ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 21 ರಂದು ಅವರನ್ನು ಬಂಧಿಸಿದಾಗಿನಿಂದ ಈವರೆಗೆ ದೆಹಲಿ ಸಿಎಂ 4.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮೂಲಕಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಆದರೆ ಈ ನಡುವೆ ತಿಹಾರ್ ಜೈಲಿನಲ್ಲಿರುವ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರು ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ಕೇಜ್ರಿವಾಲ್ ಅವರನ್ನು ಇಲ್ಲಿನ ನ್ಯಾಯಾಲಯವು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನ ಜೈಲು ಸಂಖ್ಯೆ 2 ರಲ್ಲಿ 14X8 ಅಡಿ ಸೆಲ್‌ನಲ್ಲಿ ಇರಿಸಲಾಗಿದೆ. ಮಧುಮೇಹ ಹೊಂದಿರುವ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಳೆದ ಕೆಲವು ದಿನಗಳಿಂದ ಏರುಪೇರಾಗುತ್ತಿದೆ. ಒಂದು ಬಾರಿ 50 ಕ್ಕಿಂತ ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಇಡಿ ಕಸ್ಟಡಿಯಲ್ಲಿ ಸಿಎಂ ಕೇಜ್ರಿವಾಲ್ ಆರೋಗ್ಯ ಹದಗೆಟ್ಟಿದೆ: ಎಎಪಿ
ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಔಷಧಿಗಳನ್ನು ನೀಡಲಾಗಿದೆ. ಇನ್ನು ಸಕ್ಕರೆ ಮಟ್ಟ ಪರಿಶೀಲನೆಗಾಗಿ ಶುಗರ್ ಸೆನ್ಸರ್ ಅನ್ನು ಕೂಡಾ ನೀಡಲಾಗಿದೆ. ಸಕ್ಕರೆ ಮಟ್ಟ ಕುಸಿಯುತ್ತಿದ್ದಂತೆ ದೇಹದಲ್ಲಿರುವ ಸಕ್ಕರೆ ಪ್ರಮಾಣ ಸಮತೋಲನ ಮಾಡಿಕೊಳ್ಳಲೆಂದು ಸಿಹಿ ತಿಂಡಿ (ಟೋಫಿ) ನೀಡಲಾಗಿದೆ.
ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಮನೆಯಿಂದ ಮಾಡಿ ಕಳುಹಿಸಲಾಗುತ್ತಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಅವರ ಸೆಲ್ ಬಳಿ ತ್ವರಿತ ಪ್ರತಿಕ್ರಿಯೆ ತಂಡವನ್ನು ನಿಯೋಜಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಕೇಜ್ರಿವಾಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಪತ್ನಿ ಸುನೀತಾ ಅವರೊಂದಿಗೆ ಮಾತನಾಡಿದ್ದು ಅವರ ವಕೀಲರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ.
ಕೇಜ್ರಿವಾಲ್ ಬಿಡುಗಡೆಯು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಅಡ್ಡಿಯಾಗಬಹುದು ಎಂದು ಜಾರಿ ನಿರ್ದೇಶನಾಲಯವು ಕಳವಳ ವ್ಯಕ್ತಪಡಿಸಿದ್ದು ಅದಾದ ಬಳಿಕ ದೆಹಲಿ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೇಜ್ರಿವಾಲ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕೇಂದ್ರೀಯ ಸಂಸ್ಥೆ ಹೇಳಿದೆ. ಮಧ್ಯಂತರ ಪರಿಹಾರಕ್ಕಾಗಿ ದೆಹಲಿ ಮುಖ್ಯಮಂತ್ರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.