ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರ ಹೆಚ್ಚಾಗಿದೆ. ದಕ್ಷಿಣ ಆಂಧ್ರ ಮತ್ತು ಚೆನ್ನೈ ಸೇರಿದಂತೆ ಉತ್ತರ ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ಅಬ್ಬರದ ಮಳೆಯಾಗುತ್ತಿದೆ. ನಾನಾ ಭಾಗಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ಥವಾಗಿದೆ. ಹೀಗಾಗಿ, ಡಿಸೆಂಬರ್ 6ರವರೆಗೆ ಚೆನ್ನೈ ಜೊತೆ ಸಂಪರ್ಕ ಒದಗಿಸುತ್ತಿದ್ದ ಸುಮಾರು 120 ರೈಲುಗಳನ್ನು ರದ್ದುಗೊಳಿಸಲಾಗಿದೆ. ಅವುಗಳಲ್ಲಿ ಬಹುತೇಕ ರೈಲುಗಳು ಆಂಧ್ರ ಮತ್ತು ತೆಲಂಗಾಣ ಮೂಲಕ ಹಾದುಹೋಗುವ ರೈಲುಗಳಾಗಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
“ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಭಾನುವಾರ ಮುಂಜಾನೆಯಿಂದ ಚಂಡಮಾರುತದ ಅಬ್ಬರ ತೀವ್ರಗೊಂಡಿದೆ. ಚಂಡಮಾರುತವು ವಾಯವ್ಯ ಭಾಗದ ಕಡೆಗೆ ಚಲಿಸುವ ಸಾಧ್ಯತೆಯಿದೆ” ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ನೆಲ್ಲೂರು ಮತ್ತು ಮಚಲಿಪಟ್ಟಣಂ ಹಾಗೂ ಉತ್ತರ ತಮಿಳುನಾಡಿನ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ತಮಿಳುನಾಡಿದ ಈ ನಾಲ್ಕೂ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.
ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ನಾಗಪಟ್ಟಿಣಂ, ವಿಲ್ಲುಪುರಂ, ಕಡಲೂರು, ಕಲ್ಲಕುರಿಚಿ ಮತ್ತು ತಿರುಪತ್ತೂರು ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಭಾರೀ ಮಳೆಯಿಂದಾಗಿ 120 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಚೆನ್ನೈ, ಬೆಂಗಳೂರು ಮತ್ತು ತಿರುವನಂತಪುರದಿಂದ ದೆಹಲಿ, ಧನಾಪುರ, ಸಂತ್ರಗಚಿ, ಪಾಟ್ನಾ, ವಿಶಾಖಪಟ್ಟಿಣಂ, ವಿಜಯವಾಡ ಮತ್ತು ಹೌರಾ ಸೇರಿದಂತೆ ದೇಶದ ಉತ್ತರ ಭಾಗಕ್ಕೆ ಹೋಗುವ ಹಲವಾರು ರೈಲುಗಳು ರದ್ದಾಗಿವೆ. ಚೆನ್ನೈ ಸೆಂಟ್ರಲ್, ಚೆನ್ನೈ ಎಗ್ಮೋರ್ ಮತ್ತು ತಾಂಬರಂನಿಂದ ಹೊರಡುವ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆ ರದ್ದಾಗಿದೆ. ರದ್ದಾಗಿರುವ ರೈಲುಗಳಲ್ಲಿ ಟಿಕೆಟ್ ಖಾಯ್ದಿರಿಸಿದ್ದ ರೈಲು ಪ್ರಯಾಣಿಕರಿಗೆ ಟಿಕೆಟ್ ದರದ ಸಂಪೂರ್ಣ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ರೈಲ್ವೇ ಭರವಸೆ ನೀಡಿದೆ.
ಚೆನ್ನೈ-ಸೂಲೂರ್‌ಪೇಟ್ಟೈ ಮತ್ತು ಚೆನ್ನೈ-ಅರ್ಕಾಕೋಣಂ ಮಾರ್ಗಗಳಲ್ಲಿ ಚಲಿಸುತ್ತಿದ್ದ ಉಪನಗರ ರೈಲುಗಳು ಕೂಡ ರದ್ದಾಗಿವೆ.