ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿರುವ ವಿಚಾರದಲ್ಲಿ ಈಗಾಗಲೇ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಶೀತಲ ಸಮರ ನಡೆಯುತ್ತಿದೆ. ಈ ನಡುವೆ ತೆಲಂಗಾಣ ಸರ್ಕಾರವು ಶಾಲೆಗಳಲ್ಲಿ ತೆಲುಗು ಬೋಧನೆ, ಕಲಿಕೆ ಕಡ್ಡಾಯಗೊಳಿಸಿದೆ.
ಸಿಬಿಎಸ್‌ಇ ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಸ್ಥಳೀಯರು ತಮ್ಮ ಮಾತೃಭಾಷೆಯಾದ ತೆಲುಗು ಬೋಧಿಸುವುದು ಮತ್ತು ಹೊರ ರಾಜ್ಯದಿಂದ ಬಂದವರಿಗೂ ಸ್ಥಳೀಯ ಭಾಷೆಯಾದ ತೆಲುಗು ಕಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತೆಲಂಗಾಣ ಸರ್ಕಾರ ಹೇಳಿದೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ | ಭಾಷಾ ಯುದ್ಧಕ್ಕೆ ತಮಿಳುನಾಡು ಸಿದ್ಧ: ಉದಯನಿಧಿ ಸ್ಟ್ಯಾಲಿನ್ ಘೋಷಣೆ
ಹಾಗೆಯೇ ಒಂಬತ್ತನೇ ಮತ್ತು ಹತ್ತನೇ ತರಗತಿಗೆ ಸದ್ಯ ಬೋಧಿಸಲಾಗುತ್ತಿರುವ ಕ್ಲಿಷ್ಟ ತೆಲುಗಿನ ಪಠ್ಯ ಕ್ರಮವನ್ನು ಸರಳ ತೆಲುಗಿಗೆ ಬದಲಾಯಿಸಲಾಗುವುದು. ಹಳೆ ವಿದ್ಯಾರ್ಥಿಗಳಿಗೆ 2025/26ರಿಂದ, ಹೊಸ ವಿದ್ಯಾರ್ಥಿಗಳಿಗೆ 2026/27ರಿಂದ ಈ ಪಠ್ಯ ಕ್ರಮ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ತ್ರಿಭಾಷಾ ನೀತಿಯನ್ನು ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗಿದೆ. ಈ ವಿಚಾರದಲ್ಲಿ ಈಗಾಗಲೇ ಕೇಂದ್ರ ಬಿಜೆಪಿ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ವಾಕ್ಸಮರ ಏರ್ಪಟ್ಟಿದೆ. ಈ ಹಿಂದಿನಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾ ಬಂದಿರುವ ತಮಿಳುನಾಡು ಸರ್ಕಾರ, ಈಗ ಇತರೆ ದಕ್ಷಿಣ ಭಾರತದ ರಾಜ್ಯಗಳಂತೆ ತ್ರಿಭಾಷಾ ನೀತಿ ಮೂಲಕ ಹಿಂದಿ ಹೇರಿಕೆ ಮಾಡುವುದನ್ನು ವಿರೋಧಿಸಿದೆ.
ಇದನ್ನು ಓದಿದ್ದೀರಾ? ತ್ರಿಭಾಷಾ ನೀತಿ ಹೇರಿಕೆಗೆ ವಿರೋಧ: ಬಿಜೆಪಿ ತೊರೆದ ತಮಿಳು ನಟಿ ರಂಜನಾ ನಾಚಿಯಾರ್
ಈ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸದಿದ್ದರೆ ಸಮಗ್ರ ಶಿಕ್ಷ ಮಿಷನ್‌ಗೆ 2,400 ರೂಪಾಯಿ ನಿಧಿಯನ್ನು ನೀಡುವುದಿಲ್ಲ ಎಂದು ತಮಿಳುನಾಡು ಸರ್ಕಾರ ಬೆದರಿಕೆ ಹಾಕಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. “ಭಾಷಾ ಯುದ್ಧಕ್ಕೆ ತಮಿಳುನಾಡು ಸಿದ್ಧ” ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್ ಘೋಷಿಸಿದ್ದಾರೆ. ಇದೀಗ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡಾ ಕೇಂದ್ರದೊಂದಿಗೆ ಭಾಷಾ ಸಮರಕ್ಕೆ ಇಳಿಯುವ ಸೂಚನೆಯಿದೆ.
ಸದ್ಯ ಕೇಂದ್ರ ಸರ್ಕಾರ ಇತರೆ ಮಾತೃ ಭಾಷೆ ಹೊಂದಿರುವ ರಾಜ್ಯಗಳ ಮೇಲೆಯೂ ಹಿಂದಿ ಹೇರಿಕೆ ಮಾಡುತ್ತಿರುವುದಕ್ಕೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇತರೆ ಭಾಷೆಗಳನ್ನು ಕೂಡಾ ಕಲಿಯುವುದು ಉತ್ತಮ. ಆದರೆ ಯಾವುದೇ ಭಾಷೆಯನ್ನು ನಾಶಗೊಳಿಸಿ ಇತರೆ ಭಾಷೆಯನ್ನು ಹೇರಿಕೆ ಮಾಡಬಾರದು ಎಂಬುದು ಇತರೆ ರಾಜ್ಯಗಳ ವಾದವಾಗಿದೆ.
