77 ವರ್ಷದ ವೃದ್ಧ ಮಹಿಳೆಯೊಬ್ಬರು ವೃದ್ಧಾಪ್ಯವೇನತಕ್ಕಾಗಿ ತೆವಳಿಕೊಂಡೇ 2 ಕಿ.ಮೀ ದೂರದ ಪಂಚಾಯತಿ ಕಚೇರಿಗೆ ತೆರಳಿರುವ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ತೆವಳುತ್ತಾ ಕಚೇರಿಗೆ ಹೋಗಿರುವ ಮನಕಲಕುವ ದೃಶ್ಯಗಳುಳ್ಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಯೋಂಜಾರ್ ಜಿಲ್ಲೆಯ ಟೆಲ್ಕೊಯ್ ಪ್ರದೇಶದ ನಿವಾಸಿ ಪಥೂರಿ ದೆಹುರಿ ಎಂಬ ವೃದ್ಧ ಮಹಿಳೆ ತಮ್ಮ ಜೀವನೋಪಾಯಕ್ಕಾಗಿ ಸರ್ಕಾರದಿಂದ ಬರುವ ವೃದ್ಧಾಪ್ಯವೇತನವನ್ನೇ ಅವಲಂಭಿಸಿದ್ದಾರೆ. ಈ ಹಿಂದೆ ಅವರಿಗೆ ಅಪಘಾತವೂ ಆಗಿದ್ದರಿಂದ, ನೇರವಾಗಿ ನಿಂತು ನಡೆಯಲು ವೃದ್ಧಗೆ ಸಾಧ್ಯವಿಲ್ಲ. ಆದರೂ, ವೃದ್ಧಾಪ್ಯವೇತನವನ್ನು ಪಡೆಯಲು ಬೇರಾರು ಸಹಾಯಕ್ಕೆ ಇಲ್ಲದ ಕಾರಣ, ಆಕೆ ತೆವಳುತ್ತಲೇ ಪಂಚಾಯತ್ ಕಚೇರಿಗೆ ಹೋಗಿ, ಬರಬೇಕಾದ ಅನಿವಾರ್ಯತೆ ಇದೆ ಎಂದು ತಿಳಿದುಬಂದಿದೆ.
ಆದಾಗ್ಯೂ, ವೃದ್ದ, ವಿಧವಾ, ವಿಶೇಷಚೇತನರಿಗೆ ನೀಡಲಾಗುವ ಪಿಂಚಣಿಗಳನ್ನು ಮನೆ ಬಾಗಿಲಿಗೇ ತಲುಪಿಸಬೇಕೆಂಬ ನಿಯಮಗಳಿವೆ. ಮನೆ ಬಾಗಿಲಿಗೆ ಸರ್ಕಾರಿ ಸೇವೆ ಎಂದು ಹಲವಾರು ಸರ್ಕಾರಗಳು ಘೋಷಿಸುತ್ತಿವೆ. ಪ್ರಚಾರ ಪಡೆಯುತ್ತಿವೆ. ಆದರೆ, ಈ ವೃದ್ದೆ ತಮ್ಮ ಮಾಸಿಕ ವೃದ್ದಾಪ್ಯವೇತನಕ್ಕಾಗಿ ಕಚೇರಿ ಬಾಗಿಲಿಗೆ ತಾವೇ ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಪಿಂಚಣಿ ಬೇಕೆಂದರೆ ಕಚೇರಿಗೆ ಬರಬೇಕೆಂದು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ ಹೇಳಿದ್ದರೆಂದು ಆರೋಪಿಸಲಾಗಿದೆ. ಕಚೇರಿಗೂ-ಮನೆಗೂ ತೆವಳಿಕೊಂಡೇ ಓಡಾಡುತ್ತಿರುವುದರಿಂದ ಆಕೆಯ ಕೈಗಳು ಮತ್ತು ಕಾಲುಗಳಲ್ಲಿ ‘ಬೊಬ್ಬೆ’ (ಗುಳ್ಳೆ) ಎದ್ದಿವೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ, “ಮಹಿಳೆಯ ಸಂಕಷ್ಟದ ಪರಿಸ್ಥಿತಿ ಬಗ್ಗೆ ನಮಗೆ ತಿಳಿದಿರಲಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಮುಂದಿನ ತಿಂಗಳಿನಿಂದ ಆಕೆಯ ಮನೆಗೆ ಸೇವೆಗಳನ್ನು ಒದಗಿಸುತ್ತೇವೆ” ಎಂದು ಹೇಳಿದ್ದಾರೆ.