- ಮೀತೀ- ಕುಕಿ ಸಮುದಾಯಗಳ ಘರ್ಷಣೆಯಿಂದ ಮೇ 3 ರಿಂದ ನಡೆಯುತ್ತಿರುವ ಹಿಂಸಾಚಾರ
- ಹಿಂಸಾಚಾರ ಘಟನೆಗಳಿಂದ ರಾಜ್ಯದಲ್ಲಿ ಇದುವರೆಗೆ 60 ಸಾವಿರ ಮಂದಿ ಸ್ಥಳಾಂತರ
ಮಣಿಪುರದ ಹಿಂಸಾಚಾರ ಪೀಡಿತ ಇಂಫಾಲ ಜಿಲ್ಲೆಯಲ್ಲಿ ಬಂಧನಕ್ಕೊಳಗಾಗಿದ್ದ ನಿಷೇಧಿತ ಬಂಡಾಯ ಗುಂಪು ಕೆವೈಕೆಎಲ್‌ನ 12 ಕಾರ್ಯಕರ್ತರನ್ನು 1,200 ರಿಂದ 1,500 ಮಹಿಳೆಯರ ನೇತೃತ್ವದ ಜನಸಮೂಹದ ಒತ್ತಾಯದ ಮೇರೆಗೆ ಹಸ್ತಾಂತರಿಸಲಾಗಿದೆ ಎಂದು ಸೇನೆ ಭಾನುವಾರ (ಜೂನ್ 25) ತಿಳಿಸಿದೆ.
ಸೇನಾ ಯೋಧರು ಶನಿವಾರ (ಜೂನ್ 24) ನಡೆಸಿದ ಕಾರ್ಯಾಚರಣೆಯಲ್ಲಿ 12 ಬಂಡುಕೋರರನ್ನು ಬಂಧಿಸಿದ್ದರು. ಮಹಿಳೆಯರ ಪ್ರತಿಭಟನೆಗೆ ಮಣಿದು ಈ ಬಂಡುಕೋರರನ್ನು ಬಿಡುಗಡೆ ಮಾಡಲಾಗಿದೆ ಎಂದು ಸೇನೆ ಹೇಳಿದೆ.
ಇಂಫಾಲದ ಇಥಾಮ್ ಗ್ರಾಮದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಸೇನಾ ಯೋಧರು ಶನಿವಾರ ಮಣಿಪುರ ಹಿಂಸಾಚಾರ ಸಂಬಂಧ 12 ಬಂಡುಕೋರರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.
12 ಬಂಡುಕೋರರಲ್ಲಿ ಸ್ವಯಂ ಘೋಷಿತ ಲೆಫ್ಟಿನೆಂಟ್ ಕರ್ನಲ್ ಮೊಯಿರಾಂಗ್ತೆಮ್ ತಾಂಬಾ ಕೂಡ ಸೇರಿದ್ದಾನೆ. ಈತ 2015ರಲ್ಲಿ 6 ಡೋಗ್ರಾ ಪಡೆಯ ಮೇಲೆ ದಾಳಿ ಮಾಡಿದ್ದ ಪ್ರಮುಖ ಸಂಚುಕೋರನಾಗಿದ್ದ.
ಮಣಿಪುರ ಹಿಂಸಾಚಾರ ಸಂಬಂಧ ಬಂಡುಕೋರರ ಬಂಧನ ಮಾಹಿತಿ ತಿಳಿಯುತ್ತಿದ್ದಂತೆ 1200ಕ್ಕೂ ಹೆಚ್ಚು ಮಹಿಳೆಯರು ಮತ್ತು ಸ್ಥಳೀಯ ನಾಯಕರು ಬಂಡುಕೋರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸೇನಾ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
“ಮಹಿಳಾ ಜನಸಮೂಹ ಮಾಡಿದ ಪುನರಾವರ್ತಿತ ಮನವಿಗಳಿಂದ ಸೇನೆಯು ಮತ್ತೆ ಕಾರ್ಯಾಚರಣೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಮಹಿಳೆಯರ ಆಕ್ರೋಶಿತ ಸಮೂಹದ ನಿಗ್ರಹಕ್ಕೆ ಭದ್ರತಾ ಪಡೆ ಬಳಸುವುದು ತರವಲ್ಲ ಎಂದು ಅರಿತು 12 ಬಂಡುಕೋರರನ್ನು ಸ್ಥಳೀಯ ನಾಯಕರಿಗೆ ಹಸ್ತಾಂತರಿಸಲಾಯಿತು” ಎಂದು ಭಾನುವಾರ ಬೆಳಿಗ್ಗೆ ಹೊರಡಿಸಿದ ಪ್ರಕಟಣೆಯೊಂದರಲ್ಲಿ ಸೇನೆ ತಿಳಿಸಿದೆ.
“ಮಣಿಪುರದಲ್ಲಿನ ಹಿಂಸಾಚಾರ ನಿಗ್ರಹಕ್ಕೆ ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಜನರು ಭದ್ರತಾ ಪಡೆಗಳಿಗೆ ಸಹಕರಿಸಬೇಕು” ಎಂದು ಸೇನೆ ಪ್ರಕಟಣೆಯಲ್ಲಿ ಹೇಳಿದೆ.
ಕಾಂಗ್ಪೋಕ್ಪಿ ಮತ್ತು ಇಂಫಾಲ ಪೂರ್ವ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ನಂತರ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ಶುಕ್ರವಾರ ನಡೆಸಿದ ಕಾರ್ಯಾಚರಣೆಗೆ ಮಹಿಳೆಯರ ದೊಡ್ಡ ಗುಂಪೊಂದು ತಡೆ ಒಡ್ಡಿತ್ತು.
ಈ ಸುದ್ದಿ ಓದಿದ್ದೀರಾ? ಈ ಸಭೆ ದೆಹಲಿ ಸುಗ್ರೀವಾಜ್ಞೆ ವಿಚಾರ ಚರ್ಚಿಸಲು ಅಲ್ಲ ಎಂದು ಆಪ್-ಕಾಂಗ್ರೆಸ್‌ಗೆ ಬುದ್ಧಿ ಹೇಳಿದ ಮಮತಾ ಬ್ಯಾನರ್ಜಿ
ಈ ಮೊದಲು ಈ ಮಹಿಳೆಯರು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಸೇನೆಯ ಕಾರ್ಯಾಚರಣೆ ತಡೆಯಲು ರಸ್ತೆಗಳನ್ನು ನಿರ್ಬಂಧಿಸಿದ್ದರು.
ಮೇ 3 ರಂದು ಮಣಿಪುರ ಹಿಂಸಾಚಾರ ಪ್ರಾರಂಭವಾದಾಗಿನಿಂದ ಸೇನೆಯು ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ವಿಚಾರದಲ್ಲಿ ಮೀತೀ ಹಾಗೂ ಕುಕಿ ಸಮುದಾಯಗಳ ನಡೆಯುತ್ತಿರುವ ಘರ್ಷಣೆಯಲ್ಲಿ ಇದುವರೆಗೆ ಸುಮಾರು 155 ಮಂದಿ ಮೃತಪಟ್ಟಿದ್ದಾರೆ. 60 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ.