ಕಾಂಗ್ರೆಸ್‌ನೊಂದಿಗಿನ ವಿವಾಹ ಶಾಶ್ವತವಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದು,ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದಕ್ಕೆ ಎರಡು ಪಕ್ಷಗಳು ಒಟ್ಟಾಗಿವೆ ಎಂದು ತಿಳಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿರುವ ಅವರು, ಜೂನ್ 4ರಂದು ದೊಡ್ಡ ಆಶ್ಚರ್ಯಕ್ಕಾಗಿ ಕಾದಿದ್ದು ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟ ಇಂಡಿಯಾ ಗೆಲುವು ಗಳಿಸಲಿದೆ ಎಂದು ಹೇಳಿದ್ದಾರೆ.
“ಎಎಪಿಯು ಕಾಂಗ್ರೆಸ್‌ನೊಂದಿಗಿನ ವಿವಾಹ ಶಾಶ್ವತವಲ್ಲ. ಈಗ ನಮ್ಮ ಉದ್ದೇಶ ಬಿಜೆಪಿ ಸೋಲಿಸುವುದಾಗಿದೆ ಹಾಗೂ ಪ್ರಸ್ತುತ ಆಡಳಿತದಲ್ಲಿರುವ ಸರ್ವಾಧಿಕಾರ ಹಾಗೂ ಗೂಂಡಾಗಿರಿಯನ್ನು ಕೊನೆಗೊಳಿಸುವುದಾಗಿದೆ” ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಒಕ್ಕೂಟ ಮಾಡಿಕೊಂಡಿದ್ದರೆ, ಪಂಜಾಬ್‌ನಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಿಳಿದಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಕಳಿಸುವ ಮೋದಿ ಗ್ಯಾರಂಟಿಯು ‘ಜನತಂತ್ರದ ಜನನಿ’ಯ ಅಣಕ ಅಲ್ಲವೇ?
“ದೇಶವನ್ನು ಕಾಪಾಡುವುದು ಮುಖ್ಯವಾಗಿದೆ. ಎಎಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಬಿಜೆಪಿಯನ್ನು ಸೋಲಿಸಲು ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಪಂಜಾಬ್‌ನಲ್ಲಿ ಬಿಜೆಪಿಗೆ ಯಾವುದೇ ಅಸ್ತಿತ್ವವಿಲ್ಲ” ಎಂದು ಕೇಜ್ರಿವಾಲ್ ಹೇಳಿದರು.
ಇದೇ ಸಂದರ್ಭದಲ್ಲಿ ದೆಹಲಿ ಅಬಕಾರಿ ಹಗರಣದ ಬಗ್ಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ನಾನು ಜೈಲಿಗೆ ಹೋಗುವುದು ಸಮಸ್ಯೆಯಲ್ಲ. ಈ ದೇಶದ ಭವಿಷ್ಯ ಅಪಾಯದಲ್ಲಿದೆ. ಅವರು ಎಷ್ಟು ದಿನ ನನ್ನನ್ನು ಜೈಲಿಗೆ ಹಾಕಲಿ ನಾನು ಹೆದರುವುದಿಲ್ಲ. ಬಿಜೆಪಿಯವರು ನನ್ನನ್ನು ಕೆಳಗಿಳಿಸಲು ಬಯಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಜ್ರಿವಾಲ್ ಹೇಳಿದರು.
ಒಂದು ವೇಳೆ ಬಿಜೆಪಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಎಲ್ಲ ವಿಪಕ್ಷ ನಾಯಕರು ಜೈಲಿನಲ್ಲಿರುತ್ತಾರೆ. ರಷ್ಯಾದಲ್ಲಿ ವ್ಲಾಡಿಮಿರ್ ಪುಟಿನ್ ಆಡಳಿದ ಪರಿಸ್ಥಿತಿ ಇಲ್ಲಿಯೂ ಉಂಟಾಗುತ್ತದೆ ಎಂದು ಕೇಜ್ರಿವಾಲ್ ಎಚ್ಚರಿಸಿದರು.
ದೆಹಲಿ ಅಬಕಾರಿ ಹಗರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿರುವ ಅರವಿಂದ್ ಕೇಜ್ರಿವಾಲ್ ಜೂನ್ 2ರೊಳಗೆ ನ್ಯಾಯಾಲಯಕ್ಕೆ ಶರಣಾಗಬೇಕಿದೆ.
