ವಿಶಿಷ್ಟ ಚಿಂತಕರೂ ಆದ ಪ್ರೊಫೆಸರ್ ಅಪೂರ್ವಾನಂದ್ ಅವರಿಗೆ ವಿದೇಶದಲ್ಲಿ ಶೈಕ್ಷಣಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ದೆಹಲಿ ವಿಶ್ವವಿದ್ಯಾಲಯ ಅನುಮತಿಯನ್ನು ನಿರಾಕರಿಸಿದೆ.
ಇದೇ ತಿಂಗಳ 23ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ‘ದಿ ಯೂನಿವರ್ಸಿಟಿ ಅಂಡರ್ ಎ ಗ್ಲೋಬಲ್ ಅಥಾರಿಟೇರಿಯನ್ ಟರ್ನ್’ (ಜಾಗತಿಕ ಸರ್ವಾಧಿಕಾರದ ಹೊರಳಿನ ಸುಳಿಯಲ್ಲಿ ವಿಶ್ವವಿದ್ಯಾಲಯ) ಕುರಿತು ಅಪೂರ್ವಾನಂದ್ ಮಾತಾಡಬೇಕಿತ್ತು.
ಇಂಡಿಯಾ-ಚೈನಾ ಇನ್‌ಸ್ಟಿಟ್ಯೂಟ್ ನ 20ನೆಯ ವಾರ್ಷಿಕೋತ್ಸವ ಆಚರಣೆಯ ಪ್ರಯುಕ್ತ ನ್ಯೂಯಾರ್ಕಿನ ‘ದಿ ನ್ಯೂ ಸ್ಕೂಲ್’ ಇದೇ ಏಪ್ರಿಲ್ 23ರಿಂದ ಮೇ 1ರ ತನಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅಪೂರ್ವಾನಂದ್ ದೆಹಲಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರೊಫೆಸರ್. ನ್ಯೂಯಾರ್ಕಿನ ಈ ಕಾರ್ಯಕ್ರಮದಲ್ಲಿ ಅವರ ಉಪನ್ಯಾಸದ ಪಠ್ಯವನ್ನು ಮುಂದಾಗಿಯೇ ಸಲ್ಲಿಸಬೇಕು. ಸಲ್ಲಿಸಿದ ನಂತರ ವಿದೇಶದಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವ ಕುರಿತು ಪರಿಗಣಿಸಲಾಗುವುದು ಎಂದು ವಿಶ್ವವಿದ್ಯಾಲಯ ಅವರಿಗೆ ಸೂಚಿಸಿತ್ತು. ಪಠ್ಯವನ್ನು ಮುಂದಾಗಿಯೇ ಸಲ್ಲಿಸಲು ಅವರು ತಿರಸ್ಕರಿಸಿದ್ದಾರೆ. ಪರಿಣಾಮವಾಗಿ ವಿಶ್ವವಿದ್ಯಾಲಯ ಅವರಿಗೆ ಅನುಮತಿಯನ್ನು ನಿರಾಕರಿಸಿದೆ.
ಮುಂಗಡವಾಗಿಯೇ 35 ದಿನಗಳ ರಜೆಗೆ ತಾವು ನೀಡಿದ ಅರ್ಜಿಯನ್ನು ವಿಶ್ವವಿದ್ಯಾಲಯ ತಿಂಗಳಿನಿಂದ ಬಾಕಿ ಇರಿಸಿಕೊಂಡಿತ್ತು. ವಿಚಾರಿಸಿದಾಗ ಈ ಸಂಗತಿಯನ್ನು ಕೇಂದ್ರ ಶಿಕ್ಷಣ ಮಂತ್ರಾಲಯದ ಪರಿಶೀಲನೆಗೆ ರವಾನಿಸಲಾಗಿದೆ ಎಂಬ ಸಮಜಾಯಿಷಿ ನೀಡಲಾಯಿತು ಎಂದು ಅಪೂರ್ವಾನಂದ್ ಹೇಳಿದ್ದಾರೆ.
