ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇನ್ನೋರ್ವ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ನಡೆದಿದೆ. ಒಂದು ತಿಂಗಳಲ್ಲೇ ಮೂರನೇ ಅತ್ಯಾಚಾರ ಘಟನೆ ಇದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬಾಲಕಿ ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಳು. ಆಕೆ ವಾಪಸ್ ಬಾರದ ಕಾರಣ ತಂದೆ ಹುಡುಕಾಡಿದ್ದಾರೆ. ಈ ವೇಳೆ ಆಕೆಯ ಮೃತದೇಹ ಪತ್ತೆಯಾಗಿದೆ, ಬಟ್ಟೆಯನ್ನು ಹರಿಯಲಾಗಿತ್ತು ಎನ್ನಲಾಗಿದೆ. ತನಿಖೆ ನಡೆಸಿದ ಪೊಲೀಸರು ಖೋಕೆನ್ ಗ್ರಾಮದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಪ್ರತೀಕಾರ ಕ್ರಮವಾಗಿ ಅತ್ಯಾಚಾರ; ಬಯಲಿಗೆ ಬಾರದ ನೂರಾರು ಪ್ರಕರಣಗಳು
ಈ ಘಟನೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಝೋಮಿ ಮದರ್ಸ್ ಅಸೋಸಿಯೇಷನ್ ಆರೋಪಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ. “ಮಹಿಳೆಯರ ಮೇಲೆ ಪದೇ ಪದೇ ಅತ್ಯಾಚಾರ ನಡೆಯುತ್ತಿರುವುದು ರಾಜ್ಯದಲ್ಲಿ ಮಹಿಳೆಯರ ಗೌರವ ಮತ್ತು ರಕ್ಷಣೆಯಿಲ್ಲ ಎಂಬುದಕ್ಕೆ ಸಾಕ್ಷಿ” ಎಂದು ಹೇಳಿಕೆಯಲ್ಲಿ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿದೆ. ಈ ಹಿಂದೆ 10 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಬಾಲಕ ಲೈಂಗಿಕ ದೌರ್ಜನ್ಯ ನಡೆಸಿದ್ದ. ಹಾಗೆಯೇ 9 ವರ್ಷದ ಬಾಲಕಿಯ ಮೃತ ದೇಹ ಮಾರ್ಚ್‌ನಲ್ಲಿ ಪತ್ತೆಯಾಗಿದೆ. ಈ ಎಲ್ಲಾ ಪ್ರಕರಣಗಳ ತನಿಖೆಗೆ ಮಹಿಳಾ ಸಂಘಟನೆಗಳು ಆಗ್ರಹಿಸಿದೆ.
