ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ತಿಹಾರಿ ಜೈಲಿನಿಂದಲೇ ಸಂದೇಶ ಕಳಿಸಿದ್ದಾರೆ.
‘ನನ್ನ ಹೆಸರು ಅರವಿಂದ್ ಕೇಜ್ರಿವಾಲ್, ನಾನು ಭಯೋತ್ಪಾದಕನಲ್ಲ’ ಎಂಬ ಸಂದೇಶ ಕಳಿಸಿದ್ದು, ಸಂದೇಶದ ಬಗ್ಗೆ ಎಎಪಿಯ ಸಂಸದ ಸಂಜಯ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಮಾ.21 ರಿಂದ ಜಾರಿ ನಿರ್ದೇಶನಾಲಯದಿಂದ ಬಂಧಿತರಾದ ದಿನದಿಂದಲೂ 24 ಗಂಟೆಗಳ ಕಾಲವು ಅರವಿಂದ್ ಕೇಜ್ರಿವಾಲ್ ಅವರ ಮನೋಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅವರನ್ನು ಭಯೋತ್ಪಾದಕರಂತೆ ಕಾಣುತ್ತಿದ್ದು. ಹತ್ತಿರದವರನ್ನು ಭೇಟಿಯಾಗಲು ಬಿಡುತ್ತಿಲ್ಲ. ಇದು ಸ್ಪಷ್ಟವಾಗಿ ಪಿತೂರಿಯ ರಾಜಕಾರಣವಾಗಿದೆ. ಕೇಜ್ರಿವಾಲ್ ಅವರು ಹೊರಗೆ ಬಂದ ನಂತರ ಮತ್ತಷ್ಟು ಪ್ರಬಲರಾಗುತ್ತಾರೆ” ಎಂದು ಸಂಜಯ್ ಸಿಂಗ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?
“ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಜನರು ಹಾಗೂ ದೇಶಕ್ಕಾಗಿ ಪುತ್ರ ಹಾಗೂ ಸೋದರನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ‘ನನ್ನ ಹೆಸರು ಅರವಿಂದ್ ಕೇಜ್ರಿವಾಲ್, ನಾನು ಭಯೋತ್ಪಾದಕನಲ್ಲ’ ಎಂಬ ಸಂದೇಶವನ್ನು ಜೈಲಿನಿಂದ ಕಳಿಸಿದ್ದಾರೆ” ಎಂದು ಸಂಜಯ್ ಸಿಂಗ್ ತಿಳಿಸಿದರು.
ಇದೇ ಅಬಕಾರಿ ನೀತಿಯ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ಸಂಜಯ್ ಸಿಂಗ್ 6 ತಿಂಗಳ ಸೆರೆವಾಸ ಅನುಭವಿಸಿ ಏಪ್ರಿಲ್ 4ರಂದು ತಿಹಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಭೇಟಿ ಮಾಡಲು ಗಾಜಿನ ತಡೆಗೋಡೆ ಮೂಲಕ ಅನುಮತಿಸಲಾಗಿದೆ. ಪ್ರಧಾನಿ ಅವರು ಕೇಜ್ರಿವಾಲ್ ಬಗ್ಗೆ ದ್ವೇಷದ ಭಾವನೆ ಹೊಂದಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಂಜಯ್ ಸಿಂಗ್ ಹೇಳಿದರು.
“ನೀವು ಹೆಚ್ಚು ಬೀಳಿಸಲು ಪ್ರಯತ್ನಿಸುತ್ತಿದ್ದರೂ ಅವರು ಮತ್ತಷ್ಟು ಪ್ರಬಲರಾಗಿ ಹೊರಬರುತ್ತಾರೆ. ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ನಿನ್ನೆ ಭಾವನಾತ್ಮಕವಾಗಿ ಮಾತನಾಡಿದ್ದರು. ಈ ವಿಷಯ ನಮಗೆಲ್ಲ ಭಾವನಾತ್ಮಕ ವಿಷಯವಾಗಿವೆ, ಆದರೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರಿಗೆ ನಾಚಿಕೆ ತರುವ ವಿಷಯವಾಗಿದೆ” ಎಂದು ಸಂಜಯ್ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
