ಆಂಧ್ರಪ್ರದೇಶದಲ್ಲಿ ಲೋಕಸಭಾ ಜತೆಗೆ ವಿಧಾನಸಭಾ ಚುನಾವಣೆಯೂ ನಡೆಯುತ್ತಿದೆ. ಈಗಾಗಲೇ ಬಹುತೇಕ ಫಲಿತಾಂಶ ಹೊರಬಿದ್ದಿದ್ದು, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪಕ್ಷ 16 ಲೋಕಸಭೆ ಮತ್ತು 130 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೇ, ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರು ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಟಿಡಿಪಿ ಪಕ್ಷ ಹೇಳಿದೆ.
ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಈ ಎರಡರಲ್ಲೂ ಮುನ್ನಡೆ ಸಾಧಿಸಿದೆ.
ಜಗನ್ ಮೋಹನ್ ರೆಡ್ಡಿ ನೇತೃತ್ವದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 2019ರ ಚುನಾವಣೆಯಲ್ಲಿ 175 ಸ್ಥಾನಗಳಲ್ಲಿ 151 ಸ್ಥಾನಗಳನ್ನು ಗೆದ್ದು ಜಯ ಸಾಧಿಸಿತ್ತು.
ಚುನಾವಣಾ ಆಯೋಗದ ಇತ್ತೀಚಿನ ಅಂಕಿ–ಅಂಶಗಳ ಪ್ರಕಾರ, ಟಿಡಿಪಿ 130, ಜನಸೇನಾ ಪಕ್ಷ 20 ಮತ್ತು ಬಿಜೆಪಿ 7 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ಲೋಕೇಶ್ ಕ್ರಮವಾಗಿ ಕುಪ್ಪಂ ಮತ್ತು ಮಂಗಳಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ವೈಎಸ್ಆರ್ಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮುಖ್ಯಮಂತ್ರಿ ಜಗನ್ ರೆಡ್ಡಿ ಪುಲಿವೆಂದುಲಾದಲ್ಲಿ ಟಿಡಿಪಿ ಪ್ರತಿಸ್ಪರ್ಧಿ ಬಿ ರವಿಗಿಂತ 21,292 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪವನ್ ಕಲ್ಯಾಣ್ ಅವರು ಪಿಠಾಪುರಂನಲ್ಲಿ ವೈಎಸ್ಆರ್ಸಿಪಿ ಪ್ರತಿಸ್ಪರ್ಧಿ ವಿ ಗೀತಾ ಅವರನ್ನು ಸೋಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಜರಾತ್‌ನಲ್ಲಿ ಖಾತೆ ತೆರೆದ ಕಾಂಗ್ರೆಸ್; ಕೈ ಅಭ್ಯರ್ಥಿ ಗೆನಿಬೆನ್ ಠಾಕೂರ್ ಗೆಲುವು
ವೈಎಸ್ಆರ್ಪಿ ಪಕ್ಷವು ಹೀನಾಯವಾಗಿ ಸೋಲನ್ನು ಕಂಡಿದೆ. ಈ ಹಿನ್ನೆಲೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಜಗನ್ ಮೋಹನ್ ರೆಡ್ಡಿ ಮುಂದಾಗಿದ್ದಾರೆ. ಇಂದು ಸಾಯಂಕಾಲದೊಳಗೆ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಹಾಗಾಗಿ, ರಾಜೀನಾಮೆ ನೀಡುವುದಕ್ಕಾಗಿ ರಾಜ್ಯಪಾಲರ ಭೇಟಿಗೆ ಜಗನ್ ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ.