ವೈಎಸ್‌ಆರ್ ತೆಲಂಗಾಣ ಪಕ್ಷದ ಮಾಜಿ ಅಧ್ಯಕ್ಷೆ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಸಹೋದರಿ ವೈ ಎಸ್ ಶರ್ಮಿಳಾ ಜನವರಿ 4ರಂದು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಂಧ್ರ ಪ್ರದೇಶದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿಡುಗು ರುದ್ರ ರಾಜು, ಕಾಂಗ್ರೆಸ್‌ನ ಸಿದ್ದಾಂತ ಹಾಗೂ ನಾಯಕತ್ವವನ್ನು ಗೌರವಿಸಿ ಪಕ್ಷಕ್ಕೆ ಬರುವ ಯಾರಿಗಾದರೂ ಸ್ವಾಗತ. ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವೈ ಎಸ್ ಶರ್ಮಿಳಾ ಅವರಿಗೂ ಆಂಧ್ರ ಕಾಂಗ್ರೆಸ್ ಪರವಾಗಿ ಆತ್ಮೀಯ ಸ್ವಾಗತ ಎಂದು ಶುಭ ಕೋರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಅತಿಥಿ ಉಪನ್ಯಾಸಕರು ಇತ್ತ ಸರಕಾರ; ನಡುವೆ ನಲುಗದಿರಲಿ ವಿದ್ಯಾರ್ಥಿಗಳು
ಮುಂಬರುವ ಆಂಧ್ರ ವಿದಾನಸಭೆ ಹಾಗೂ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವೈಎಸ್ ಶರ್ಮಿಳಾ ಗಮನಾರ್ಹ ಪಾತ್ರ ವಹಿಸುವ ಕಾರಣದಿಂದ ಆಯಕಟ್ಟಿನ ಹುದ್ದೆ ನೀಡುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ. ಅಲ್ಲದೆ ಆಂಧ್ರದಲ್ಲಿ ಪ್ರಬಲವಾಗಿರುವ ವೈಎಸ್‌ಆರ್ ಕಾಂಗ್ರೆಸ್, ಟಿಡಿಪಿಗೆ ಪೈಪೋಟಿ ನೀಡಲು ಹಾಗೂ ಅಲ್ಲಿನ ಕಾಂಗ್ರೆಸ್‌ಅನ್ನು ಬಲಪಡಿಸಲು ಶರ್ಮಿಳಾ ಸೇರ್ಪಡೆ ಬಹುಮುಖ್ಯ ಪಾತ್ರ ವಹಿಸಲಿದೆ.
ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆಯಾಗಿದ್ದ ಶರ್ಮಿಳಾ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ಅಲ್ಲದೆ 9 ವರ್ಷಗಳ ಆಡಳಿತದ ಅವಧಿಯಲ್ಲಿ ಕೆಸಿಆರ್ ಪಕ್ಷ ರಾಜ್ಯದ ಜನತೆಯ ಭರವಸೆ ಈಡೇರಿಸಲು ವಿಫಲವಾಗಿದೆ ಎಂದು ಟೀಕಿಸಿದ್ದರು.
1974ರಲ್ಲಿ ಜನಿಸಿದ್ದ ವೈಎಸ್ ಶರ್ಮಿಳಾ ಅವರು ಸಹೋದರ ವೈಎಸ್‌ಆರ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ರಾಜಕೀಯ ಸಂಬಂಧ ಕಡಿದುಕೊಂಡು ತೆಲಂಗಾಣದಲ್ಲಿ ತಮ್ಮದೇ ಪಕ್ಷ ಸ್ಥಾಪಿಸಿದ್ದರು.