ಡಾ ಬಿ ಆರ್ ಅಂಬೇಡ್ಕರ್ ಅವರು ದೇಶವನ್ನು ಒಗ್ಗಟ್ಟಿನಿಂದ ಇರಿಸುವ ನಿಟ್ಟಿನಲ್ಲಿ ಏಕ ಸಂವಿಧಾನ ಕಲ್ಪನೆ ಹೊಂದಿದ್ದರು. ಒಂದು ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನದ ಕಲ್ಪನೆಯನ್ನು ಎಂದಿಗೂ ಬೆಂಬಲಿಸಲಿಲ್ಲ. 370ನೇ ವಿಧಿಯು ಅಂಬೇಡ್ಕರ್ ಏಕ ಸಂವಿಧಾನ ಕಲ್ಪನೆಗೆ ವಿರುದ್ಧವಾಗಿತ್ತು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಶನಿವಾರ ಹೇಳಿದ್ದಾರೆ.
ನಾಗ್ಪುರದಲ್ಲಿ ಸಂವಿಧಾನದ ಪೀಠಿಕೆ ಉದ್ಯಾನವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಜೆಐ, “ಸುಪ್ರೀಂ ಕೋರ್ಟ್ ಡಾ ಅಂಬೇಡ್ಕರ್ ಅವರ ಅಖಂಡ ಭಾರತದ ದೃಷ್ಟಿಕೋನದಿಂದ ಸ್ಫೂರ್ತಿ ಪಡೆದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ದೇಶದ ಮೊದಲ ‘ಬೌದ್ಧ ಅಂಬೇಡ್ಕರ್‌ವಾದಿ ಸಿಜೆಐ; ಜಸ್ಟೀಸ್ ಗವಾಯಿಗೆ ರಾಜ್‌ದೀಪ್ ಸರ್ದೇಸಾಯಿ ಅಭಿನಂದನೆ
ಗವಾಯಿ ಅವರು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಸರ್ವಾನುಮತದಿಂದ ಎತ್ತಿಹಿಡಿದ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಭಾಗವಾಗಿದ್ದರು.
ಮರಾಠಿಯಲ್ಲಿ ಮಾತನಾಡಿದ ಗವಾಯಿ ಅವರು, “370ನೇ ವಿಧಿಯ ಬಗ್ಗೆ ವಿಚಾರಣೆ ನಡೆಸಿದಾಗ ‘ನಾವು ದೇಶವನ್ನು ಒಗ್ಗಟ್ಟಿನಿಂದ ಇರಿಸಲು ಬಯಸಿದರೆ, ನಮಗೆ ಒಂದೇ ಸಂವಿಧಾನ ಬೇಕು’ ಎಂಬ ಅಂಬೇಡ್ಕರ್ ಅವರ ಮಾತು ನನಗೆ ನೆನಪಿಗೆ ಬಂದಿತ್ತು” ಎಂದೂ ಹೇಳಿಕೊಂಡಿದ್ದಾರೆ.
2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿತು. ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲು ನಿರ್ಧರಿಸಿತು. ಈ ನಿರ್ಧಾರ ಘೋಷಣೆ ಮಾಡಿದ ಬೆನ್ನಲ್ಲೇ ಕೇಂದ್ರವು ಜಮ್ಮು ಕಾಶ್ಮೀರದ ಹಲವು ರಾಜಕೀಯ ನಾಯಕರುಗಳನ್ನು ಬಂಧನದಲ್ಲಿರಿಸಿತ್ತು. ಜೊತೆಗೆ ಇಂಟರ್‌ನೆಟ್ ನಿಷೇಧಿಸಿತ್ತು. ಹಾಗೆಯೇ ಬಿಜೆಪಿ 370ನೇ ವಿಧಿ ರದ್ಧತಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಚುನಾವಣೆಯಲ್ಲಿ ಪ್ರಚಾರಕ್ಕೆ ಇಳಿಯಿತು.
