ಮಾತ್ರ ಪ್ರದರ್ಶಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿತ್ತು.
ನ್ಯಾಯಾಲಯದಲ್ಲಿ ಬಿ ಆರ್ ಅಂಬೇಡ್ಕರ್ ಸೇರಿದಂತೆ ಇತರ ನಾಯಕರ ಭಾವಚಿತ್ರಗಳನ್ನು ತೆಗೆದುಹಾಕುವಂತೆ ಎರಡೂ ರಾಜ್ಯಗಳ ಜಿಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಲಾಗಿತ್ತು.