ತಮ್ಮನ್ನು ಬಿಜೆಪಿಗೆ ಸೇರುವಂತೆ ಒತ್ತಾಯಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಎಎಪಿ ಶಾಸಕರನ್ನು ಖರೀದಿಸುತ್ತಿದ್ದಾರೆ ಎಂಬ ಆರೋಪಕ್ಕೆ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿಯೇ ದೆಹಲಿ ಸಿಎಂ ಈ ಹೇಳಿಕೆ ನೀಡಿದ್ದಾರೆ.
ದೆಹಲಿಯ ರೋಹಿಣಿಯಲ್ಲಿನ ಶಾಲೆಯೊಂದರ ಅಡಿಗಲ್ಲು ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್, “ಅವರು ನಮ್ಮ ವಿರುದ್ಧ ಯಾವುದೇ ಪಿತೂರಿ ನಡೆಸಬಹುದು;ನಾನು ದೃಢವಾಗಿ ನಿಂತಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ. ಅವರು ನನ್ನನ್ನು ಬಿಜೆಪಿ ಸೇರುವಂತೆ ಕೇಳುತ್ತಿದ್ದಾರೆ. ನಂತರ ಅವರು ನನ್ನನ್ನು ಒಂಟಿಯಾಗಿ ಮಾಡುತ್ತಾರೆ. ನಾನು ಯಾವುದೇ ಕಾರಣಕ್ಕೂ ಎಂದಿಗೂ ಬಿಜೆಪಿ ಸೇರುವುದಿಲ್ಲ ಎಂದು ಅವರಿಗೆ ಹೇಳಿದ್ದೇನೆ” ಎಂದು ಹೇಳಿದರು.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ದೆಹಲಿಯ ಶಾಲೆಗಳಿಗೆ ಹಾಗೂ ಆಸ್ಪತ್ರೆಗಳಿಗೆ ಕೇವಲ ಶೇ.4 ರಷ್ಟು ಹಣ ನೀಡಿದೆ. ತಮ್ಮ ಸರ್ಕಾರ ಪ್ರತಿ ವರ್ಷದ ಬಜೆಟ್‌ನಲ್ಲಿ ಶೇ.40 ರಷ್ಟು ಹಣ ವ್ಯಯಿಸುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?
“ಇಂದು ಎಲ್ಲ ತನಿಖಾ ಸಂಸ್ಥೆಗಳು ನಮ್ಮ ಹಿಂದೆ ಬಿದ್ದಿವೆ. ಉತ್ತಮ ಶಾಲೆಗಳನ್ನು ಕಟ್ಟಿಸಿದ್ದೆ ಮನೀಶ್ ಸಿಸೋಡಿಯಾ ಅವರ ತಪ್ಪಾಗಿದೆ. ಉತ್ತಮ ಆಸ್ಪತ್ರೆಗಳು ಹಾಗೂ ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸಿದ್ದೆ ಸತ್ಯೇಂದ್ರ ಜೈನ್ ತಪ್ಪಾಗಿದೆ. ಸಿಸೋಡಿಯಾ ಉತ್ತಮ ಗುಣಮಟ್ಟದ ಶಾಲೆಗಳನ್ನು ನಿರ್ಮಿಸದಿದ್ದರೆ ಅವರು ಬಂಧನವಾಗುತ್ತಿರಲಿಲ್ಲ. ಅವರು ಎಲ್ಲ ರೀತಿಯ ಪಿತೂರಿಗಳನ್ನು ನಡೆಸುತ್ತಿದ್ದಾರೆ. ಆದರೆ ಯಾವ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ” ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಜ್ರಿವಾಲ್ ಅವರ ಶಾಸಕರ ಕುದುರೆ ವ್ಯಾಪಾರ ಹೇಳಿಕೆಯ ನಂತರ ಎಎಪಿ ಸಚಿವೆ ಅತೀಶಿ ಅವರ ಮನೆಗೆ ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನೊಟೀಸ್ ನೀಡಿದ್ದಾರೆ. ಪೊಲೀಸರು ಆಗಮಿಸಿದ ಸಂದರ್ಭದಲ್ಲಿ ಅತೀಶಿ ಮನೆಯಲ್ಲಿರಲಿಲ್ಲ. ಸುತ್ತೋಲೆಯನ್ನು ಸಚಿವರ ಅಧಿಕಾರಿಗೆ ನೀಡಲಾಗಿದೆ. ಫೆ.5ರೊಳಗೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ನೊಟೀಸ್‌ನಲ್ಲಿ ತಿಳಿಸಲಾಗಿದೆ.
ದೆಹಲಿಯ ಅಪರಾಧ ದಳದ ಅಧಿಕಾರಿಗಳು ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೂ ನೊಟೀಸ್ ನೀಡಿ ಮೂರು ದಿನಗಳೊಳಗೆ ಶಾಸಕರ ಕುದುರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.