ವಿವಾಹ ಸಮಾರಂಭದಲ್ಲಿ ಪಾರ್ಕಿಂಗ್ ವಿಷಯವಾಗಿ ನಡೆದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಗುಂಡೇಟಿಗೆ ಬಲಿಯಾಗಿ, ಐವರು ಗಾಯಗೊಂಡಿರುವ ಘಟನೆ ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ರಾತ್ರಿ 9.30ರ ಸುಮಾರಿಗೆ ಗರ್ಹಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಲಹರ್ಪಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಲುವ್‌ಕುಶ್ ಮತ್ತು ರಾಹುಲ್ ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ದಲಿತ ವರನ ವಿವಾಹ ಮೆರವಣಿಗೆಗೆ ವಿರೋಧ; ಸವರ್ಣೀಯರಿಂದ ಹಲವರ ಮೇಲೆ ಹಲ್ಲೆ
ವಿವಾಹ ಸಮಾರಂಭದಲ್ಲಿ ವಾಹನಗಳನ್ನು ನಿಲ್ಲಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಪೈಕಿ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಒಬ್ಬ ವ್ಯಕ್ತಿ ಗುಂಡೇಟಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೋರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ” ಎಂದು ಹೇಳಿದ್ದಾರೆ.
ಇತರ ಐವರಿಗೆ ಗುಂಡೇಟಿನಿಂದ ಗಾಯಗಳಾಗಿದ್ದು, ಭೋಜ್‌ಪುರದ ಜಿಲ್ಲಾ ಕೇಂದ್ರವಾದ ಅರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಹಾಗೆಯೇ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಆರೋಪಿಗಳ ಗುರುತುಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.