ಆಪರೇಷನ್ ಸಿಂಧೂರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ನಾಯಕರೊಬ್ಬರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅಜೀತ್ ಸಿಂಗ್, “ಅಲಿ ಖಾನ್ ಮಹ್ಮದಾಬಾದ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿದಂತೆ ಅವರ ಕೆಲವು ಹೇಳಿಕೆಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ. ಅಶೋಕ ವಿಶ್ವವಿದ್ಯಾಲಯವೂ ಬಂಧನವನ್ನು ದೃಢೀಕರಿಸಿದೆ. ಹಾಗೆಯೇ ತನಿಖೆಗೆ ಸಹಕರಿಸುವುದಾಗಿ ಹೇಳಿದೆ.
ಇದನ್ನು ಓದಿದ್ದೀರಾ? ‘ಆಪರೇಷನ್ ಸಿಂಧೂರ’ ಯಶಸ್ಸಿಗೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಕಾಂಗ್ರೆಸ್ ಸರ್ಕಾರ ಸೂಚನೆ
ಸಹಾಯಕ ಪ್ರಾಧ್ಯಾಪಕರ ಪೋಸ್ಟ್ ವಿರುದ್ಧ ಹರಿಯಾಣ ರಾಜ್ಯ ಮಹಿಳಾ ಆಯೋಗವು ನೋಟಿಸ್ ಕಳುಹಿಸಿದ ಕೆಲವೇ ದಿನಗಳ ನಂತರ ಬಂಧನ ಮಾಡಲಾಗಿದೆ. ಆದರೆ ಸದ್ಯ ಅಲಿ ಖಾನ್ ಪೋಸ್ಟ್ ವೈರಲ್ ಆಗುತ್ತಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕರು ನಿಮ್ಮ ಈ ಬರಹಕ್ಕೆ ದೂರು ದಾಖಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನು “ದೇಶದ ಹೆಣ್ಣುಮಕ್ಕಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನು ನಾವು ವಂದಿಸುತ್ತೇವೆ. ಆದರೆ ರಾಜಕೀಯ ವಿಜ್ಞಾನವನ್ನು ಕಲಿಸುವ ಪ್ರಾಧ್ಯಾಪಕರು ಅವರನ್ನು ಉದ್ದೇಶಿಸಿ ಬಳಸಿರುವ ಪದಗಳ ಹಿನ್ನೆಲೆ ಅವರು ಆಯೋಗದ ಮುಂದೆ ಹಾಜರಾಗಿ ವಿಷಾದ ವ್ಯಕ್ತಪಡಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ” ಎಂದು ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಹೇಳಿದ್ದರು.
ಆದರೆ ಆಯೋಗದ ನೋಟಿಸ್‌ಗೆ ಅಲಿ ಪ್ರತಿಕ್ರಿಯಿಸಿದ್ದಾರೆ. “ಆಯೋಗವು ತನ್ನ ಹೇಳಿಕೆಯನ್ನು ತಪ್ಪಾಗಿ ಓದಿದೆ. ಮಹಿಳಾ ಆಯೋಗವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ನನ್ನ ಪೋಸ್ಟ್‌ಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಇದು ನನಗೆ ಆಶ್ಚರ್ಯವಾಗಿದೆ. ಅರ್ಥವನ್ನೇ ತಲೆಕೆಳಗಾಗಿ ಮಾಡಿದ್ದಾರೆ” ಎಂದಿದ್ದಾರೆ.
ಏನಿದು ಪ್ರಕರಣ, ಪೋಸ್ಟ್‌ನಲ್ಲಿ ಏನಿದೆ?
ಪಹಲ್ಗಾಮ್ ದಾಳಿಗೆ ವಿರುದ್ಧವಾಗಿ ಭಾರತ ಆಪರೇಷನ್ ಸಿಂಧೂರ ನಡೆಸಿ ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯ ಒಂದು ದಿನದ ನಂತರ ಮೇ 8ರಂದು ಮಹ್ಮದಾಬಾದ್ ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಸುತ್ತ ವಿವಾದ ಉಂಟಾಗಿದೆ.
ಮಿಲಿಟರಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಮುಸ್ಲಿಂ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಹಿಂದುತ್ವವಾದಿಗಳು ಹೊಗಳಿದ್ದನ್ನು ಮಹ್ಮದಾಬಾದ್ ತಮ್ಮ ಪೋಸ್ಟ್‌ನಲ್ಲಿ ವ್ಯಂಗ್ಯವಾಗಿ ಉಲ್ಲೇಖಿಸಿದ್ದರು. ಹಾಗೆಯೇ ದೇಶದಲ್ಲಿ ಮುಸ್ಲಿಮರ ವಿರುದ್ಧ ನಡೆಯುವ ಬುಲ್ಡೋಜರ್ ದಾಳಿಗಳ ಬಗ್ಗೆಯೂ ಉಲ್ಲೇಖಿಸಿದ್ದರು.

ಆದರೆ ಹರಿಯಾಣ ರಾಜ್ಯ ಮಹಿಳಾ ಆಯೋಗವು ಅವರ ಹೇಳಿಕೆ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಘನತೆಯನ್ನು ಹಾಳುಮಾಡಿದ್ದಾರೆ, ಕೋಮು ದ್ವೇಷವನ್ನು ಹುಟ್ಟಿಸುತ್ತಿದ್ದಾರೆ ಎಂದು ಆರೋಪಿಸಿದೆ. ಹಾಗೆಯೇ ಬಂಧನಕ್ಕೂ ಕೆಲವು ದಿನಗಳ ಹಿಂದೆ ಸಮನ್ಸ್ ಜಾರಿ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ ಅಲಿ ಖಾನ್ ತಮ್ಮ ಹೇಳಿಕೆಗಳನ್ನು “ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ. ಸಮನ್ಸ್ ಅನ್ನು “ಹೊಸ ರೀತಿಯ ಸೆನ್ಸಾರ್‌ಶಿಪ್ ಮತ್ತು ಕಿರುಕುಳ”ದ ಭಾಗವೆಂದು ವಿವರಿಸಿದ್ದಾರೆ.

ಸದ್ಯ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಬಂಧನ ಮಾಡಲಾಗಿದ್ದು, ಅವರ ಪೋಸ್ಟ್ ಹರಿದಾಡುತ್ತಿದೆ. ಈ ಪೋಸ್ಟ್‌ಗಾಗಿ ನಿಮ್ಮ ಬಂಧನ ಮಾಡಲಾಯಿತೇ, ಮಹಿಳಾ ಆಯೋಗ ನಿಮಗೆ ಸಮನ್ಸ್ ನೀಡುವಂತಹ ವಿಚಾರ ಏನಿದೆ ಎಂದು ನೆಟ್ಟಿಗರು ಪ್ರಶ್ನಿಸಿದೆ.