ತಮಗೆ ತಿಳಿದಿರುವಂತೆ ಬೋಧಕ ವರ್ಗದ ಸದಸ್ಯರಿಗೆ ರಜೆ ಮಂಜೂರು ಮಾಡಲು ಸರ್ಕಾರದ ಅನುಮತಿಯ ಅಗತ್ಯವಿಲ್ಲವೆಂದು ತಾವು ರಿಜಿಸ್ಟ್ರಾರ್ ಅವರಿಗೆ ತಿಳಿಸಿದ್ದಾಗಿ ದೆಹಲಿ ವಿವಿ ಉಪಕುಲಪತಿ ಯೋಗೇಶ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ ಅಪೂರ್ವಾನಂದ್.
ತಮ್ಮ ಉದ್ದೇಶಿತ ಉಪನ್ಯಾಸದ ಪಠ್ಯವನ್ನು ಸಲ್ಲಿಸಬೇಕೆಂಬ ವಿಶ್ವವಿದ್ಯಾಲಯದ ಷರತ್ತು ಸೆನ್ಸಾರ್ಶಿಪ್ ಅಲ್ಲದೆ ಮತ್ತೇನೂ ಅಲ್ಲ. ವಿಶ್ವವಿದ್ಯಾಲಯದ ಆಡಳಿತವು ಅಕೆಡಮಿಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು. ಈ ಪ್ರಕರಣ ತಮಗೆ ಅತೀವ ವ್ಯಥೆಯನ್ನು ಉಂಟು ಮಾಡಿದ್ದು, ದಶಕಗಳ ಕಾಲ ಬೋಧಕರಾಗಿ ತಾವು ಮಾಡಿರುವ ಬೋಧನೆ ಮತ್ತು ಬರೆಹಕ್ಕೆ ವಿಶ್ವವಿದ್ಯಾಲಯ ಕವಡೆ ಕಿಮ್ಮತ್ತನ್ನೂ ನೀಡುತ್ತಿಲ್ಲ. ನಾನು ಬರೆದ ಪತ್ರಗಳು ಮತ್ತು ಈ ಮೇಲ್ ಗಳು ಮುಟ್ಟಿವೆಯೆಂದು ಹೇಳುವ ಕನಿಷ್ಠ ಸೌಜನ್ಯವನ್ನು ಕೂಡ ವಿಶ್ವವಿದ್ಯಾಲಯ ತೋರಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ದೂರಿದ್ದಾರೆ.
ಸಾಂಸ್ಥಿಕ ಸ್ವಾಯತ್ತತೆಯ ತತ್ವವನ್ನು ಬಲಿ ಕೊಟ್ಟು, ರಜೆ ಮಂಜೂರು ಮಾಡಲು ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಆಹ್ವಾನಿಸಿದ ವಿಶ್ವವಿದ್ಯಾಲಯದ ನಡೆ ಅರ್ಥವಾಗದ ಸಂಗತಿ ಎಂದು ಅಪೂರ್ವಾನಂದ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕಾರ್ಯಕ್ರಮದ ಸನ್ನಿವೇಶದಲ್ಲಿ ಕೇಂದ್ರ ಶಿಕ್ಷಣ ಮಂತ್ರಾಲಯದ ಜೊತೆ ಸಮಾಲೋಚಿಸಲಾಯಿತು. ಸಾಮಾನ್ಯವಾಗಿ ಮಂತ್ರಾಲಯವನ್ನು ಸಂಪರ್ಕಿಸುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಮಂತ್ರಾಲಯದ ಸಲಹೆ ಪಡೆಯುವುದು ಸೂಕ್ತ ಎನಿಸಿತು. ತಮ್ಮ ಉಪನ್ಯಾಸದ ಲಿಖಿತ ಪ್ರತಿಯೊಂದನ್ನು ನೀಡುವಂತೆ ಕೇಳಿದೆವು. ಆದರೆ ಅವರು ಒಪ್ಪಲಿಲ್ಲ ಎಂದು ದೆಹಲಿ ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆಯೆಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.