- ಪೂಂಛ್ ಭಯೋತ್ಪಾದಕ ದಾಳಿಯಲ್ಲಿ ಐವರು ಯೋಧರು ಹುತಾತ್ಮ
- ಭಯೋತ್ಪಾದಕರಿಗೆ ನೆರವು ಆರೋಪದಲ್ಲಿ ಸ್ಥಳೀಯರ ಬಂಧನ
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಭಯೋತ್ಪಾದಕ ದಾಳಿ ಬಗ್ಗೆ ಸೇನೆ ತನಿಖೆ ನಡೆಸಿದ್ದು, ದಾಳಿಯಲ್ಲಿ ಕೆಲವು ಸಮುದಾಯದ ವ್ಯಕ್ತಿಗಳ ಹೆಸರು ಪತ್ತೆಯಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳನ್ನು ಬಂಧಿಸಿದೆ.
ಇದು ಆಘಾತಕಾರಿ ಮಾಹಿತಿ ಎಂದು ಸೇನೆ ಹೇಳಿದೆ. ಈ ಬಗ್ಗೆ ಸೇನೆ ಜನರಿಗಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. “ಭವಿಷ್ಯದಲ್ಲಿ ಭಯೋತ್ಪಾದಕತೆಗೆ ಸಂಬಂಧಿಸಿದ ಶಂಕಿತ ಘಟನೆಗಳು ಮತ್ತು ಚಟುವಟಿಕೆಗಳು ಕಂಡು ಬಂದರೆ ಸೇನೆಯ ಗಮನಕ್ಕೆ ತರಬೇಕು” ಎಂದು ಹೇಳಿಕೆಯಲ್ಲಿ ಸೇನೆ ತಿಳಿಸಿದೆ.
“ಪೂಂಛ್ ಜಿಲ್ಲೆಯಲ್ಲಿ ಇತ್ತೀಚೆಗೆ ಸೇನಾ ವಾಹನದ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಸ್ಥಳೀಯ ಸಮುದಾಯದ ಕೆಲವರು ಒಳಗೊಂಡಿರುವ ಆಘಾತಕಾರಿ ಸಂಗತಿ ತಿಳಿದುಬಂದಿದೆ” ಎಂದು ಸೇನೆ ಶನಿವಾರ (ಏಪ್ರಿಲ್ 29) ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಪೂಂಛ್ ದಾಳಿ ನಡೆಸಲು ಸಂಚು ರೂಪಿಸಿದ ಭಯೋತ್ಪಾದಕರಿಗೆ ಊಟ, ವಸತಿ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಿದ ಆರು ಸ್ಥಳೀಯ ನಿವಾಸಿಗಳನ್ನು ಬಂಧಿಸಲಾಗಿದೆ. ಸ್ಥಳೀಯರ ಸಹಕಾರವಿಲ್ಲದೆ ಭಯೋತ್ಪಾದಕರು ಇಂತಹ ಕೃತ್ಯ ಎಸಗಲು ಸಾಧ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ದಿಲ್‌ಬಾಗ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“370ನೇ ವಿಧಿ ರದ್ಧತಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಮತ್ತು ಸರ್ಕಾರ ರಚನೆಗೆ ಪಾಕಿಸ್ತಾನ ಅವಕಾಶ ನೀಡುತ್ತಿಲ್ಲ” ಎಂದು ಸೇನಾ ಪ್ರಕಟಣೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಕೆಜಿಗೆ ₹171.50 ಕಡಿತ
“ಪೂಂಛ್ ಭಯೋತ್ಪಾದಕ ದಾಳಿ ರೀತಿಯೇ ಭಯೋತ್ಪಾದಕ ಶಿಬಿರಗಳಲ್ಲಿ ಸ್ಥಳೀಯ ಪ್ರದೇಶದ ಯುವಕರಿಗೆ ತರಬೇತಿ ನೀಡಿ ಅವರನ್ನು ಪ್ರಚಾರಾಭಿಯಾನ ನಡೆಸಲು ಬಳಸಿಕೊಳ್ಳಲಾಗುತ್ತಿದೆ. ತರಬೇತಿಯ ಮೂಲಕ ಅವರನ್ನು ದಾರಿ ತಪ್ಪಿಸಲಾಗುತ್ತಿದೆ” ಎಂದು ಸೇನೆ ಹೇಳಿದೆ.
ಏಪ್ರಿಲ್ 20ರಂದು ಪೂಂಛ್‌ನ ತೋಟ ಗಲಿಯಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಐವರು ಯೋಧರು ಹುತಾತ್ಮರಾಗಿ, ಒಬ್ಬರು ಗಾಯಗೊಂಡಿದ್ದರು.