CJP ಸಹ ಸಂಚಾಲಕರಾದ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಇಬ್ಬರು ಯುವ ನಾಯಕರ ಬಂಧನ ಮತ್ತು ಅವರ ವಿರುದ್ಧದ ಪೊಲೀಸ್ ಕ್ರಮವನ್ನು ಅವರು ‘ಸರ್ಕಾರದ ಪ್ರಾಯೋಜಿತ ಭಯೋತ್ಪಾದನೆ’ ಹಾಗೂ ‘ಪೊಲೀಸರ ಪ್ರಾಯೋಜಿತ ದೌರ್ಜನ್ಯ’ ಎಂದು ಟೀಕಿಸಿದ್ದಾರೆ.
ಸೋಮವಾರ ಇಬ್ಬರ ನ್ಯಾಯಾಂಗ ಬಂಧನವನ್ನು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಯುವ ಪ್ರತಿಭಟನಾಕಾರರನ್ನು ಹಿಂಸಿಸಲಾಗುತ್ತಿದೆ. ಬಂಧನವನ್ನು ಮುಂದುವರಿಸುವ ಉದ್ದೇಶದಿಂದಲೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
“ಆಶುತೋಷ್ ಮತ್ತು ಸೌರವ್ ಅವರ ಬಂಧನವನ್ನು ವಿಸ್ತರಿಸುವ ಪ್ರಯತ್ನದ ಹಿಂದಿನ ಉದ್ದೇಶವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲು ಪ್ರತಿದಿನ ಇಂತಹ ಅಪಾಯಕಾರಿ ಪ್ರವೃತ್ತಿಯನ್ನು ಬಳಸಲಾಗುತ್ತಿದೆ. ಜೆನ್ ಝೀ ಯುವಕ-ಯುವತಿಯರ ಮೇಲಿನ ಹಿಂಸೆ ನಿಲ್ಲಬೇಕು” ಎಂದು ಆಗ್ರಹಿಸಿದ್ದಾರೆ.
ಅಕ್ಟೋಬರ್ 13ರಂದು ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಂತರ್ ಮಂತರ್ ಪ್ರದೇಶವನ್ನು ಅಧಿಕೃತ ಪ್ರತಿಭಟನಾ ಸ್ಥಳದ ಪಟ್ಟಿಯಿಂದ ತೆಗೆದುಹಾಕಿದ ಕೆಲವೇ ದಿನಗಳಲ್ಲಿ, ಬೀಗ ಹಾಕಿದ್ದ ಗೇಟ್ ಹತ್ತಿ ಒಳಪ್ರವೇಶಿಸಿದ್ದರು ಎಂಬ ಆರೋಪದ ಮೇಲೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಅಲ್ಲಿಗೆ ತೆರಳಿದ್ದ ಸಿಜೆಪಿಯ ಇತರ ಕಾರ್ಯಕರ್ತರೊಂದಿಗೆ ಇಬ್ಬರೂ ರಾಷ್ಟ್ರಧ್ವಜ ಪ್ರದರ್ಶಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಸೋಮವಾರ ಇಬ್ಬರನ್ನು ದೆಹಲಿಯ ಮಂದಿರ್ ಮಾರ್ಗ ಪೊಲೀಸ್ ಠಾಣೆಯಲ್ಲಿರುವ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಬಳಿಕ ಅವರ ನ್ಯಾಯಾಂಗ ಬಂಧನವನ್ನು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸುವಂತೆ ಪೊಲೀಸರು ಮನವಿ ಮಾಡಿದ್ದರು.
ದೇಶದಾದ್ಯಂತ ದೌರ್ಜನ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಈ ಸಮಸ್ಯೆ ಯಾವುದೇ ಒಂದು ನಗರಕ್ಕೆ ಮಾತ್ರ ಸೀಮಿತವಾಗಿಲ್ಲ, ಕೋಲ್ಕತ್ತಾದಿಂದ ದೆಹಲಿ ಮತ್ತು ಮುಂಬೈವರೆಗೆ ಇಂತಹ ಘಟನೆಗಳು ನಡೆಯುತ್ತಿವೆ. ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಇದು ಸರ್ಕಾರದ ಪ್ರಾಯೋಜಿತ ಭಯೋತ್ಪಾದನೆ. ಇವು ಪೊಲೀಸರ ಪ್ರಾಯೋಜಿತ ದೌರ್ಜನ್ಯಗಳು. ಇಂತಹ ಕ್ರಮಗಳು ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೂ ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡಿದವರು ದೌರ್ಜನ್ಯಗಳನ್ನು ಎದುರಿಸಿದ್ದರು. ಭಾರತ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ದೃಢಸಂಕಲ್ಪದಿಂದ ಜನರು ಹೋರಾಟ ಮುಂದುವರಿಸಿದಾಗ ಮಾತ್ರ ಸರ್ಕಾರದಲ್ಲಿರುವ ಅಹಂಕಾರಿ ರಾಜಕಾರಣಿಗಳಿಗೆ ವಾಸ್ತವದ ಅರಿವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಆಶುತೋಷ್ ಮತ್ತು ಸೌರವ್ ಅವರನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: CJP ನಾಯಕರ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರ ಮನವಿ; ಮ್ಯಾಜಿಸ್ಟ್ರೇಟ್ ಮುಂದೆ ಹಾಜರು
ತಮ್ಮ ಇಬ್ಬರು ಸಹ ಸಂಚಾಲಕರನ್ನು ಬಿಡುಗಡೆ ಮಾಡದಂತೆ ತಡೆಯಲು ಜಾಮೀನು ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆ ಎಂದು ಸಿಜೆಪಿ ಆರೋಪಿಸಿದೆ. ಜಾಮೀನಿಗೆ ಸಲ್ಲಿಸಿದ್ದ ಭದ್ರತಾ ಖಾತರಿಗಳನ್ನು ಅಸ್ಪಷ್ಟ ಕಾರಣಗಳನ್ನು ನೀಡಿ ತಿರಸ್ಕರಿಸಲಾಗಿದೆ ಎಂಬ ಆಕ್ಷೇಪವನ್ನೂ ಪಕ್ಷ ವ್ಯಕ್ತಪಡಿಸಿದೆ.
ಭಾನುವಾರ, ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಸಂಜ್ಞೇಯ ವರದಿ ದಾಖಲಿಸಿಕೊಂಡಿದ್ದಾರೆ. ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ಬುಧವಾರ ಮತ್ತೊಮ್ಮೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.






