ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಜ್ಞಾನಶೇಖರನ್‌ಗೆ ಚೆನ್ನೈ ನ್ಯಾಯಾಲಯ ಸೋಮವಾರ ಕನಿಷ್ಠ 30 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ. ಜ್ಞಾನಶೇಖರನ್‌ಗೆ ನ್ಯಾಯಾಲಯವು 90,000 ರೂ. ದಂಡ ವಿಧಿಸಿದೆ.
ಇತ್ತೀಚೆಗೆ ಆರೋಪಿ ಜ್ಞಾನಶೇಖರನ್ ದೋಷಿ ಎಂದು ಚೆನ್ನೈ ಮಹಿಳಾ ನ್ಯಾಯಾಲಯ ತೀರ್ಪು ನೀಡಿದೆ. ಜ್ಞಾನಶೇಖರನ್ ವಿರುದ್ಧ ದಾಖಲಾಗಿರುವ ಎಲ್ಲಾ 11 ಆರೋಪಗಳಲ್ಲಿ ಅವರನ್ನು ದೋಷಿ ಎಂದು ಘೋಷಿಸಿದ್ದಾರೆ. ಘಟನೆ ನಡೆದ ಕೇವಲ ಐದು ತಿಂಗಳಲ್ಲಿ ಈ ತೀರ್ಪು ಹೊರಬಿದ್ದಿದೆ. ಸೋಮವಾರ ಶಿಕ್ಷೆ ಪ್ರಕಟಿಸಲಾಗಿದೆ.
ಇದನ್ನು ಓದಿದ್ದೀರಾ? ಅಣ್ಣಾ ವಿಶ್ವವಿದ್ಯಾಲಯ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಜ್ಞಾನಶೇಖರನ್ ದೋಷಿ
2024ರ ಡಿಸೆಂಬರ್ 23ರ ರಾತ್ರಿ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ತನ್ನ ಗೆಳೆಯನೊಂದಿಗೆ ಇದ್ದಾಗ ಜ್ಞಾನಶೇಖರನ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜ್ಞಾನಶೇಖರನ್ ವಿದ್ಯಾರ್ಥಿನಿಯನ್ನು 40 ನಿಮಿಷಗಳ ಕಾಲ ತನ್ನ ವಶದಲ್ಲಿಟ್ಟುಕೊಂಡು ಆಕೆ ಮತ್ತು ಆಕೆಯ ಗೆಳೆಯನ ವಿಡಿಯೋ ಮಾಡಿ ಆ ದೃಶ್ಯಗಳನ್ನು ಬಳಸಿಕೊಂಡು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.
ಲೈಂಗಿಕ ಕಿರುಕುಳ ತಡೆ(PoSH) ಸಮಿತಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಅದೇ ದಿನ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಸೆಂಬರ್ 25ರಂದು ಗ್ರೇಟರ್ ಚೆನ್ನೈ ಪೊಲೀಸರು ಜ್ಞಾನಶೇಖರನ್ ಬಂಧನ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ: ಮದ್ರಾಸ್ ಹೈಕೋರ್ಟ್
ಚೆನ್ನೈನ ಕೊಟ್ಟೂರುಪುರಂನ ಜ್ಞಾನಶೇಖರನ್ ವಿರುದ್ಧ ಈಗಾಗಲೇ ಭಾರತೀಯ ದಂಡ ಸಂಹಿತೆಯ(ಐಪಿಸಿ) ಅಡಿಯಲ್ಲಿ ಏಳು ಪ್ರಕರಣಗಳು ಬಾಕಿ ಉಳಿದಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಹೊಸ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡು ಸರ್ಕಾರವು ಕಠಿಣ ಗೂಂಡಾ ಕಾಯ್ದೆಯನ್ನು ಸಹ ಹಾಕಿದೆ. ಈ ಗೂಂಡಾ ಕಾಯ್ದೆಯು ಒಂದು ವರ್ಷದವರೆಗೆ ಜಾಮೀನು ಪಡೆಯಲು ಅವಕಾಶ ನೀಡುವುದಿಲ್ಲ.
ಜ್ಞಾನಶೇಖರನ್ ಬಂಧನದ ನಂತರ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಕಾರ್ಯಕರ್ತರೊಂದಿಗಿನ ಚಿತ್ರಗಳು ಹರಿದಾಡಿ ರಾಜಕೀಯ ವಿವಾದ ಎದ್ದಿತ್ತು. ಆರಂಭದಲ್ಲಿ ಆರೋಪಿ ಡಿಎಂಕೆಗೆ ಸೇರಿದವನು ಎಂಬುದನ್ನು ನಿರಾಕರಿಸಿತ್ತು. ಆದರೆ ವಿಪಕ್ಷ ಹಲವು ಚಿತ್ರಗಳನ್ನು ವೈರಲ್‌ಗೊಳಿಸಿತ್ತು. ಇದರಿಂದಾಗಿ ತೀವ್ರ ರಾಜಕೀಯ ಸಂಚಲನ ಉಂಟಾಗಿತ್ತು.
