ಅಸ್ಸಾಂನಲ್ಲಿ ಕಳೆದ ಒಂದು ತಿಂಗಳಿನಿಂದ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಪ್ರವಾಹದಿಂದಾಗಿ ರಾಜ್ಯದಾದ್ಯಂತ 58 ಜನರು ಸಾವನ್ನಪ್ಪಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ವರದಿ ಮಾಡಿದೆ.
ಎಎಸ್‌ಡಿಎಂಎ ಪ್ರಕಾರ, ಶನಿವಾರ ಇನ್ನೂ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಧುಬ್ರಿ, ಕ್ಯಾಚಾರ್ ಮತ್ತು ದರ್ರಾಂಗ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ.
ಹಲವರು ಜೀವ ಬಲಿಪಡೆದಿರುವ ಪ್ರವಾಹವು ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ ಮಾಡಿದೆ. ರಸ್ತೆಗಳು ಹಾಳಾಗಿವೆ. ಬೆಳೆ ನಾಶವಾಗಿದ್ದು, ಜಾನುವಾರುಗಳೂ ಸಾವನ್ನಪ್ಪಿವೆ. ಸಾವಿರಾರು ಜನರು ನಿರಾಶ್ರಿತರಾಗಿದ್ದು, 23 ಲಕ್ಷಕ್ಕೂ ಹೆಚ್ಚು ಜನರನ್ನು ಪ್ರವಾಹವು ಬಾಧಿಸಿದೆ.
ಜುಲೈ 6 ರಂದು, ಚರೈಡಿಯೊ ಜಿಲ್ಲೆಯಲ್ಲಿ ಇಬ್ಬರು ಮತ್ತು ಗೋಲ್‌ಪಾರಾ, ಮೊರಿಗಾಂವ್, ಸೋನಿತ್‌ಪುರ ಹಾಗೂ ತಿನ್ಸುಕಿಯಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಪ್ರವಾಹದಲ್ಲಿ ಸಾವನ್ನಪ್ಪಿದ್ದಾರೆ ಎಂದು ಎಎಸ್‌ಡಿಎಂಎ ಹೇಳಿದೆ.
ರಾಜ್ಯದ 29 ಜಿಲ್ಲೆಗಳಲ್ಲಿ 23 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದರೆ, ಧುಬ್ರಿ ಜಿಲ್ಲೆವೊಂದರಲ್ಲೇ 7,97,918 ಜನರು ಬಾಧಿತರಾಗಿದ್ದಾರೆ ಎಂದು ಎಎಸ್‌ಡಿಎಂಎ ತಿಳಿಸಿದೆ.
ಬ್ರಹ್ಮಪುತ್ರ ನದಿ ಸೇರಿದಂತೆ ಹತ್ತು ನದಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬ್ರಹ್ಮಪುತ್ರ ನದಿಯ ನೀರಿನ ಮಟ್ಟವು ನೇಮತಿಘಾಟ್, ತೇಜ್ಪುರ್, ಧುಬ್ರಿ ಮತ್ತು ಗೋಲ್ಪಾರಾದಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚಿದೆ. ಪ್ರವಾಹದಿಂದಾಗಿ ರಾಜ್ಯದ 3,535 ಗ್ರಾಮಗಳು ಮುಳುಗಿದ್ದು, 68,768.5 ಹೆಕ್ಟೇರ್ ಬೆಳೆ ಪ್ರದೇಶಕ್ಕೆ ಹಾನಿಯಾಗಿದೆ.
27 ಜಿಲ್ಲೆಗಳಲ್ಲಿ 577 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ತೆರೆಯಲಾಗಿದ್ದು, 5,26,000ಕ್ಕೂ ಹೆಚ್ಚು ಜನರು ಆಶ್ರಯ ಪಡೆಯುತ್ತಿದ್ದಾರೆ.
ಮತ್ತೊಂದೆಡೆ, ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಹದಿಂದ ಆರು ಘೇಂಡಾಮೃಗಗಳು ಸೇರಿದಂತೆ 114 ಕಾಡು ಪ್ರಾಣಿಗಳು ಸಾವನ್ನಪ್ಪಿವೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಗುವಾಹಟಿಯ ಜ್ಯೋತಿನಗರ ಪ್ರದೇಶಕ್ಕೆ ಭೇಟಿ ನೀಡಿದ್ದು, ಪ್ರವಾಹದಿಂದಾಗಿ ಚರಂಡಿಗೆ ಬಿದ್ದು ನಾಪತ್ತೆಯಾದ ಅಭಿನಾಶ್ ಸರ್ಕಾರ್ ಅವರ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಅಭಿನಾಶ್‌ಗಾಗಿ ರಕ್ಷಣಾ ತಂಡಗಳು ಮೂರು ದಿನಗಳಿಂದ ಹುಡುಕಾಟ ನಡೆಸುತ್ತಿವೆ.