ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ, ಸಮಾನತೆಗಾಗಿ ಅವಿರತ ಶ್ರಮಿಸಿದ ಗೌರಿ ಲಂಕೇಶ್ ಅವರ ಹತ್ಯೆ ಹಿನ್ನೆಲೆಯಲ್ಲಿ ಬರೆದ ‘ಐ ಆಮ್ ಆನ್ ದಿ ಹಿಟ್ ಲಿಸ್ಟ್: ಎ ಜರ್ನಲಿಸ್ಟ್ಸ್ ಮರ್ಡರ್ ಅಂಡ್ ದಿ ಮಿಥ್-ಮೇಕಿಂಗ್ ಇನ್ ಸೌತ್ ಇಂಡಿಯಾ’ ಕೃತಿ ಪುಲಿಟ್ಜರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ.
ಅಮೇರಿಕನ್ ಪತ್ರಕರ್ತ, ಪ್ರಬಂಧಕಾರ ಹಾಗೂ ವಿಮರ್ಶಕ ರೋಲೋ ರೋಮಿಗ್ ಅವರು ‘ಐ ಆಮ್ ಆನ್ ದಿ ಹಿಟ್ ಲಿಸ್ಟ್: ಎ ಜರ್ನಲಿಸ್ಟ್ಸ್ ಮರ್ಡರ್ ಅಂಡ್ ದಿ ಮಿಥ್-ಮೇಕಿಂಗ್ ಇನ್ ಸೌತ್ ಇಂಡಿಯಾ’ ಕೃತಿಯನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಪೆಂಗ್ವಿನ್ ಪ್ರಕಾಶನ ಆಗಸ್ಟ್ 6, 2024 ರಂದು ಪ್ರಕಟಿಸಿದೆ.
ಅಮೇರಿಕನ್ ಪತ್ರಕರ್ತ ರೋಲೋ ರೋಮಿಗ್ ಅವರು 2013 ರಿಂದ ದಕ್ಷಿಣ ಭಾರತದ ಕುರಿತು ‘ದಿ ನ್ಯೂಯಾರ್ಕ್ ಟೈಮ್ಸ್’ ಗೆ ಬಗ್ಗೆ ವರದಿ ಮಾಡುತ್ತಿದ್ದಾರೆ. ಇದು ಅವರ ಮೊದಲ ಕೃತಿ ಇದಾಗಿದೆ. ‘ದಿ ಟ್ರಿಬ್ಯೂನ್’ ವೆಬ್‌ಸೈಟ್ ಈ ಕುರಿತು ವರದಿ ಮಾಡಿದೆ.
ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯವು “ಪತ್ರಿಕೋದ್ಯಮ, ಕಲೆ ಹಾಗೂ ಪತ್ರಿಕೋದ್ಯಮ” ಕ್ಷೇತ್ರದಲ್ಲಿನ ಸಾಧನೆಗಾಗಿ ಪುಲಿಟ್ಜರ್ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತಿದೆ. ಜೋಸೆಫ್ ಪುಲಿಟ್ಜರ್ ಅವರ ಇಚ್ಛೆಯ ಮೇರೆಗೆ 1917 ರಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದೆ.
ಗೌರಿ ಲಂಕೇಶ್ ಅವರ ಹತ್ಯೆಯಾಗಿ ಏಳು ವರ್ಷಗಳು ಪೂರ್ಣಗೊಂಡಿವೆ. 2017 ಸೆಪ್ಟಂಬರ್ 5ರಂದು ರಾತ್ರಿ ಎಂಟು ಗಂಟೆಯ ವೇಳೆಗೆ ತಮ್ಮ ಕಚೇರಿಯಿಂದ ರಾಜರಾಜೇಶ್ವರಿ ನಗರದ ತಮ್ಮ ಮನೆಯ ಮುಂದೆ ಕಾರಿನಿಂದಿಳಿದು ಗೇಟು ತೆರೆದು ಬಾಗಿಲ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಅವರ ಎದುರಿಗೆ ಬಂದು ನಿಂತಿದ್ದ ಹಂತಕರು ನೇರವಾಗಿ ಎದೆಗೆ ಗುಂಡಿಟ್ಟು ಪರಾರಿಯಾಗಿದ್ದರು.
ಗುಬ್ಬಚ್ಚಿಯಂಥ ಪುಟ್ಟದೇಹ ಬಾಗಿಲ ಬಳಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಗೌರಿಯವರನ್ನು ಕೊಂದಿದ್ದು ಯಾರು ಮತ್ತು ಯಾವ ಕಾರಣಕ್ಕೆ ಎಂಬುದು ಬಹುತೇಕರಿಗೆ ಸ್ಪಷ್ಟವಿತ್ತು. ಅದು ನಿಜವೂ ಆಗಿತ್ತು. ಗೌರಿ ಅವರು ಹಿಂದೂ ಕೋಮುವಾದಿ ಸಂಘಟನೆಗಳನ್ನು ಎದುರು ಹಾಕಿಕೊಂಡಿದ್ದರು.
ಗೌರಿ ಅವರ ಹತ್ಯೆಗೂ ಮುನ್ನ ಇಂತಹದೇ ಮೂರು ಹತ್ಯೆಗಳಾಗಿದ್ದವು. 2013 ರಿಂದ 2017 ರವರೆಗೆ ಒಟ್ಟು ಗೌರಿ ಸೇರಿ ನಾಲ್ವರು ವಿಚಾರವಾದಿ ಲೋಕಚಿಂತಕರ ಹತ್ಯೆ ನಡೆದಿದೆ. ಮಹಾರಾಷ್ಟ್ರದಲ್ಲಿ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪಾನ್ಸರೆ ಹತ್ಯೆಯಾಗಿದ್ದರೆ, ಕರ್ನಾಟಕದಲ್ಲಿ ಎಂ.ಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಕೊಲೆಯಾಗಿದೆ.
