ಅಬಕಾರಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಎಂಬುವವರನ್ನು ವಿಚಕ್ಷಣ ಇಲಾಖಾ ನಿರ್ದೇಶನಾಲಯವು ತಮ್ಮ ಸೇವೆಯಿಂದ ವಜಾಗೊಳಿಸಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ವಿಮುಕ್ತಿಗಿಳಿಸಲಾಗಿದೆ.
ಬಿಭವ್ ಕುಮಾರ್ ಅವರನ್ನು ಸಂಪೂರ್ಣವಾಗಿ ವಿಚಾರಣೆಗೊಳಪಡಿಸಿದ ನಂತರ ಕಾನೂನು ಅಡಚಣೆ ಹಾಗೂ ಅವರ ನೇಮಕಾತಿಗಾಗಿ ಅನುಸರಿಸಿರುವ ವಿಧಾನ ಉಲ್ಲಂಘನೆಯಾಗಿರುವುದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಇವರನ್ನು ತಮ್ಮ ಸೇವೆಗಳಿಂದ ವಜಾಗೊಳಿಸಲಾಗಿದೆ. ಆದೇಶವು ತಕ್ಷಣ ಜಾರಿಗೆ ಬರಲಿದೆ ಎಂದು ವಿಚಕ್ಷಣ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಪ್ರಣಾಳಿಕೆ- ಸುಳ್ಳು ಸುಳ್ಳೇ ಮುಸ್ಲಿಮ್ ಲೀಗ್ ಮೊಹರು ಹಾಕಿದ ಮೋದಿ
2007ರಲ್ಲಿ ಮಹೇಶ್ ಪಾಲ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಬಿಭವ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ವಿಚಕ್ಷಣ ಇಲಾಖೆ ವಜಾಗೊಳಿಸುವ ಆದೇಶದಲ್ಲಿ ಉಲ್ಲೇಖಿಸಿದೆ. ನೋಯ್ಡಾದ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ತಮ್ಮ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದಲ್ಲದೆ ಬೆದರಿಕೆ ಹಾಕಿದ ಕಾರಣಕ್ಕೆ ಬಿಭವ್ ಕುಮಾರ್ ಹಾಗೂ ಇತರ ಮೂವರ ವಿರುದ್ಧ ಮಹೇಶ್ ಪಾಲ್ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಸ್ಥಳೀಯ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಅವರಿಗೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣವು ಇನ್ನೂ ವಿಚಾರಣೆ ಹಂತದಲ್ಲಿದೆ.
ಬಿಭವ್ ಕುಮಾರ್ ಅವರನ್ನು ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅವರ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸಲಾಗಿರಲಿಲ್ಲ ಎಂದು ವಿಚಕ್ಷಣ ಇಲಾಖೆ ತಿಳಿಸಿದೆ.
ಕೇಸರಿ ಪಕ್ಷದ ಏಕೈಕ ಗುರಿ ಎಎಪಿ ಪಕ್ಷವನ್ನು ಅಸ್ಥಿರಗೊಳಿಸುವುದಾಗಿದೆ ಎಂದು ಎಎಪಿ ನಾಯಕಿ ಜಾಸ್ಮೀನ್ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
