ಮಧ್ಯ ಪ್ರದೇಶದ ಎಲ್ಲ 230 ಕ್ಷೇತ್ರ ಹಾಗೂ ಛತ್ತೀಸ್ಗಢದ 70 ಸ್ಥಾನಗಳ ಕೊನೆಯ ಹಂತದ ವಿಧಾನಸಭೆ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದೆ. ಮಧ್ಯ ಪ್ರದೇಶದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶೇ.27.79 ಹಾಗೂ ಛತ್ತೀಸ್ಗಢದಲ್ಲಿ ಶೇ. 19.67 ಮತದಾನವಾಗಿದೆ.
ಛತ್ತೀಸ್ಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ಹಣಾಹಣಿಯಿದ್ದರೆ, ಮಧ್ಯ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
230 ವಿಧಾನಸಭೆ ಸ್ಥಾನಗಳಲ್ಲಿ ಮತದಾನ ಮಾಡಲು ಚುನಾವಣಾ ಆಯೋಗ 64,626 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ 17,032 ಸೂಕ್ಷ್ಮ ಮತಗಟ್ಟೆಗಳಿವೆ. ರಾಜ್ಯದ ಒಟ್ಟು 230 ವಿಧಾನಸಭಾ ಸ್ಥಾನಗಳಿಗೆ 2,533 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಛತ್ತೀಸ್ಗಢದ ಎರಡನೇ ಹಂತದ ಚುನಾವಣೆಯಲ್ಲಿ 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 7 ರಂದು ನಡೆದ ಮೊದಲ ಹಂತದಲ್ಲಿ ರಾಜ್ಯದ 20 ಸ್ಥಾನಗಳಿಗೆ ಮತದಾನವಾಗಿ ಶೇ. 78 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.
ಮಧ್ಯ ಪ್ರದೇಶದ ಖಜುರಾಹೊ ಪೊಲೀಸ್ ಠಾಣೆ ವ್ಯಾಪ್ತಿಯ ರಾಣೆಹ್ ವಾಟರ್ಫಾಲ್ಸ್ ರಸ್ತೆಯಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಸಲ್ಮಾನ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಎರಡು ರಾಜ್ಯಗಳ ಮರದಾರರಿಗೆ ಕಾಂಗ್ರೆಸ್ ಮನವಿ ಮಾಡಿದೆ.
ಮಧ್ಯಪ್ರದೇಶದ ಮತದಾರರು ತಮ್ಮ ಮತವನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಬಡವರು, ರೈತರು, ಮಹಿಳೆಯರು ಮತ್ತು ಯುವಕರ ವಿಶ್ವಾಸ ಹೊಂದಿರುವ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡುವಂತೆ ಕಾಂಗ್ರೆಸ್ ಶುಕ್ರವಾರ ತನ್ನ ಮನವಿಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಉತ್ತರಖಂಡ ಸುರಂಗ ದುರಂತ: ಮನುಕುಲದ ಉಳಿವಿಗಲ್ಲದೆ ಮತ್ಯಾರಿಗಾಗಿ ಅಭಿವೃದ್ಧಿ
ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ಗೆ ಜಯ: ಖರ್ಗೆ ವಿಶ್ವಾಸ
ಮಧ್ಯ ಪ್ರದೇಶದಲ್ಲಿ ರಾಜ್ಯದ ಜನತೆ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ನಿಚ್ಚಳ ಬಹುಮತ ಸಾಧಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉದ್ಯೋಗದ ಹೊಸ ಅವಕಾಶಗಳು ಯುವಕರಿಗಾಗಿ ಕಾಯುತ್ತಿವೆ. ನೀವು ರಾಜ್ಯದ ನೇಮಕಾತಿ ಹಗರಣಗಳಿಂದ ಮುಕ್ತರಾಗುತ್ತೀರಿ. ಮಧ್ಯ ಪ್ರದೇಶವು ವಿಜಯಶಾಲಿಯಾಗುತ್ತದೆ. ನಮ್ಮ ದೇಶವು ಅಭಿವೃದ್ಧಿಗೊಳ್ಳುತ್ತದೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.