ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ್ದಕ್ಕಾಗಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಹಾಜರಾಗದ ಪತಂಜಲಿ ಸಂಸ್ಥಾಪಕ, ಸ್ವಯಂ ಘೋಷಿತ ಯೋಗ ಗುರು ಬಾಬಾ ರಾಮ್‌ದೇವ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಬಾಬಾ ರಾಮ್‌ದೇವ್ ಮತ್ತು ಅವರ ಸಹಚರ ಆಚಾರ್ಯ ಬಾಲಕೃಷ್ಣ ವಿರುದ್ಧ ಕೇರಳದ ಪಾಲಕ್ಕಾಡ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಭಾನುವಾರ ಬಂಧನ ವಾರೆಂಟ್ ಜಾರಿ ಮಾಡಿದೆ.
ಪತಂಜಲಿ ಆಯುರ್ವೇದ ಉತ್ಪನ್ನಗಳ ಭಾಗವಾಗಿರುವ ದಿವ್ಯಾ ಫಾರ್ಮಸಿ ವಿರುದ್ಧ ಔಷಧ ಇನ್‌ಸ್ಪೆಕ್ಟರ್ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ದಿವ್ಯಾ ಫಾರ್ಮಿಸಿಯ ಉತ್ಪನ್ನಗಳ ಪ್ರಚಾರಕ್ಕಾಗಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ್ದಾರೆ ಎಂದು ರಾಮ್‌ದೇವ್ ಮತ್ತು ಬಾಲಕೃಷ್ಣರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದರು.
ಈ ಹಿಂದೆ, ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ವಿಚಾರಣೆಗಾಗಿ ಫೆಬ್ರವರಿ 1ರಂದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಇಬ್ಬರು ಆರೋಪಿಗಳಿಗೂ ಸೂಚಿಸಿತ್ತು. ಆದರೆ, ರಾಮ್‌ದೇವ್ ಮತ್ತು ಬಾಲಕೃಷ್ಣ ವಿಚಾರಣೆ ಹಾಜರಾಗಿಲ್ಲ. ಹೀಗಾಗಿ, ಇಬ್ಬರ ವಿರುದ್ಧವೂ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.