ಮಾಜಿ ಐಎಎಸ್ ಅಧಿಕಾರಿ ಆಶೀಶ್ ಜೋಶಿ ಅವರನ್ನು ದೆಹಲಿ ಪೊಲೀಸರು ಬಂಧಿಸಿ ನಡೆಸಿದ ವಿಚಾರಣೆಯು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ವಿರುದ್ಧ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶೀಶ್ ಜೋಶಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಪೊಲೀಸರ ಸಂಪೂರ್ಣ ವಿಚಾರಣೆಯು ಸಿಇಸಿ ಅವರ ವಿರುದ್ಧದ ಟ್ವೀಟ್‌ಗೆ ಸಂಬಂಧಿಸಿರಲಿಲ್ಲ. ಬದಲಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಅವರು ಮಾಡಿದ್ದ ಹಳೆಯ ಟ್ವೀಟ್ ಸುತ್ತಲೇ ನಡೆದಿತ್ತು ಎಂಬ ಗಂಭೀರ ವಿಚಾರ ಬೆಳಕಿಗೆ ಬಂದಿದೆ.
ಆಶೀಶ್ ಜೋಶಿ ಅವರು ಆಗಸ್ಟ್ 26ರಂದು ಮಾಡಿದ್ದ ಟ್ವೀಟ್ ಒಂದರಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ‘ನ್ಯೂರೆಂಬರ್ಗ್ ಮಾದರಿ’ಯ ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದ್ದರು. ಈ ಟ್ವೀಟ್ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಾಯ್ದೆ 192ರ ಅಡಿಯಲ್ಲಿ (ಗಲಭೆಗೆ ಪ್ರಚೋದನೆ ನೀಡುವ ಉದ್ದೇಶ) ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದ ಪೊಲೀಸರು, ಬುಧವಾರ ಬೆಳಿಗ್ಗೆ ನೆಹರೂ ಪಾರ್ಕ್‌ನಲ್ಲಿ ಜೋಶಿ ಅವರನ್ನು ವಶಕ್ಕೆ ಪಡೆದಿದ್ದರು. ಆದರೆ, ವಿಚಾರಣೆ ಬಳಿಕ ‘ದಿ ವೈರ್’ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಜೋಶಿ, “ವಿಚಾರಣೆ ವೇಳೆ ಪೊಲೀಸರ ಆಸಕ್ತಿಯು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಪೋಸ್ಟ್‌ಗಿಂತ ಹೆಚ್ಚಾಗಿ, ಗೃಹ ಸಚಿವ ಅಮಿತ್ ಶಾ ಕುರಿತು ತಾವು ಮಾಡಿದ್ದ ಟ್ವೀಟ್‌ನ ಮೇಲೆಯೇ ಕೇಂದ್ರೀಕೃತವಾಗಿತ್ತು” ಎಂದು ಹೇಳಿದ್ದಾರೆ.
ಆಗಸ್ಟ್ 13 ರಂದು ಆಶೀಶ್ ಜೋಶಿ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಮತ್ತು ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ನಡುವೆ ತೀವ್ರ ವಾಕ್ಸಮರ ನಡೆದಿತ್ತು ಎಂದು ಟ್ವೀಟ್ ಮಾಡಿದ್ದರು. ಮೋದಿ ಸರ್ಕಾರದ ಆದೇಶದ ಮೇರೆಗೆ ಈ ಟ್ವೀಟ್ ಅನ್ನು ‘ಎಕ್ಸ್’ ಸಂಸ್ಥೆಯು ಈಗಾಗಲೇ ನಿರ್ಬಂಧಿಸಿದೆ. ಪೊಲೀಸರು ತಮ್ಮ ವಿಚಾರಣೆ ವೇಳೆ, “ಅಮಿತ್ ಶಾ – ಗೋವಿಂಧ ಮೋಹನ್‌ಗೆ ಸಂಬಂಧಿಸಿದ ಮಾಹಿತಿ ನಿಮಗೆ ಎಲ್ಲಿಂದ ಸಿಕ್ಕಿತು. ಅದರ ಮೂಲ (Source) ಯಾರು ಎಂದು ಪದೇ ಪದೇ ಪ್ರಶ್ನಿಸಿದರು. ಆದರೆ, ವೃತ್ತಿಪರ ನೈತಿಕತೆಯ ಆಧಾರದ ಮೇಲೆ ಮಾಹಿತಿಯ ಮೂಲವನ್ನು ಬಹಿರಂಗಪಡಿಸಲು ನಾನು ನಿರಾಕರಿಸಿದೆ” ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬ್ರಾಹ್ಮಣ್ಯದ ಪರಮಾಧಿಕಾರ ಸ್ಥಾಪಿಸಿದ್ದ ಮನುಸ್ಮೃತಿ
ಪೊಲೀಸ್ ಠಾಣೆಯಲ್ಲಿ ತಮ್ಮನ್ನು ವಿಚಾರಣೆಗೆ ಗುರಿಪಡಿಸಿದಾಗ ಎಫ್‌ಐಆರ್ ಪ್ರತಿಯನ್ನು ಕೊಡಲು ಪೊಲೀಸರು ನಿರಾಕರಿಸಿದರು. ಯಾರ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದಾಗ, ಪೊಲೀಸರೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದರು. ವಿಚಾರಣೆ ಅವಧಿಯಲ್ಲಿ ತಮ್ಮ ಮೊಬೈಲ್ ಫೋನ್ ಅನ್ನು ಪಡೆದುಕೊಂಡು ‘ಫ್ಲೈಟ್ ಮೋಡ್’ಗೆ ಹಾಕಿದ್ದ ಪೊಲೀಸರು, ಪತ್ನಿಗೆ ತಾವು ಕಸ್ಟಡಿಯಲ್ಲಿದ್ದಾರೆ ಎಂಬ ವಿಷಯವನ್ನೂ ತಿಳಿಸಲು ಬಿಡಲಿಲ್ಲ ಎಂದು ಜೋಶಿ ಆರೋಪಿಸಿದ್ದಾರೆ.
ವಿಚಾರಣೆ ವೇಳೆ ಪೊಲೀಸರು ನೈತಿಕವಾಗಿ ನಡೆದುಕೊಂಡಿದ್ದರೂ, ಆಗಸ್ಟ್ 13ರ ಟ್ವೀಟ್‌ಗೆ ಎರಡು ದಿನಗಳ ಮೊದಲು ತಾವು ಸಂಪರ್ಕದಲ್ಲಿದ್ದ ನಿವೃತ್ತ ಐಎಎಸ್ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳ ವಿವರ ಹಾಗೂ ಅವರೊಂದಿಗಿನ ಸಂಭಾಷಣೆಯ ಕುರಿತೇ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದರು ಎಂದು ಜೋಶಿ ವಿವರಿಸಿದ್ದಾರೆ. ವಿಚಾರಣೆ ಮುಗಿದ ಬಳಿಕ ಪೊಲೀಸರೇ ಅವರನ್ನು ಮನೆಗೆ ತಲುಪಿಸುವ ಸೌಜನ್ಯ ತೋರಿದ್ದಾರೆ. ಈ ಘಟನೆಯು ನಿವೃತ್ತ ಅಧಿಕಾರಿಗಳು ಮತ್ತು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಗಂಭೀರ ದಾಳಿ ಎಂದು ಆತಂಕ ವ್ಯಕ್ತವಾಗುತ್ತಿದೆ.




