ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್‌ಸಿಪಿ ಹಾಗೂ ತೆಲುಗು ದೇಶಂ ಪಕ್ಷಗಳ ನಡುವೆ ಘರ್ಷಣೆಯೇರ್ಪಟ್ಟಿದ್ದು, ಕಾರ್ಯಕರ್ತರು ಬೀದಿಗಿಳಿದು ಹೊಡೆದಾಡಿಕೊಂಡಿರುವ ಘಟನೆ ವರದಿಯಾಗಿದೆ.
ನೀರಾವರಿ ಯೋಜನೆಗಳ ಪರಿವೀಕ್ಷಣೆಗೆಂದು ಟಿಡಿಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅನ್ನಮಯ್ಯ ಹಾಗೂ ಚಿತ್ತೂರು ಜಿಲ್ಲೆಗಳ ಕೆಲವು ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ್ದರು. ಈ ವೇಳೆ ಟಿಡಿಪಿ ಕಾರ್ಯಕರ್ತರು ಹಾಗೂ ವೈಎಸ್‌ಆರ್‌ಸಿಪಿ ಕಾರ್ಯಕರ್ತರ ನಡುವೆ ಗಲಾಟೆ ಆರಂಭವಾಗಿದೆ. ಕುಪ್ಪಂ, ಪುಂಗನೂರು, ಪಲಮನೇರು ಪಟ್ಟಣಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಘರ್ಷಣೆಗಿಳಿದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಪ್ರತಿಕೃತಿ ದಹಿಸಿದ್ದಾರೆ. ಅದಕ್ಕೆ ವಿರುದ್ಧವಾಗಿ ಟಿಡಿಪಿ ಕಾರ್ಯಕರ್ತರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಆರಂಭವಾಗಿದೆ. ಗಲಭೆ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಬೇಕಾಗಿ ಬಂತು ಎನ್ನಲಾಗಿದೆ. ಎನ್‌ಎಸ್‌ಜಿ ಕಮ್ಯಾಂಡೋಗಳು ಹರಸಾಹಸ ಮಾಡಿ ಚಂದ್ರಬಾಬು ನಾಯ್ಡು ಅವರನ್ನು ಗುಂಪಿನಿಂದ ಪಾರು ಮಾಡಿ ಕರೆದೊಯ್ದರು ಎಂದು ವರದಿಯಾಗಿದೆ.
ಅಂಗಳ್ಳು ಎಂಬಲ್ಲಿ ಗಲಭೆ ತಹಬಂಧಿಗೆ ಬರುತ್ತಿದ್ದಂತೆ ಪುಂಗನೂರಿನಲ್ಲಿ ಗಲಭೆ ಆರಂಭವಾಗಿದೆ. ಉದ್ರಿಕ್ತರ ಗುಂಪು ಎರಡು ಪೊಲೀಸ್ ವಾಹನಗಳು ಸೇರಿದಂತೆ ಹಲವು ಖಾಸಗಿ ವಾಹನಗಳನ್ನು ಜಖಂಗೊಳಿಸಿದೆ.
ಘಟನೆ ಸಂಬಂಧ ಚಂದ್ರಬಾಬು ನಾಯ್ಡು ಹಾಗೂ ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ನಡುವೆ ವಾಕ್ಸಮರ ಶುರುವಾಗಿದೆ. ಗಲಭೆಗೆ ನಾಯ್ಡು ಅವರೇ ಕಾರಣ ಎಂದಿರುವ ಸಚಿವ ರಾಮಚಂದ್ರ ರೆಡ್ಡಿ, ‘ಮಾಜಿ ಮುಖ್ಯಮಂತ್ರಿಗಳು ತಮ್ಮ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿದ್ದಾರೆ. ಪೊಲೀಸರ ಮತ್ತು ವೈಎಸ್‌ಆರ್‌ಸಿಪಿ ಕಾರ್ಯಕರ್ತರ ಮೇಲಿನ ದಾಳಿಗೆ ನಾಯ್ಡು ಅವರೇ ಕಾರಣ’ ಎಂದು ಕಿಡಿ ಕಾರಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಚಂದ್ರಬಾಬು ನಾಯ್ಡು, ‘ಇಂಥ ದಾಳಿಗಳನ್ನು ಸಂಘಟಿಸುವ ಮೂಲಕ, ಗಲಭೆಗಳನ್ನು ಸೃಷ್ಟಿಸುವ ಮೂಲಕ ತನ್ನನ್ನು ವೈಎಸ್‌ಆರ್‌ಸಿಪಿ ತಡೆಯಲಾಗದು’ ಎಂದಿದ್ದಾರೆ.
ಗಲಭೆಯಲ್ಲಿ ಪೊಲೀಸರು ಸೇರಿದಂತೆ ಸುಮಾರು 20 ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ, ಚಿತ್ತೂರು ಜಿಲ್ಲೆಯಲ್ಲಿ ಉದ್ವಿಗ್ನತೆ ನೆಲೆಸಿದೆ. ಕುಪ್ಪಂ, ಪುಂಗನೂರು, ಪಲಮನೇರು ಪಟ್ಟಣಗಳಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.